ಸಾರಾಂಶ
ಲಕ್ಷ್ಮೇಶ್ವರ: ಯಜ್ಞೋಪವಿತ ಸಂಸ್ಕಾರ ಎನ್ನುವದು ಪರಮ ಪವಿತ್ರ ಹಾಗೂ ವೈಜ್ಞಾನಿಕ ಹಿನ್ನೆಲೆ ಇರುವ ಸಂಸ್ಕಾರವಾಗಿದೆ. ಇದರಿಂದ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ದೃಢವಾಗಿರಲು ಸಾಧ್ಯವಾಗುತ್ತದೆ ಎಂದು ಬಾಲಚಂದ್ರಶಾಸ್ತ್ರಿ ಹುಲಮನಿ ಹೇಳಿದರು.
ಶನಿವಾರ ಪಟ್ಟಣದ ಶಂಕರಭಾರತಿ ಮಠದಲ್ಲಿ ಹಸ್ತಾಯುಕ್ತ ಷಷ್ಠಿ ತಿಥಿಯಂದು ಬ್ರಾಹ್ಮಣ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಯಜ್ಞೋಪವಿತ (ಜನಿವಾರ ಧಾರಣೆ) ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.ವೇದ, ಪುರಾಣಗಳು, ಪೂಜೆ ಪುನಸ್ಕಾರಗಳಿಗ ವೈಜ್ಞಾನಿಕ ಮತ್ತು ಧಾರ್ಮಿಕ ಮಹತ್ವವಿದೆ. ಯಾವುದೇ ಒಂದು ಧಾರ್ಮಿಕತೆಯ ಹಿಂದೆ ವೈಜ್ಞಾನಿಕತೆ ಅಡಗಿದೆ. ಈ ಯಜ್ಞೋಪವಿತ ಧಾರಣೆ ಮಾಡುವದು ಉಪಾಕರ್ಮ ಮಾಡಿದಂತೆ, ಅದಕ್ಕೆ ವರ್ಷಕ್ಕೆ ಒಂದು ಬಾರಿಯಾದರೂ ಈ ಉಪಾಕರ್ಮ ಮಾಡಿಕೊಳ್ಳುವದು ಅವಶ್ಯವಾಗಿದೆ. ಬ್ರಾಹ್ಮಣರು ನಿತ್ಯ ಗಾಯತ್ರಿ ಮಂತ್ರ ಜಪಿಸುವದನ್ನು ರೂಢಿಮಾಡಿಕೊಳ್ಳಬೇಕು. ಯಜ್ಞೋಪವಿತದ ಧಾರಣೆ ಮಾಡಿಕೊಳ್ಳುವದು ಎಲ್ಲರಿಗೂ ಮಹತ್ವವಾಗಿದ್ದು, ಧಾರಣೆ ಮಾಡಿಕೊಳ್ಳುವದು ಗಾಯತ್ರಿ ಮಂತ್ರದಿಂದಾಗುತ್ತದೆ, ಗಾಯತ್ರಿ ಮಂತ್ರ ಶಕ್ತಿ ಅಪಾರವಾಗಿದ್ದು. ಅದನ್ನು ನಿತ್ಯ ಜಪ ಮಾಡುವದರಿಂದ ಅನೇಕ ಸಂಕಷ್ಟಗಳು ದೂರವಾಗುತ್ತದೆ. ಗಾಯತ್ರಿ ಮಂತ್ರಕ್ಕಿರುವ ಶಕ್ತಿ ಜಗತ್ತಿನ ಬೇರೆ ಯಾವುದೇ ಮಂತ್ರಕ್ಕೆ ಇಲ್ಲ. ಆ ಮಂತ್ರವನ್ನು ನಿತ್ಯ ಜಪ ಮಾಡುವುದರಿಂದ ನಮ್ಮ ಪಾಪಕರ್ಮಗಳು ಕಡಿಮೆಯಾಗಿ ಆತ್ಮವಿಶ್ವಾಸ ವೃದ್ಧಿಸಲು ಸಾಧ್ಯವಾಗುತ್ತದೆ. ಗಾಯತ್ರಿ ಮಂತ್ರದಲ್ಲಿ ಪ್ರಾಣಾಯಾಮದ ಶಕ್ತಿ ಇದ್ದು, ಪ್ರಾಣಾಯಾಮ ಮಾಡುವುದರಿಂದ ಮನುಷ್ಯನ ಆಯುಷ್ಯ ವೃದ್ದಿಯಾಗುತ್ತದೆ ಎಂದು ನುಡಿದರು.ಶನಿವಾರ ಬೆಳಗ್ಗೆ ಶ್ರೀಮಠದಲ್ಲಿ ಬ್ರಾಹ್ಮಣ ಸಮಾಜದ ನೂರಾರು ವಿಪ್ರಬಾಂಧವರು ಸೇರಿ ಋಷಿ ಹೋಮ, ಉಪಾಕರ್ಮ ಹೋಮ ನೆರವೇರಿಸಿ ನಂತರ ಎಲ್ಲರಿಗೂ ಧಾರ್ಮಿಕ ಪದ್ಧತಿಯಂತೆ ಜನಿವಾರ ಧಾರಣೆ ಮಾಡಿದರು. ಸಮಾಜದ ಅಧ್ಯಕ್ಷ ಗೋಪಾಲ ಪಡ್ನಿಸ್, ವಿ.ಎಲ್.ಪೂಜಾರ, ಕಾರ್ಯದರ್ಶಿ ಅರವಿಂದ ದೇಶಪಾಂಡೆ, ಡಿ.ಪಿ.ಹೇಮಾದ್ರಿ, ಎಸ್.ಜಿ.ಹೊಂಬಳ, ಹಿರಿಯರಾದ ಕೆ.ಎಸ್.ಕುಲಕರ್ಣಿ, ನಾರಾಯಣಭಟ್ ಪುರಾಣಿಕ, ಕೃಷ್ಣ ಕುಲಕರ್ಣಿ, ಚಿಕ್ಕರಸ ಪೂಜಾರ, ಗುರುರಾಜ ಪಾಟೀಲ ಕುಲಕರ್ಣಿ, ನಾಗರಾಜ ಪೂಜಾರ, ಎ.ಪಿ. ಕುಲಕರ್ಣಿ, ವೆಂಕಟೇಶ ಸಾಹುಕಾರ, ಶ್ರೀಕಾಂತ ಪೂಜಾರ, ನರಸಿಂಹ ಭಟ್ ಜೋಶಿ ಹಾಗೂ ಕಳಸ ಗ್ರಾಮದ ಸಮಾಜದ ಹಿರಿಯರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.