ಗೊಂದಲದ ಗೂಡಾದ ಅಣ್ಣಿಗೇರಿ ಪುರಸಭೆಯ ಸಾಮಾನ್ಯ ಸಭೆ

| Published : Mar 05 2024, 01:33 AM IST

ಸಾರಾಂಶ

ಒಂದು ವಾರ್ಡಿಗೆ ಮಂಜೂರಾದ ಅನುದಾನವನ್ನು ಸದಸ್ಯರ ಗಮನಕ್ಕೆ ತಾರದೇ ಮತ್ತೊಂದು ವಾರ್ಡಿಗೆ ನೀಡಿದ್ದರಿಂದ ಸಭೆಯಲ್ಲಿ ಗೊಂದಲವುಂಟಾಗಿತ್ತು.

ಕನ್ನಡಪ್ರಭ ವಾರ್ತೆ ಅಣ್ಣಿಗೇರಿ

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ಪುರಸಭೆ ಅಧ್ಯಕ್ಷೆ ಮಾಬುಬಿ ನವಲಗುಂದ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯು ಗೊಂದಲದ ಗೂಡಾಗಿ ಮಾರ್ಪಟ್ಟಿತು.

ಒಂದು ವಾರ್ಡಿಗೆ ಮಂಜೂರಾದ ಅನುದಾನವನ್ನು ಸದಸ್ಯರ ಗಮನಕ್ಕೆ ತಾರದೇ ಮತ್ತೊಂದು ವಾರ್ಡಿಗೆ ನೀಡಿರುವುದನ್ನು ಖಂಡಿಸಿ ಪುರಸಭೆ ಸದಸ್ಯೆಯ ಪತಿಯೋರ್ವರು ಸಾರ್ವಜನಿಕರನ್ನು ಕರೆದುಕೊಂಡು ಪಾಲಿಕೆಯಲ್ಲಿ ನಡೆಯುತ್ತಿದ್ದ ಸಭೆಗೆ ನುಗ್ಗಲು ಯತ್ನಿಸಿದ ವೇಳೆ ವಾಗ್ವಾದ ನಡೆದು ಗೊಂದಲದ ವಾತಾವರಣ ನಿರ್ಮಾಣವಾಯಿತು. ಗದ್ದಲವು ವಿಕೋಪಕ್ಕೆ ತೆರಳಿ ಪೊಲೀಸ್‌ ಠಾಣೆಯ ಮೆಟ್ಟಿಲೇರುವಂತೆಯಾತಾಯಿತು. ಕೊನೆಗೆ ಸದಸ್ಯರ ಹಾಗೂ ಸಮಾಜದ ಹಿರಿಯರ ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.

ವಿವಿಧ ಯೋಜನೆಯ ಅಡಿ ಕರೆಯಲಾಗದ ಟೆಂಡರ್ ದರಗಳಿಗೆ ಅನುಮೋದನೆ ನೀಡುವುದು ಹಾಗೂ ವಿವಿಧ ಯೋಜನೆ ಅಡಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಸ್ಥಳ ಬದಲಾವಣೆ ಚರ್ಚೆ ಬಂದ ವೇಳೆ ಸದಸ್ಯೆ ರಜಿಯಾ ಬೇಗಮ್ ರೊಕ್ಕದಕಟ್ಟಿ ನಮ್ಮ ವಾರ್ಡಿನಲ್ಲಿ ಉದ್ಯಾನ ನಿರ್ಮಾಣ ಮಾಡಲು ಅನುಮೋದನೆ ನೀಡಲಾಗಿತ್ತು. ಶನಿವಾರ ಉದ್ಯಾನದ ಭೂಮಿಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ನಮ್ಮ ವಾರ್ಡಿನ ಉದ್ಯಾನ ನಿರ್ಮಾಣಕ್ಕೆ ಬಂದಿರುವ ಅನುದಾನವನ್ನು ನಮ್ಮ ಗಮನಕ್ಕೆ ತಾರದೇ ಬೇರೆ ವಾರ್ಡಿಗೆ ಏಕೆ ಸ್ಥಳಾಂತರಿಸಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಇನ್ನೋರ್ವ ಸದಸ್ಯ ಈಶ್ವರ್ ಕಾಳಪ್ಪನವರ ಮಾತನಾಡಿ, 11ನೇ ವಾರ್ಡಿನಲ್ಲಿರುವ ಉರ್ದು ಶಾಲೆ ನಿರ್ಮಾಣಕ್ಕೆ ಅನುದಾನ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಮಾಜಿ ಅಧ್ಯಕ್ಷೆ ರಜಿಯಾ ಬೇಗಂ ಅವರ ಪತಿ ಹಸನಸಾಬ ರೊಕುದಕಟ್ಟೆ ಅವರು ಅಮೃತ್ ನಗರದ ಸಾರ್ವಜನಿಕರನ್ನು ಕರೆದುಕೊಂಡು ಬಂದು ಸಭೆಯೊಳಗೆ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಪುರಸಭೆಯ ಆರೋಗ್ಯ ವ್ಯವಸ್ಥಾಪಕ ಅಶೋಕ ದೊಡ್ಡಮನಿ ತಡೆಯಲು ಯತ್ನಿಸಿದ ವೇಳೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಂತೆ ಸಭೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.

