ಅರೆ ಸರ್ಕಾರಿ ಸಂಸ್ಥೆಗಳ, ನಿಗಮಗಳ ನಿವೃತ್ತ ಇಪಿಎಸ್ 95 ನೌಕರರಿಗೆ ಪಿಂಚಣಿ ಕನಿಷ್ಠ 7500 ಹೆಚ್ಚಳ ಮಾಡುವುದು ಸಹಿತ ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ ರಾಷ್ಟ್ರೀಯ ಸಂಘರ್ಷ ಸಮಿತಿ (ಎನ್‌ಎಸಿ)ಯು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೋರಾಟ ಇನ್ನಷ್ಟೂ ತೀವ್ರಗೊಳಿಸಿದಲ್ಲಿ ಬೇಡಿಕೆ ಈಡೇರಲು ಸಾಧ್ಯ ಎಂದು ರಾಷ್ಟ್ರೀಯ ಮುಖ್ಯ ಸಂಯೋಜಕ ರಮಾಕಾಂತ ನರಗುಂದ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಅರೆ ಸರ್ಕಾರಿ ಸಂಸ್ಥೆಗಳ, ನಿಗಮಗಳ ನಿವೃತ್ತ ಇಪಿಎಸ್ 95 ನೌಕರರಿಗೆ ಪಿಂಚಣಿ ಕನಿಷ್ಠ ₹7500 ಹೆಚ್ಚಳ ಮಾಡುವುದು ಸಹಿತ ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ ರಾಷ್ಟ್ರೀಯ ಸಂಘರ್ಷ ಸಮಿತಿ (ಎನ್‌ಎಸಿ)ಯು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೋರಾಟ ಇನ್ನಷ್ಟೂ ತೀವ್ರಗೊಳಿಸಿದಲ್ಲಿ ಬೇಡಿಕೆ ಈಡೇರಲು ಸಾಧ್ಯ ಎಂದು ರಾಷ್ಟ್ರೀಯ ಮುಖ್ಯ ಸಂಯೋಜಕ ರಮಾಕಾಂತ ನರಗುಂದ ಅಭಿಪ್ರಾಯಪಟ್ಟರು.ಇಲ್ಲಿನ ಸ್ವಾಮಿ ವಿವೇಕಾನಂದ ನಗರ (ಎಲ್.ಐ.ಸಿ ಆಫೀಸ್ ಹತ್ತಿರ) ಆಂಜನೇಯ-ತಾಯಮ್ಮ ದೇವಸ್ಥಾನದ ಕಲ್ಯಾಣ ಮಂಟಪ ಆವರಣದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ (ಎನ್.ಎ.ಸಿ.) ಜಿಲ್ಲಾ ಘಟಕದ ಆಶ್ರಯದಲ್ಲಿ ಭಾನುವಾರ ನಡೆದ ಪಿಂಚಣಿದಾರರ ಜಿಲ್ಲಾ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಈ ಹಿಂದೆ ಪಿ.ವಿ. ನರಸಿಂಹರಾವ್ ಸರ್ಕಾರ ನೌಕರರಿಗೆ ಇಪಿಎಸ್-95 ಪರಿಚಯಿಸಿದರು. ಅದರಲ್ಲಿ ನೌಕರರಿಗೆ ನಿವೃತ್ತಿ ನಂತರ ಅನೇಕ ಸವಲತ್ತು ಕೊಡುವುದಾಗಿ ಪ್ರಕಟಿಸಲಾಗಿತ್ತು. ಅಂದಿನ ಸೀಮಿತ ಬದುಕಿನ ಕಾರಣದಿಂದ ನೌಕರರಾದ ನಾವುಗಳು ಸಂಘಟಿತರಾಗದೇ ಇದ್ದುದರಿಂದ ಮತ್ತು ಹೊಸ ಕಾಯ್ದೆಯ ಕುರಿತು ಅರಿತುಕೊಳ್ಳಲು 20 ವರ್ಷ ಬೇಕಾಯಿತು. ನಂತರ 2014 ರಲ್ಲಿ ಸಂಘಟಿತರಾದ ಒಗ್ಗೂಡಲು ಮತ್ತೆ 5 ವರ್ಷಗಳು ಕಳೆದವು ಎಂದು ಮೆಲುಕು ಹಾಕಿದರು.ಇದೀಗ 2021 ರಲ್ಲಿ ಪ್ರಧಾನಿ ಮೋದಿ ಅವರಿಗೆ ಭೇಟಿ ಮಾಡಿದ ನಂತರ ಅವರು ಭರವಸೆ ನೀಡಿದ್ದರಾದರೂ ಇದುವರೆಗೆ ಬೇಡಿಕೆಗಳು ಈಡೇರಿಲ್ಲ. 2025 ರಲ್ಲಿ ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್ ಮಾಂಡವೀಯ ಅವರನ್ನು ಭೇಟಿಯಾದ ನಂತರ ಅವರು ಸಹ ಭರವಸೆ ನೀಡಿದ್ದು, ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿವೆ, ಈಡೇರಿಸಲು ಎಲ್ಲ ಪ್ರಯತ್ನ ಮಾಡುವುದಾಗಿ ತಿಳಿಸಿದ್ದರು ಎಂದು ಹೇಳಿದರು.
