ರಾಮನಗರ: ಎಐ ಸಿಟಿ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ - ಬಿಡದಿ ಟೌನ್ ಶಿಪ್ ) ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ವಾಪಸ್ ಪಡೆಯಬೇಕು ಹಾಗೂ ಭೂ ಸ್ವಾಧೀನ ರದ್ದು ಮಾಡುವಂತೆ ಒತ್ತಾಯಿಸಿ ರೈತರು ಜಾನುವಾರುಗಳ ಸಮೇತ ಬೀದಿಗಿಳಿದು ರಾಜ್ಯ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನ ಮಾಡಿದರು

ರಾಮನಗರ: ಎಐ ಸಿಟಿ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ - ಬಿಡದಿ ಟೌನ್ ಶಿಪ್ ) ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ವಾಪಸ್ ಪಡೆಯಬೇಕು ಹಾಗೂ ಭೂ ಸ್ವಾಧೀನ ರದ್ದು ಮಾಡುವಂತೆ ಒತ್ತಾಯಿಸಿ ರೈತರು ಜಾನುವಾರುಗಳ ಸಮೇತ ಬೀದಿಗಿಳಿದು ರಾಜ್ಯ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನ ಮಾಡಿದರು.

ಬಿಡದಿ ಹೋಬಳಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 26 ಗ್ರಾಮಗಳಿಂದ ನೂರಾರು ರೈತರು ಜಾನುವಾರುಗಳು, ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್ ಗಳ ಸಮೇತ ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ಚಳವಳಿಯಲ್ಲಿ ಭಾಗಿಯಾಗಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಗಳಿಂದ ಬೈರಮಂಗಲ ವೃತ್ತಕ್ಕೆ ಆಗಮಿಸಿದ ರೈತರು ಜೊತೆಯಲ್ಲಿ ತಂದಿದ್ದ ಎತ್ತಿನಗಾಡಿ ಮತ್ತು ಟ್ರ್ಯಾಕ್ಟರ್ ಗಳನ್ನು ರಸ್ತೆಯ ಎರಡು ದಿಕ್ಕುಗಳಲ್ಲಿ ನಿಲ್ಲಿಸಿ ಬಿಡದಿ - ಹಾರೋಹಳ್ಳಿ ಮಾರ್ಗದ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದರು. ಎತ್ತಿನ ಗಾಡಿಗಳಿಗೆ ಜಾನುವಾರುಗಳನ್ನು ಕಟ್ಟಿ ಹಾಕಿ ಮೇವು ನೀರು ಹಾಕಿದರು. ಎತ್ತಿನ ಗಾಡಿಗಳ ಮೇಲೆ ಹಸಿರು ಬಾವುಟಗಳು ರಾರಾಜಿಸುತ್ತಿದ್ದವು.

ವೃತ್ತದಲ್ಲಿ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅನ್ನದಾತರು, ರೈತ ಗೀತೆಗೆ ಗೌರವ ಸಲ್ಲಿಸಿದರು. ಹಸಿರು ಶಾಲನ್ನು ತಿರುವಿದ ರೈತರು ರಾಜ್ಯಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಬಾಲಕೃಷ್ಣ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಘೋಷಣೆ ಮೊಳಗಿಸಿದರು.

ಆನಂತರ ಬೈರಮಂಗಲ ವೃತ್ತದ ಮಧ್ಯದಲ್ಲಿಯೇ ಶಾಮಿಯಾನದ ಅಡಿಯಲ್ಲಿ ರೈತರು ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದರು. ಮತ್ತೊಂದೆಡೆ ಚಳವಳಿಗಾರರಿಗಾಗಿ ಸ್ಥಳದಲ್ಲಿಯೇ ಅಡುಗೆ ತಯಾರಿಸಿ, ಎಲ್ಲರು ಮಧ್ಯಾಹ್ನ ಸೇವಿಸಿದರು.

ರೈತ ಕುಟುಂಬದ ವಯೋವೃದ್ಧರ ಆದಿಯಾಗಿ ಚಿಕ್ಕ ಮಕ್ಕಳು ಸಹ ಧರಣಿಯಲ್ಲಿ ಪಾಲ್ಗೊಂಡಿದ್ದರು. ಕನ್ನಡ, ದಲಿತ, ಕಾರ್ಮಿಕ, ಸ್ತ್ರೀ ಶಕ್ತಿ ಸಂಘಗಳು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ನಮ್ಮ ಭೂಮಿ ನಮ್ಮ ಹಕ್ಕು, ಪ್ರಾಣ ಹೋದರು ಒಂದಿಂಚು ಭೂಮಿಯನ್ನು ಕೊಡುವುದಿಲ್ಲ ಎಂದು ಧರಣಿನಿರತರು ಶಪಥ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ವಾಹನ ಸಂಚಾರ ಅಸ್ತವ್ಯಸ್ಥ :

ಬಿಡದಿ - ಹಾರೋಹಳ್ಳಿ ಮಾರ್ಗ ಮಧ್ಯದಲ್ಲಿರುವ ಬೈರಮಂಗಲ ವೃತ್ತದಲ್ಲಿ ರೈತರು ಜಾನುವಾರುಗಳ ಸಮೇತ ಅನಿರ್ದಿಷ್ಠಾವಧಿ ಧರಣಿಯಲ್ಲಿ ಪಾಲ್ಗೊಂಡಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

ಚಳವಳಿ ಹಿನ್ನೆಲೆಯಲ್ಲಿ ಪೊಲೀಸರು ವಾಹನ ಸಂಚಾರದ ಮಾರ್ಗವನ್ನು ಬದಲಾಯಿಸಿದ್ದರು. ಹಾರೋಹಳ್ಳಿ ಮತ್ತು ಬಿಡದಿ ಕೈಗಾರಿಕಾ ಪ್ರದೇಶಗಳ ವಾಹನಗಳು ಸೇರಿದಂತೆ ಸಾರಿಗೆ ಬಸ್ಸುಗಳು, ಖಾಸಗಿ ವಾಹನಗಳು ಅನ್ಯ ಮಾರ್ಗಗಳಲ್ಲಿ ಸಂಚರಿಸಿದವು. ಧರಣಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

10ಕೆಆರ್ ಎಂಎನ್ 1.ಜೆಪಿಜಿ

ಬೈರಮಂಗಲ ವೃತ್ತದಲ್ಲಿ ಜಾನುವಾರುಗಳ ಸಮೇತಿ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವುದು.