ಅಣ್ಣಾಮಲೈಗೆ ಬಿಜೆಪಿಯಿಂದ ಮೋಸ: ಸಚಿವ ತಂಗಡಗಿ

| Published : Apr 06 2025, 01:45 AM IST

ಸಾರಾಂಶ

ಬಿಜೆಪಿಯಲ್ಲಿ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಅಂಥವರಿಗೆ ಅನ್ಯಾಯವಾಗಿದೆ. 75 ವರ್ಷವಾದವರಿಗೆ ಬಿಜೆಪಿಯಲ್ಲಿ ಸ್ಥಾನ ಇಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೂ 75 ವರ್ಷವಾಗಿವೆ. ಏನು ನಿರ್ಧಾರ ಮಾಡ್ತಾರೆ ನೋಡಬೇಕು.

ಕೊಪ್ಪಳ:

ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಣ್ಣಾಮಲೈ ಅವರನ್ನು ಕರೆದುಕೊಂಡು ಹೋಗಿ, ಈಗ ಬಿಜೆಪಿ ಮೋಸ ಮಾಡಿದೆ ಎಂದು ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಮ್ಮನ್ನು ಕರೆದುಕೊಂಡು ಹೋಗಿ, ಬಿಪಿ, ಶುಗರ್ ಬರುವ ಖಾತೆ ನೀಡಿದ್ದರು. ಈಗ ಅಣ್ಣಾಮಲೈ ಅವರಿಗೂ ಅದೇ ರೀತಿ ಮೋಸ ಮಾಡಿದ್ದಾರೆ. ಅಣ್ಣಾಮಲೈ ಬಾರಕೋಲು ತೆಗೆದುಕೊಂಡು ಹೊಡೆದುಕೊಂಡರೂ ಬಿಜೆಪಿ ಅವರನ್ನು ನಂಬಲಿಲ್ಲ ಎಂದು ವ್ಯಂಗವಾಡಿದರು.

ಬಿಜೆಪಿಯಲ್ಲಿ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಅಂಥವರಿಗೆ ಅನ್ಯಾಯವಾಗಿದೆ. 75 ವರ್ಷವಾದವರಿಗೆ ಬಿಜೆಪಿಯಲ್ಲಿ ಸ್ಥಾನ ಇಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೂ 75 ವರ್ಷವಾಗಿವೆ. ಏನು ನಿರ್ಧಾರ ಮಾಡ್ತಾರೆ ನೋಡೋಣ ಎಂದರು.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 11 ವರ್ಷವಾದರೂ ಜನಪರ ಕೆಲಸ ಮಾಡಿಲ್ಲ. ಅವರೇ ಹೇಳಿದ ₹ 15 ಲಕ್ಷ ನೀಡಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಸಿದ್ಧಾಂತ ಮತ್ತು ಕಾಂಗ್ರೆಸ್ ಸಿದ್ಧಾಂತ ಹೊಂದುವುದಿಲ್ಲ. ಹೀಗಾಗಿ, ಅವರು ಕಾಂಗ್ರೆಸ್ ಪಕ್ಷಕ್ಕೆ ಬರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.