ಸಂಡೂರು ಗೆದ್ದು ತವರಿಗೆ ಕೀರ್ತಿ ತಂದ ಅನ್ನಪೂರ್ಣ

| Published : Nov 24 2024, 01:45 AM IST

ಸಂಡೂರು ಗೆದ್ದು ತವರಿಗೆ ಕೀರ್ತಿ ತಂದ ಅನ್ನಪೂರ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಕಮಲಾಪುರದ ಏಳುಕೇರಿಯಲ್ಲೂ ಸಂಭ್ರಮ ಮನೆ ಮಾಡಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ಸಂಡೂರಿನಲ್ಲಿ ಕಮಲಾಪುರದ ಮನೆಮಗಳು ಶಾಸಕಿಯಾಗಿ ಗೆಲುವು ಸಾಧಿಸಿದ್ದು, ಕಮಲಾಪುರದ ಏಳುಕೇರಿಯಲ್ಲೂ ಸಂಭ್ರಮ ಮನೆ ಮಾಡಿದೆ. ಆರಂಭದಿಂದಲೂ ಸಮಾಜ ಸೇವೆ ಹಾಗೂ ರಾಜಕೀಯದತ್ತ ಒಲವು ಹೊಂದಿದ್ದ ಅನ್ನಪೂರ್ಣ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿ ವಿಧಾನಸೌಧ ಮೆಟ್ಟಿಲೇರಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯ ಕಮಲಾಪುರದ ಚಾವಡಿಕೇರಿಯ ರುದ್ರಪ್ಪ ಮತ್ತು ಕಮಲಮ್ಮ ಮಾಳಗಿ ದಂಪತಿ ಪುತ್ರಿ ಅನ್ನಪೂರ್ಣ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿ ಕಮಲಾಪುರಕ್ಕೂ ಕೀರ್ತಿ ತಂದಿದ್ದಾರೆ.

ಈ ಹಿಂದೆ ಪತಿ ಪರ ಪ್ರಚಾರ:

ಬಳ್ಳಾರಿ ಸಂಸದ ಈ.ತುಕಾರಾಂ ಅವರ ಪತ್ನಿ ಅನ್ನಪೂರ್ಣ ಈ ಹಿಂದೆ ಸಂಡೂರಿನಲ್ಲಿ ತನ್ನ ಪತಿ ಪರ ನಾಲ್ಕು ಚುನಾವಣೆಗಳಲ್ಲಿ ಪ್ರಚಾರ ನಡೆಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ, ವಿಜಯನಗರ ಜಿಲ್ಲೆ ತುಂಬ ಓಡಾಡಿದ್ದರು. ಕಮಲಾಪುರದಲ್ಲೂ ಪ್ರಚಾರ ನಡೆಸಿ ಮತಯಾಚಿಸಿದ್ದರು. ಆಗಲೇ ಅನ್ನಪೂರ್ಣ ರಾಜಕೀಯ ಪ್ರವೇಶಿಸುವ ಒಲವು ವ್ಯಕ್ತಪಡಿಸಿದ್ದರು. ಪತಿ ಲೋಕಸಭೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಸಂಡೂರಿನ ಕಾರ್ಯಕರ್ತರ ಒತ್ತಾಸೆಯಂತೆ ಅನ್ನಪೂರ್ಣ ಅವರಿಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ದೊರೆತು, ಈಗ ಭರ್ಜರಿ ಜಯ ಗಳಿಸಿದ್ದಾರೆ.

ಸಿಎಂನ ಸ್ನೇಹಿತ ರುದ್ರಪ್ಪ:

ಕಮಲಾಪುರದ ಮಾಳಗಿ ರುದ್ರಪ್ಪನವರು ಮೈಸೂರಿನಲ್ಲಿ ಬಿಎಸ್ಸಿ ಓದಿದ್ದಾರೆ. ಇವರು ಸಿದ್ದರಾಮಯ್ಯನವರ ಸ್ನೇಹಿತರಾಗಿದ್ದು, ಸಿದ್ದರಾಮಯ್ಯನವರು ಈ ಭಾಗಕ್ಕೆ ಬಂದಾಗಲೆಲ್ಲ, ರುದ್ರಪ್ಪನವರ ಬಳಿ ಸಲುಗೆಯಿಂದಲೇ ಮಾತನಾಡುತ್ತಿದ್ದರು. ಕೆಲ ವರ್ಷಗಳ ಹಿಂದೆ ರುದ್ರಪ್ಪನವರು ನಿಧನ ಹೊಂದಿದ್ದು, ಇವರು ಕೂಡ ಕಮಲಾಪುರ ಪಟ್ಟಣ ಪಂಚಾಯಿತಿ ಸದಸ್ಯರಾಗಿ ಜನ ಸೇವೆ ಮಾಡಿದ್ದಾರೆ. ತನ್ನ ಅಪ್ಪನಂತೆಯೇ ನೇರ ನುಡಿಯ ಅನ್ನಪೂರ್ಣ ಈಗ ವಿಧಾನಸೌಧ ಮೆಟ್ಟಿಲೇರಿದ್ದು, ತವರಿನಲ್ಲೂ ಸಂಭ್ರಮ ತಂದಿದ್ದಾರೆ.

