3 ತಿಂಗಳ ಅವಧಿಯಲ್ಲಿ ಕಾಶಿಯ ಅನ್ನಪೂರ್ಣೇಶ್ವರಿ ಮೂರ್ತಿ ಕೆತ್ತಿದ ಕನ್ನಡಿಗ ಗಣೇಶ ಭಟ್

| N/A | Published : Feb 01 2025, 12:01 AM IST / Updated: Feb 01 2025, 01:12 PM IST

3 ತಿಂಗಳ ಅವಧಿಯಲ್ಲಿ ಕಾಶಿಯ ಅನ್ನಪೂರ್ಣೇಶ್ವರಿ ಮೂರ್ತಿ ಕೆತ್ತಿದ ಕನ್ನಡಿಗ ಗಣೇಶ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿಯೇ ಸುಮಾರು 3 ತಿಂಗಳ ಅವಧಿಯಲ್ಲಿ ಅನ್ನಪೂರ್ಣೇಶ್ವರಿ ಮೂರ್ತಿಯನ್ನು ಗಣೇಶ ಭಟ್ಟರು ಕೆತ್ತಿದ್ದಾರೆ. ಇವರೊಬ್ಬರೇ ಮೂರ್ತಿಯನ್ನು ಕೆತ್ತಿದ್ದು ವಿಶೇಷವಾಗಿದೆ.

ಹೊನ್ನಾವರ: ಅಯೋಧ್ಯೆಯ ರಾಮಮಂದಿರಕ್ಕಾಗಿ ಬಾಲರಾಮನ ವಿಗ್ರಹವನ್ನು ಕೆತ್ತಿದ್ದ ಶಿಲ್ಪಿಗಳಲ್ಲಿ ಒಬ್ಬರಾಗಿದ್ದ ಹೊನ್ನಾವರ ತಾಲೂಕಿನ ಗಣೇಶ ಭಟ್ ಅವರು ಇದೀಗ ಕಾಶಿಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ಅನ್ನಪೂರ್ಣೇಶ್ವರಿಯ ಮೂರ್ತಿಯನ್ನು ಕೆತ್ತಿದ್ದು, ಫೆ. ೭ರಂದು ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ದೇವಿ ಅನ್ನಪೂರ್ಣೇಶ್ವರಿ ನೆಲೆ ನಿಲ್ಲಲಿದ್ದಾಳೆ.

ಶೃಂಗೇರಿ ಪೀಠದ ವಿಧುಶೇಖರ ಭಾರತೀ ಸ್ವಾಮಿಗಳ ದಿವ್ಯ ಹಸ್ತದಿಂದ ಅನ್ನಪೂರ್ಣೇಶ್ವರಿ ಮೂರ್ತಿಯ ಪ್ರತಿಷ್ಠಾಪನೆ ಆಗಲಿದೆ. ಗಣೇಶ ಭಟ್ಟರು ಕೆತ್ತಿದ ಮೂರ್ತಿಯನ್ನು ಭಾರತೀತೀರ್ಥ ಸ್ವಾಮಿಗಳು ಪೂಜಿಸಿ ಶೃಂಗೇರಿಯಿಂದ ಕಳುಹಿಸಿಕೊಟ್ಟಿದ್ದಾರೆ.ಬೆಂಗಳೂರಿನಲ್ಲಿಯೇ ಸುಮಾರು ೩ ತಿಂಗಳ ಅವಧಿಯಲ್ಲಿ ಅನ್ನಪೂರ್ಣೇಶ್ವರಿ ಮೂರ್ತಿಯನ್ನು ಗಣೇಶ ಭಟ್ಟರು ಕೆತ್ತಿದ್ದಾರೆ. ಇವರೊಬ್ಬರೇ ಮೂರ್ತಿಯನ್ನು ಕೆತ್ತಿದ್ದು ವಿಶೇಷವಾಗಿದೆ. ಮೂರ್ತಿಯನ್ನು ಕೆತ್ತಲು ಬೇಕಾದ ಶಿಲೆಯನ್ನು ಗಣೇಶ ಭಟ್ಟರೆ ಹುಡುಕಿ ತಂದಿದ್ದಾರೆ. ಕಾರ್ಕಳದ ಕೃಷ್ಣಶಿಲೆಯನ್ನು ಮೂರ್ತಿ ಕೆತ್ತನೆಗೆ ಬಳಸಲಾಗಿದೆ.

ವಿಗ್ರಹದ ವಿಶೇಷತೆ: ಕಾಶಿಯಲ್ಲಿ ನೆಲೆ ನಿಲ್ಲುತ್ತಿರುವ ಈ ವಿಗ್ರಹ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಕಾಶಿಪುರಾಧೀಶ್ವರಿಯಾದ ಅನ್ನಪೂರ್ಣೇಶ್ವರಿ ಜಟಾಮುಕುಟಧಾರಿಯಾಗಿ, ಸರ್ವಾಭರಣ ಅಲಂಕೃತೆಯಾಗಿ, ಅನ್ನದ ಪಾತ್ರೆಯನ್ನು ಹಿಡಿದು, ಹುಟ್ಟು ಹಿಡಿದ, ಭುಜದ ಮೇಲೆ ಕೇಶ ಹರಡಿರುವಂತೆ ರೂಪಿಸಿ, ವಿಗ್ರಹದ ಹಿಂದೆ ಇರುವ ಪ್ರಭಾವಳಿಯಲ್ಲೂ ಹೂವಿನ ಅಲಂಕಾರವಿದೆ.

