ಪಿಯು ಹಂತದಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದ ಜೀವನಕ್ಕೆ ತಿರುವು

| Published : Jan 11 2025, 12:45 AM IST

ಸಾರಾಂಶ

ಪ್ರತಿಯೊಬ್ಬರೂ ಪೋಷಕರು ಕಷ್ಟ ಹಾಗೂ ಗುರುಗಳ ಪರಿಶ್ರಮವನ್ನು ಗಮನದಲ್ಲಿಟ್ಟುಕೊಂಡು ಆತ್ಮವಿಶ್ವಾಸದಿಂದ ಅಧ್ಯಯನ ಮಾಡಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಪದವಿಪೂರ್ವ ಹಂತದಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದಲೇ ಜೀವನಕ್ಕೆ ತಿರುವು ಸಿಗುವುದರಿಂದ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು ಎಂದು ವಿಧಾನ ಪರಿಷತ್‌ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಹೇಳಿದರು.

ಮೈಸೂರಿನ ಲಲಿತಾದ್ರಿನಗರ ವರ್ತುಲ ರಸ್ತೆಯಲ್ಲಿರುವ ಮಾರ್ವೆಲ್‌ ಪಬ್ಲಿಕ್‌ ಸ್ಕೂಲ್‌ ಮತ್ತು ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಈ ವಯಸ್ಸಿನಲ್ಲಿ ಆಲೋಚನೆ ಮತ್ತು ಚಿಂತನೆ ಸರಿಯಾಗಿದ್ದಲ್ಲಿ ಉತ್ತಮ ಜೀವನ ನಡೆಸಬಹುದು. ಸಮಾಜಮುಖಿಯಾಗಿ ಬೆಳೆಯಬಹುದು ಎಂದರು.

ಈ ಹಂತದಲ್ಲಿ ದೇಶ ಹಾಗೂ ನಾಡಪ್ರೇಮಿಯಾಗಿ ಸರಿಯಾಗಿ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಂಡಲ್ಲಿ ಬದುಕು ಬಂಗಾರವಾಗುತ್ತದೆ. ಸಮಾಜಕ್ಕೆ ದೊಡ್ಡ ಸೇವೆ ಸಲ್ಲಿಸುವ ಅವಕಾಶ ಸಿಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪೋಷಕರು ಕಷ್ಟ ಹಾಗೂ ಗುರುಗಳ ಪರಿಶ್ರಮವನ್ನು ಗಮನದಲ್ಲಿಟ್ಟುಕೊಂಡು ಆತ್ಮವಿಶ್ವಾಸದಿಂದ ಅಧ್ಯಯನ ಮಾಡಬೇಕು ಎಂದು ಅವರು ಕರೆ ನೀಡಿದರು.

ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಬುದ್ಧ, ಬಸವ, ಅಂಬೇಡ್ಕರ್‌, ಕುವೆಂಪು, ಅಬ್ದುಲ್‌ ಕಲಾಂ ಮೊದಲಾದ ಮಹನೀಯರ ಜೀವನ ಸಂದೇಶಗಳನ್ನು ತಿಳಿಸಿದ ಅವರು, ಕುವೆಂಪು ಅವರಂತೆ ವೈಚಾರಿಕತೆ ಬೆಳೆಸಿಕೊಳ್ಳಿ. ಮೂಢನಂಬಿಕೆ, ಕಂದಾಚಾರ, ಜಾತಿ, ಧರ್ಮ ಬಿಡಿ. ವಿಶ್ವಮಾನವರಾಗಿ, ಅಂಬೇಡ್ಕ್ರ್‌ ಅವರ ಸಂವಿಧಾನದ ಆಶಯದಂತೆ ಸಾಮರಸ್ಯ, ಸಮಸಮಾಜದ ಕಡೆ ಗಮನ ನೀಡಿ. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಪ್ರಸ್ತುತ ಸ್ಪರ್ಧಾತ್ಮಕ ಜೊತೆಗೆ ಅವಕಾಶಗಳ ಯುಗ. ಚೆನ್ನಾಗಿ ವಿದ್ಯಾಭ್ಯಾಸ ಮಾಡಿದರೆ ನಿಮಗೆ ಬೇಕಾದ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಜಯರಂಗ ಚಾರಿಟಬಲ್‌ ಟ್ರಸ್ಟ್ ಕಾರ್ಯದರ್ಶಿ ಪ್ರೊ.ಗಿಣಿಸ್ವಾಮಿ ಮಾತನಾಡಿ, ಅಬ್ದುಲ್‌ ಕಲಾಂ, ಶ್ರೀನಿವಾಸ ರಾಮಾನುಜನ್‌ ಅವರಂತೆ ಕಠಿಣ ಪರಿಶ್ತಮದಿಂದ ಓದಿ. ಗುರುಗಳು ಹೇಳಿದ್ದು ಅರ್ಥವಾಗದಿದ್ದರೆ ಪ್ರಶ್ನೆ ಮಾಡಿ ಎಂದರು.

ಸಂಸ್ಥೆಯ ಖಜಾಂಚಿ ರಾಜಣ್ಣ ಅತಿಥಿಯಾಗಿದ್ದರು. ಪ್ರಾಂಶುಪಾಲೆ ವೈ.ಸಿ. ಮಾನಸ ವೇದಿಕೆಯಲ್ಲಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ಡಾ.ಮಂಟೇಲಿಂಗು, ಯೋಗೀಶ್‌, ಭೈರಲಿಂಗೇಗೌಡ, ಧಾಮಸ್‌ ಗುಣಶೇಖರನ್‌, ವಿಜಯಕುಮಾರ್‌, ನಿವೃತ್ತ ಪ್ರಾಧ್ಯಾಪಕ ಡಾ.ಶಂಕರೇಗೌಡ ಮೊದಲಾದವರು ಪಾಲ್ಗೊಂಡಿದ್ದರು.

ಶ್ರಾವ್ಯ, ನೇಹನಿಧಿ ನಿರೂಪಿಸಿದರು. ದಿಶಾ ಪ್ರಾರ್ಥಿಸಿದರು. ಉತ್ತಪ್ಪ ಸ್ವಾಗತಿಸಿದರು. ಡಿ,ಎಸ್‌. ಸೌಮ್ಯಾ ವಾರ್ಷಿಕ ವರದಿ ಓದಿದರು. ಮನ್ವಿತ್‌ ಗೌಡ ವಂದಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.