ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲುಶಿವರಾತ್ರಿ ಹಬ್ಬವನ್ನು ಶುಕ್ರವಾರ ಇಲ್ಲಿನ ವಿವಿಧ ದೇವಾಲಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಇಲ್ಲಿಗೆ ಸಮೀಪದ ಪೇರೂರು ಗ್ರಾಮದ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಶಿವರಾತ್ರಿ ದಿನ ವಾರ್ಷಿಕೋತ್ಸವ ನಡೆಯಿತು. ಉತ್ಸವದ ಅಂಗವಾಗಿ ವಿಶೇಷ ಪೂಜೆ, ರುದ್ರಾಭಿಷೇಕ ಮತ್ತು ಮಹಾಪೂಜೆ ಜರುಗಿತು. ಭಕ್ತರು ಬೆಳಗ್ಗೆಯಿಂದಲೇ ದೇವಾಲಯಕ್ಕೆ ತೆರಳಿ ತಮ್ಮ ಇಷ್ಟಾರ್ಥ ಸಿದ್ಧಿಗೆ ಪೂಜೆ ಸಲ್ಲಿಸಿದರು.ಮಧ್ಯಾಹ್ನ ಭಕ್ತರಿಂದ ತುಲಾಭಾರ ಸೇವೆಗಳನ್ನು ನಡೆಸಲಾಯಿತು. ಪೂಜೆಯ ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆಯ ನಂತರ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ಉತ್ಸವದ ಅಂಗವಾಗಿ ವಿಶೇಷವಾಗಿ ದೇವಾಲಯದ ಆವರಣದಲ್ಲಿ ಗ್ರಾಮಸ್ಥರಿಂದ ಬೊಳಕಾಟ್ ಪ್ರದರ್ಶನ ಏರ್ಪಡಿಸಲಾಯಿತು. ಬಳಿಕ ಇಗ್ಗುತ್ತಪ್ಪ ದೇವರ ಉತ್ಸವ ಜರುಗಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರ ನೃತ್ಯಬಲಿ ವೀಕ್ಷಿಸಿದರು. ದೇವಾಲಯದ ಅರ್ಚಕ ಗಿರೀಶ್ ನೇತೃತ್ವದಲ್ಲಿ ತಂತ್ರಿಗಳಾಗಿ ಗೋಪಾಲಕೃಷ್ಣ ಕೆದಿಲಾಯ ರುದ್ರಾಭಿಷೇಕ ಸೇರಿದಂತೆ ಇನ್ನಿತರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿಕೊಟ್ಟರು.
ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮಚ್ಚುರ ರವೀಂದ್ರ ಮಾತನಾಡಿ, ದೇವಸ್ಥಾನದಲ್ಲಿ ಪ್ರತಿವರ್ಷ ಶಿವರಾತ್ರಿಯಂದು ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ. ಬೆಳಗ್ಗೆ 6 ಗಂಟೆಯಿಂದ ಆರಂಭಗೊಂಡು ದಿನಪೂರ್ತಿ ಕಾರ್ಯಕ್ರಮ ನಡೆದು ತುಲಾಭಾರ ಸೇವೆ ನಡೆಸಲಾಯಿತು. ಈ ವರ್ಷ 21 ತುಲಾಭಾರ ಸೇವೆಗಳು, ರುದ್ರಾಭಿಷೇಕ, ಮಹಾಪೂಜೆ, ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ತುಲಾಭಾರ ಸೇವೆ ಹಾಗೂ ಹರಕೆ ಸಲ್ಲಿಸಿದವರಿಗೆ ತಕ್ಕ ಮುಖ್ಯಸ್ಥರು ರಾತ್ರಿ ಮಂತ್ರಾಕ್ಷತೆಯನ್ನು ವಿತರಿಸುವುದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಗುತ್ತದೆ ಎಂದರು.ಕಾರ್ಯದರ್ಶಿ ಅಪ್ಪಚ್ಚಿರ ಪೊನ್ನಪ್ಪ, ದೇವತಕ್ಕರಾದ ಮಚ್ಚುರ ತಮ್ಮಯ್ಯ, ನಾಡುತಕ್ಕರಾದ ಕೆ.ಪಿ. ಪೊನ್ನಮಯ್ಯ, ತೋಳಂಡ ದೇವಯ್ಯ, ಮೇಕ್ ಮಣಿಯಂಡ ಈರಪ್ಪ, ಬೊಟ್ಟೋಳಂಡ ಪೂವಯ್ಯ, ಪೊನ್ನಣಿ, ಆನೆಯಡ ರಾಮಯ್ಯ, ತಾಪಂಡ ವರುಣ್, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಗ್ರಾಮದ ಪ್ರಮುಖರು ಹಾಗೂ ಊರ ಮತ್ತು ಪರವೂರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.