ಎರಡು ಮುಕ್ಕಾಲು ಅಡಿ ಎತ್ತರದ ಮೂರ್ತಿಯನ್ನು ಭಾರತೀಯ ಪರಂಪರೆಗೆ ತಕ್ಕಂತೆ ನಿರ್ಮಿಸಲಾಗಿದೆ. ಅಲ್ಲದೆ ಮಂದಹಾಸದಿಂದ ಕೂಡಿರುವ ಕೊರಳಲ್ಲಿ ಮಾಂಗಲ್ಯವನ್ನು ಧರಿಸಿ ಮಂಗಲಕರವಾಗಿ ಕಂಗೊಳಿಸುತ್ತಿದ್ದಾಳೆ. ಶಾಸ್ತ್ರೋಕ್ತವಾಗಿ ನಿರ್ಮಿಸಲಾದ ಈ ವಿಗ್ರಹ ಫೆ. ೭ರಂದು ಪ್ರತಿಷ್ಠಾಪನೆಗೊಳ್ಳಲಿದೆ.

ಈ ಮೂರ್ತಿ ಕೆತ್ತನೆಯನ್ನು ಸುಮಾರು ೩ ತಿಂಗಳ ಅವಧಿಯಲ್ಲಿ ಮಾಡಿದ್ದೇನೆ. ನಮ್ಮ ರಾಜ್ಯದ ಶಿಲೆ ಕಾಶಿಯಲ್ಲಿ ವಿಗ್ರಹವಾಗಿ ನೆಲೆ ನಿಲ್ಲುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಜತೆಗೆ ಕಾಶಿಯಲ್ಲಿ ಅನ್ನಪೂರ್ಣೇಶ್ವರಿ ನೆಲೆಸುವುದು ಮತ್ತು ಅಲ್ಲಿ ನೆಲೆಯಾಗುವ ವಿಗ್ರಹವನ್ನು ಕೆತ್ತನೆ ಮಾಡಿದ್ದಕ್ಕೆ ಅತ್ಯಂತ ಸಂತೋಷವೆನಿಸುತ್ತದೆ ಎನ್ನುತ್ತಾರೆ ಮೂರ್ತಿಯ ಶಿಲ್ಪಿ ಗಣೇಶ ಭಟ್.

ಇಂದು ನಿಮ್ಮೊಂದಿಗೆ ನಾವು ಕಾರ್ಯಕ್ರಮ

ಶಿರಸಿ: ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಸುವರ್ಣ ಕೋ ಆಪರೇಟಿವ್ ಸೊಸೈಟಿಯ ಸಹಕಾರದೊಂದಿಗೆ ನಿಮ್ಮೊಂದಿಗೆ ನಾವು ಕಾರ್ಯಕ್ರಮವನ್ನು ಫೆ. ೧ರಂದು ನಗರದ ನೆಮ್ಮದಿ ರಂಗಧಾಮದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನರ ಜತೆ ಕಲೆಯನ್ನು ಸೇರಿಸಬೇಕು ಎಂಬ ಉದ್ದೇಶದಿಂದ ನಿಮ್ಮೊಂದಿಗೆ ನಾವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಬೆಳಗ್ಗೆ ೧೦ ಗಂಟೆಗೆ ಕಲಾ ಪ್ರದರ್ಶನ ಆರಂಭಗೊಳ್ಳಲಿದೆ. ೧೧ ಗಂಟೆಗೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ ಉದ್ಘಾಟಿಸುವರು. ಕರ್ನಾಟಕ ಲಲಿತಕಲಾ ಅಕಾಡಮಿ ಅಧ್ಯಕ್ಷ ಪ.ಸ. ಕುಮಾರ್ ಅಧ್ಯಕ್ಷತೆ ವಹಿಸುವರು. ಚಿತ್ರ ಕಲಾವಿದ ನಾಗರಾಜ ಹನೇನಳ್ಳಿ ಪ್ರಾತ್ಯಕ್ಷಿಕೆ ತೋರಲಿದ್ದಾರೆ. ಕಲೆ ಮತ್ತು ಸಂಸ್ಕೃತಿ ಹಾಗೂ ಕಲಾವಿದನ ಬದುಕು ವಿಷಯದ ಕುರಿತು ಸಾಹಿತಿ ಹಾಗೂ ಚಿತ್ರ ಕಲಾವಿದ ಶ್ರೀಧರ ಶೇಟ್ ವಿಮರ್ಶೆ ಮಾಡಲಿದ್ದಾರೆ. ನಂತರ ಉತ್ತರ ಕನ್ನಡ ಜಿಲ್ಲೆಯ ಗಣ್ಯ ಚಿತ್ರ ಕಲಾವಿದರು ಚಿತ್ರ ಕಲಾ ಪ್ರದರ್ಶನ ನೀಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿ.ಎಂ. ಹೆಗಡೆ ತಾರಗೋಡ, ಜಿ.ಎಂ. ಹೆಗಡೆ ಬೊಮ್ನಳ್ಳಿ, ಶಾಂತಾ ಕೊಲ್ಲೆ ಮತ್ತಿತರರು ಇದ್ದರು.