ಹೊಸಪೇಟೆಯ ವಿಜಯನಗರ ಕಾಲೇಜ್‌ನಲ್ಲಿ ಪಿಯುಸಿ ಓದಿರುವ ಅನ್ನಪೂರ್ಣ ಚಿತ್ರದುರ್ಗದಲ್ಲಿ ಪದವಿ ವ್ಯಾಸಂಗ ಮಾಡಿದ್ದಾರೆ. ಸರಳತೆಯನ್ನೇ ಮೈಗೂಡಿಸಿಕೊಂಡ ಇವರು, ತಮಗೆ ಬಿಡುವಿದ್ದಾಗಲೆಲ್ಲ ತನ್ನ ಗೆಳತಿಯರೊಂದಿಗೆ ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುತ್ತಾರೆ. ಕಮಲಾಪುರದ ಏಳುಕೇರಿಗೆ ಭೇಟಿ ನೀಡಿ ತನ್ನ ಬಾಲ್ಯದ ಗೆಳೆತಿಯರೊಂದಿಗೂ ಕಾಲ ಕಳೆಯುತ್ತಾರೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಹಂಪಿ ಸ್ಮಾರಕಗಳ ವೀಕ್ಷಣೆಗೆ ತನ್ನ ಸ್ನೇಹಿತೆಯರೊಂದಿಗೆ ಆಗಮಿಸಿದ್ದರು. ಇನ್ನು ಟಿಕೆಟ್‌ ಘೋಷಣೆ ಆದ ಬಳಿಕ ಕಮಲಾಪುರಕ್ಕೆ ಆಗಮಿಸಿ, ಪೂಜೆ ಸಲ್ಲಿಸಿದ್ದರು ಎಂದು ಹೇಳುತ್ತಾರೆ ಕಮಲಾಪುರದ ಚಾವಡಿಕೇರಿಯ ಜನರು.

ತನ್ನ ಕಾಲೇಜು ದಿನಗಳಿಂದಲೇ ರಾಜಕೀಯದತ್ತ ಒಲವು ಹೊಂದಿದ್ದ ಅನ್ನಪೂರ್ಣ ಬಡವರ ಪರ ಕಾಳಜಿ ಹೊಂದಿದ್ದರು. ಸಂಡೂರು ಕ್ಷೇತ್ರದಲ್ಲಿ ಪರಿಚಿತರಾಗಿರುವ ಇವರು, ಈ ಬಾರಿ ಜಿದ್ದಾಜಿದ್ದಿನಿಂದ ಕೂಡಿದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಇತಿಹಾಸ ಬರೆದಿದ್ದಾರೆ.

ನಮ್ಮ ಸಹೋದರಿ ಅನ್ನಪೂರ್ಣ ಸಂಡೂರಿನಲ್ಲಿ ಗೆಲುವು ಸಾಧಿಸಿ ಕಮಲಾಪುರದ ಏಳುಕೇರಿ ಕೀರ್ತಿ ತಂದಿದ್ದಾರೆ. ಅಪ್ಪ ಕಂಡ ಕನಸನ್ನು ನನಸು ಮಾಡಿದ್ದಾರೆ. ಅವರು ಸಂಡೂರಿನಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲಿದ್ದಾರೆ. ಮಾವ ಸಂಸದ, ಅಕ್ಕ ಶಾಸಕಿಯಾಗಿರುವುದು ನಮಗೆ ಇನ್ನಷ್ಟು ಖುಷಿ ತಂದಿದೆ ಎನ್ನುತ್ತಾರೆ ಅನ್ನಪೂರ್ಣ ಅವರ ಸಹೋದರ ಡಾ.ವಿಶ್ವನಾಥ ಮಾಳಗಿ.