ಸಮಿತಿ ಜಿಲ್ಲಾದ್ಯಕ್ಷ ಸಿದ್ದನಗೌಡ ಚೆನ್ನೂರು ಮಾತನಾಡಿ, ಸುಪ್ರೀಂಕೋರ್ಟ್ ನಮ್ಮ ಪರ ತೀರ್ಪು ನೀಡಿದ್ದು, ನಿವೃತ್ತರ ಪಿಂಚಣಿ ಹೆಚ್ಚಳ ಮಾಡಲು ಎರಡು-ಮೂರು ಸಾರಿ ಆದೇಶವನ್ನೂ ನೀಡಿದೆ. ಆದರೆ ಇದುವರೆಗೆ ನಮ್ಮ ನಿವೃತ್ತರ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ. ಬೇಡಿಕೆ ಈಡೇರುವವರೆಗೆ ಹೋರಾಟ ನಡೆಸಬೇಕಿದೆ ಎಂದು ಕರೆ ನೀಡಿದರು.ಎನ್‌ಎಸಿ ಜಿಲ್ಲಾ ಉಪಾಧ್ಯಕ್ಷ ಕೆ.ಟಿ. ಜಾಧವ ಪ್ರಸ್ತಾವನೆಗೈದು, ಬಹುದಿನಗಳಿಂದಲೂ ₹500 ರಿಂದ ₹1000 ಮಾತ್ರ ಪಿಂಚಣಿ ಬರುತ್ತಿದೆ. ಇವತ್ತಿನ ಕಾಲದಲ್ಲಿ ಬದುಕುವುದು ಕಷ್ಟವಾಗಿ ನಿವೃತ್ತರು ಅನಾಥಾಶ್ರಮ ಸೇರುವ ಪರಿಸ್ಥಿತಿ ಬಂದಿದೆ. ಇಳಿವಯಸ್ಸಿನಲ್ಲಿ ಸ್ವಾವಲಂಬಿ ಜೀವನ ನಡೆಸುವಂತಾಗಲು ಇಪಿಎಸ್-95 ನೌಕರರ ಪಿಂಚಣಿ ಹೆಚ್ಚಳ, ಬಿಪಿಎಲ್ ಕಾರ್ಡ ಸವಲತ್ತು, ವೈದ್ಯಕೀಯ ಸವಲತ್ತು, ತುಟ್ಟಿಭತ್ಯೆಗಳು ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಶಹಾಪೂರದ ಬಸವರಾಜ ದೇಸಾಯಿ, ವೆಂಕೋಬ ಭಂಡಾರಿ, ಸುರಪುರದ ಕಲ್ಲಣ್ಣ ಪ್ಯಾಟಿ, ಬಸವರಾಜ ಮಂಗಿಹಾಳ, ಗುರುಮಠಕಲ್ ನ ಗಂಗಯ್ಯ ಸ್ವಾಮಿ, ರಾಮರಾವ ಕುಲಕರ್ಣಿ, ಸಂಗನಗೌಡ ಬಾಗೇವಾಡಿ, ರಾಯಚೂರಿನ ಭೀಮಸೇನ ರಾವ್, ಪರಶುರಾಮ ಇನ್ನಿತರರು ಇದ್ದರು. ಹೊನ್ನಪ್ಪ ಸ್ವಾಗತಿಸಿದರು. ದೇವಿಂದ್ರಪ್ಪ ಮ್ಯಾಗೇರಿ ನಿರೂಪಿಸಿ ವಂದಿಸಿದರು.ಸಚಿವರು ಗಮನ ನೀಡಿ: ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಶೊಭಾ ಕರದ್ಲಾಜೆ ಅವರೂ ಇಪಿಎಸ್-95 ಪಿಂಚಣಿದಾರರ ಬೇಡಿಕೆ ಈಡೇರಿಸುವತ್ತ ಗಮನ ನೀಡಬೇಕು ಎಂದು ರಮಾಕಾಂತ ನರಗುಂದ ಆಗ್ರಹಿಸಿದರು. ರಾಜ್ಯ ಮುಖಂಡ ಶಂಕರ ಕುಲಕರ್ಣಿ, ರವಿಗೌಡ ಪಾಟೀಲ್, ಹೊನ್ನಪ್ಪ ವಡಗೇರಿ ಮಾತನಾಡಿದರು. ಸಮಾವೇಶಕ್ಕೆ ವಾಡಿ, ಶಹಾಬಾದ, ಸೇಡಂ ಸಿಮೆಂಟ್ ಫ್ಯಾಕ್ಟರಿಗಳ ನಿವೃತ್ತ ನೌಕರರು ರಾಯಚೂರು, ಕಲ್ಬುರ್ಗಿ ಕೆಎಸ್‌ಆರ್‌ಟಿಸಿ ನಿವೃತ್ತರು ಸೇರಿ ೩೦೦ ಕ್ಕೂ ಹೆಚ್ಚು ಪಿಂಚಣಿದಾರರು ಭಾಗಿಯಾಗಿದ್ದರು.