ಎಸ್.ಬಿ.ಐ ಬ್ಯಾಂಕಿನಲ್ಲಿ ಸರ್ಕಾರಿ ಯೋಜನೆಗಳ ಲಾಭ ಪಡೆದ ಪ್ರಗತಿಪರ ರೈತರು ತಮ್ಮ ಅನಿಸಿಕೆ, ಅಭಿಪ್ರಾಯ, ಬೆಳವಣಿಗೆ ಹಾಗೂ ಯೋಜನೆಯಿಂದ ತಾವು ಪಡೆದ ಲಾಭ ಕುರಿತು ಅಭಿಪ್ರಾಯ ವ್ಯಕ್ತ ಪಡಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ರೈತರು ಕೃಷಿ ಉತ್ಪಾದನೆಯೊಂದಿಗೆ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕ್ಷೇತ್ರಗಳತ್ತಲೂ ಗಮನಹರಿಸಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಪ ಪ್ರಧಾನ ವ್ಯವಸ್ಥಾಪಕ ವಿಕಾಶ್ ವಸಿಷ್ಠ ಅವರು ಕರೆ ನೀಡಿದರು.

ತುಮಕೂರು ವಿಭಾಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪೂರ್ವ ಮತ್ತು ಪಶ್ಚಿಮ ಪ್ರಾದೇಶಿಕ ಕಚೇರಿಗಳ ಸಂಯುಕ್ತ ಆಶ್ರಯದಲ್ಲಿ ನಗರದ ಸಮೃದ್ಧಿ ಗ್ರ್ಯಾಂಡ್ ಹೋಟೆಲ್‌ನಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ಅನ್ನದಾತ ಮಹೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕೃಷಿ ಸಾಲ ಯೋಜನೆಗಳ ಜಾಗೃತಿ ಹಾಗೂ ರೈತರನ್ನು ಉತ್ಪಾದಕರಿಂದ ಸಂಸ್ಕರಣಕಾರರನ್ನಾಗಿ ಪರಿವರ್ತಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ತುಮಕೂರು ಪಶ್ಚಿಮ ಪ್ರಾದೇಶಿಕ ಕಚೇರಿ ಪ್ರಾದೇಶಿಕ ವ್ಯವಸ್ಥಾಪಕ ದೊರೈರಾಜ್ ಟಿ.ಜಿ. ಹಾಗೂ ತುಮಕೂರು ಪೂರ್ವ ಪ್ರಾದೇಶಿಕ ಕಚೇರಿ ಪ್ರಾದೇಶಿಕ ವ್ಯವಸ್ಥಾಪಕ ಸುರೇಂದ್ರ ಟಿ.ಕೆ. ಅವರು ಮಾತನಾಡಿ, ಬ್ಯಾಂಕ್ ನೀಡುವ ವಿವಿಧ ಕೃಷಿ ಹಾಗೂ ಆಗ್ರೋ ಸಾಲ ಸೌಲಭ್ಯಗಳನ್ನು ರೈತರು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಹಾಗೂ ಮರು ಪಾವತಿ ಮಾಡುವುದು ಸಹ ಸಾಲ ಪಡೆದವರ ಕರ್ತವ್ಯ ಎಂದು ಸಲಹೆ ನೀಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಕುಮಾರ್ ಮಾತನಾಡಿ, ಪಿಎಂಇಜಿಪಿ ಯೋಜನೆಯ ಸಬ್ಸಿಡಿ, ಅರ್ಹತೆ, ಹಾಗೂ ಅದರ ಪ್ರಯೋಜನಗಳ ಕುರಿತು ವಿವರಿಸಿದರು.

ತೋಟಗಾರಿಕಾ ಇಲಾಖೆಯ ವಸಂತ್ ಕುಮಾರ್ ಮಾತನಾಡಿ, ಇಲಾಖೆಯಿಂದ ರೈತರಿಗೆ ಲಭ್ಯವಿರುವ ಸೌಲಭ್ಯಗಳು ಮತ್ತು ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಎಸ್.ಬಿ.ಐ ಬ್ಯಾಂಕಿನಲ್ಲಿ ಸರ್ಕಾರಿ ಯೋಜನೆಗಳ ಲಾಭ ಪಡೆದ ಪ್ರಗತಿಪರ ರೈತರು ತಮ್ಮ ಅನಿಸಿಕೆ, ಅಭಿಪ್ರಾಯ, ಬೆಳವಣಿಗೆ ಹಾಗೂ ಯೋಜನೆಯಿಂದ ತಾವು ಪಡೆದ ಲಾಭ ಕುರಿತು ಅಭಿಪ್ರಾಯ ವ್ಯಕ್ತ ಪಡಿಸಿದರು.

ನಂತರ ಕೆಲವು ಪ್ರಗತಿಪರ ಹಾಗೂ ವೈಜ್ಞಾನಿಕ ಕೃಷಿ ಅಳವಡಿಕೊಂಡು ಉನ್ನತಿ ಪಡೆದ ರೈತರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರು ಮತ್ತು ಆಗ್ರೋ ಉದ್ಯಮಿಗಳಿಗೆ ತುಮಕೂರು ಪಶ್ಚಿಮ ಮತ್ತು ಪೂರ್ವ ಪ್ರಾದೇಶಿಕ ಕಚೇರಿಯ ಅಧಿಕಾರಿಗಳಾದ ಉಮೇಶ್ ನಾಯಕ್ ಹಾಗೂ ವಿಜಯ್ ವೆಂಕಟೇಶ್ ಅವರು ಸಮಗ್ರವಾಗಿ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಕೃಷಿ–ಸಂಬಂಧಿತ ಸಾಲ ಯೋಜನೆಗಳ ವೈಶಿಷ್ಟ್ಯಗಳ ಬಗ್ಗೆ ಪರಿಚಯಿಸಿದರು.

ಈ ಸಂದರ್ಭದಲ್ಲಿ ಕೇಂದ್ರೀಯ ಕೃಷಿ ಸಾಲ ಸಂಸ್ಕಾರಣಾ ಘಟಕದ ಮುಖ್ಯ ವ್ಯವಸ್ಥಾಪಕ ಗಿರೀಶ್ ಯು. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.