ಕಾನ್‌ಬೈಲ್‌ನಲ್ಲಿ ಅನ್ನಪೂರ್ಣ ಸ್ವಸಹಾಯ ಸಂಘದ ವಾರ್ಷಿಕೋತ್ಸವ

| Published : Aug 11 2025, 12:54 AM IST

ಸಾರಾಂಶ

ಸಾಲವನ್ನು ಯಾವ ಉದ್ದೇಶಕ್ಕೆ ಪಡೆಯುತ್ತೇವೆ ಅದನ್ನು ಅದೇ ಉದ್ದೇಶಕ್ಕೆ ವಿನಿಯೋಗಿಸಿದಲ್ಲಿ ಮಾತ್ರ ವೈಯಕ್ತಿಕ ಅಭಿವೃದ್ಧಿ ಕಂಡುಕೊಳ್ಳಬಹುದು ಎಂದು ಗಣ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸಾಲವನ್ನು ಯಾವ ಉದ್ದೇಶಕ್ಕೆ ಪಡೆಯುತ್ತೇವೆ ಅದನ್ನು ಅದೇ ಉದ್ದೇಶಕ್ಕೆ ವಿನಿಯೋಗಿಸಿದಲ್ಲಿ ಮಾತ್ರ ವೈಯಕ್ತಿಕ ಅಭಿವೃದ್ಧಿ ಕಂಡುಕೊಳ್ಳಬಹುದು ಎಂದು ಅನ್ನಪೂರ್ಣ ಸ್ವಸಹಾಯ ಸಂಘದ ಪ್ರಬಂಧಕರಾದ ರಾಜಿ ಹೇಳಿದರು.