ಪೌರಕಾರ್ಮಿಕರ ಸಂಘದ ಅಧ್ಯಕ್ಷ ಶಾನು ನಾಶಿಪುಡಿ ಮಾತನಾಡಿ, ಈ ರೀತಿ ಮಾಡುವುದು ಸರಿ ಅಲ್ಲ ಎಂದು ಕೇಳಲು ಹೋದರು. ಆಗ ವಾರ್ಡ್‌ನ ನಿವಾಸಿಗಳು ನಮ್ಮ ವಾಡಿಗೆ ಬಂದ ಅನುದಾನವನ್ನು ಬೇರೆ ವಾಡಿಗೆ ಹೇಗೆ ಸ್ಥಳಾಂತರ ಮಾಡಿದ್ದೀರಿ. ಇದನ್ನು ಕೇಳಲು ಬಂದರೆ ನಮ್ಮ ಮೇಲೆಯೇ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪರಸ್ಪರ ವಾಗ್ವಾದ ನಡೆಯಿತು. ಇದರಿಂದ ಕೋಪಗೊಂಡ ಶಾನು ನಾಶಿಪುಡಿ ಪೌರಕಾರ್ಮಿಕರೊಂದಿಗೆ ಪೊಲೀಸ್‌ ಠಾಣೆಗೆ ತೆರಳಿ ಪ್ರತಿಭಟನಾಕಾರರ ವಿರುದ್ಧ ದೂರು ಕೊಡಲು ಮುಂದಾದರು.

ಈ ವೇಳೆ ದಲಿತ ಮುಖಂಡರು ಆಗಮಿಸಿ ಇದು ಪೌರಕಾರ್ಮಿಕರಿಗೆ ಮಾಡಿರುವ ಅನ್ಯಾಯವಾಗಿದ್ದು, ಇದನ್ನು ಖಂಡಿಸುತ್ತೇವೆ. ನಮ್ಮಲ್ಲಿಯೇ ಕುಳಿತು ಸಮಸ್ಯೆ ಅತ್ಯರ್ಥಪಡಿಸಿಕೊಳ್ಳೋಣ ಠಾಣೆಯಲ್ಲಿ ದೂರು ಸಲ್ಲಿಸುವುದು ಬೇಡ ಎಂದು ಮನವಿ ಮಾಡಿ ಕೊನೆಗೆ ಠಾಣೆಯಲ್ಲಿ ರಾಜಿ ಸಂಧಾನ ಮಾಡಿಸಿದ ಘಟನೆ ನಡೆಯಿತು.

ಈ ಸಭೆಯಲ್ಲಿ ಉಪಾಧ್ಯಕ್ಷೆ ಜಯಲಕ್ಷ್ಮಿ ಜಕರೆಡ್ಡಿ, ಸಾಯಿ ಸಮಿತಿ ಅಧ್ಯಕ್ಷ ಅಮೃತ್ ಮೀಸೆ, ಶಿವಪ್ರಸಾದ್ ಸೇರಿದಂತೆ ಪುರಸಭೆ ಸದಸ್ಯರು ಇದ್ದರು.