ಕಾನ್‌ಬೈಲ್‌ನಲ್ಲಿ ನಾಕೂರು ಶಿರಂಗಾಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಕಾರ್ಯಕ್ಷೇತ್ರದ ಅನ್ನಪೂರ್ಣ ಸ್ವಸಹಾಯ ಸಂಘದ 17ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಸಮಾರಂಭದಲ್ಲಿ ಶ್ರೀ ಕ್ಷೇ ಧ.ಗ್ರಾ.ಯೋ ವತಿಯಿಂದ ಸಂಘದ ಸದಸ್ಯರಿಗೆ ವಿದ್ಯಾ ನಿಧಿಯಿಂದ ಮಕ್ಕಳ ಉನ್ನತ ಶಿಕ್ಷಣ, ಸ್ವಂತಸೂರು, ವ್ಯಾಪಾರಕ್ಕೆ, ವಾಹನಗಳಿಗೆ ಸಾಲ ಸೌಲಭ್ಯ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ನೀಡುತ್ತಿದೆ. ನಾವು ಸಾಲ ಪಡೆದುಕೊಳ್ಳುವ ಮೊದಲು ಅದರ ಸಾಧಕ ಬಾಧಕಗಳ ಅರಿತುಕೊಂಡು ಅದರಂತೆ ಯೋಜನೆಗಳನ್ನು ರೂಪಿಸಿಕೊಂಡು ಸಾಲವನ್ನು ಪಡೆದುಕೊಂಡಿದ್ದೇವೆ. ಸಾಲ ಪಡೆದ ಮೊಬಲಗನ್ನು ನಾವು ಮುಂದೆಯೇ ನಿರ್ಧರಿಸಿದ ಯೋಜನೆಗೆ ವಿನಿಯೋಗಿಸಿರುವುದರಿಂದ ನಾವು ವೈಯಕ್ತಿಕ ಅಭಿವೃದ್ಧಿಯನ್ನು ಹೊಂದಲು ಈ ಯೋಜನೆಯು ಕಾರಣವಾಗಿದೆ ಎಂದು ಸಂಘದ ಸದಸ್ಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ನಮ್ಮ ಮಕ್ಕಳು ವಿದ್ಯಾ ನಿಧಿಯಿಂದ ಸಹಾಯಧನ ಸಾಲವನ್ನು ಪಡೆದು ಉನ್ನತ ಶಿಕ್ಷಣವನ್ನು ಪಡೆಯುವುದರೊಂದಿಗೆ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಪೋಷಕರ ಕೀರ್ತಿಯು ಹೆಚ್ಚಾಗಿದೆ ಎಂದು ಸಂಘದ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿಯೂ ಸಂಘವನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗುವ ಇರಾದೆಯನ್ನು ಹೊಂದಲಾಗಿದೆ. ಪ್ರತಿಯೊಬ್ಬರೂ ಯಾವುದೇ ಸಾಲಗಳನ್ನು ಮಾಡುವ ಸಂದರ್ಭ ಯೋಜನೆಗಳು ಅತೀಮುಖ್ಯ ಮರುಪಾವತಿಸುವ ರೂಪುರೇಷೆಗಳು ಹೊಂದಿ ನಿಗದಿತ ಸಮಯಕ್ಕೆ ಮರುಪಾವತಿ ಮಾಡುವುದರಿಂದ ಮಾತ್ರ ವೈಯಕ್ತಿಕ ಹಾಗೂ ಸಂಘವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ಕ್ಷೇ ಧ.ಗ್ರಾ.ಯೋ ಸೇವಾ ಪ್ರತಿನಿಧಿ ಯಶೋಧ ಬಸವರಾಜ್ ಮಾತನಾಡಿ, ಶ್ರೀ ಕ್ಷೇ ಧ.ಗ್ರಾ. ಯೋ ವತಿಯಿಂದ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ನಾವು ಯೋಜನೆಗಳನ್ನು ಪಡೆಯುವಾಗ ಮಾನದಂಡ ನಿರ್ದಿಷ್ಟವಾದ ಗುರಿಯನ್ನು ಹೊಂದಿರಬೇಕು ಮತ್ತು ಅದನ್ನು ಶ್ರದ್ಧೆಯಿಂದ ನಿರ್ವಹಿಸುವ ಮೂಲಕ ಮರುಪಾವತಿಸಲು ನಿಮಗೆ ಸಹಕಾರಿಯಾಗುತ್ತದೆ. ಯಾವುದೇ ನಿರ್ದಿಷ್ಟವಾದ ಗುರಿಯನ್ನು ಇರಿಸದೆ ಕಠಿಣ ಪರಿಶ್ರಮ ವಹಿಸದಿದ್ದರೇ, ನೀವು ಮುಂದುವರಿಯಲು ಸಾಧ್ಯವಿಲ್ಲ. ಯೋಜನೆಯ ನೀಡಲಾಗುವ ಫಲಾನುಭವಿ ಪಟ್ಟಿಯಿಂದ ವಂಚಿತಗೊಳ್ಳುವುದಲ್ಲದೆ ಇತರ ಸದಸ್ಯರಿಗೂ ಸಮಸ್ಯೆಗಳು ಎದುರಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾನ್‌ಬೈಲ್ ಒಕ್ಕೂಟದ ಉಪಾಧ್ಯಕ್ಷೆ ಗೀತಾ ವಹಿಸಿ ಮಾತನಾಡಿದರು. ಈ ಸಂದರ್ಭ ಶ್ರೀ ಕ್ಷೇ. ಧ.ಗ್ರಾ.ಯೋ. ಒಕ್ಕೂಟದ ಕಾರ್ಯದರ್ಶಿ ಪುಷ್ಪಲತಾ, ಸರಸ್ವತಿ ಹಾಗೂ ಪರಮೇಶ್ವರ, ಅನ್ನಪೂರ್ಣ ಸ್ವಸಹಾಯ ಸಂಘದ ಸದಸ್ಯರಾದ ಕೇಶವವತಿ, ಸ್ವ ಸಹಾಯ ಸಂಘದ ಸದಸ್ಯರು ಇದ್ದರು.