ರೈತರ ಉಳಿವಿಗಾಗಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿ: ಯಶವಂತ್

| Published : Aug 31 2024, 01:44 AM IST

ಸಾರಾಂಶ

Announce minimum support price for crops for farmers' survival: Yashwant

- ರಾಜ್ಯದಲ್ಲಿ 2023ರ ಏಪ್ರಿಲ್‌ನಿಂದ 2024ರ ಜೂನ್‌ವರೆಗೆ 1,182 ರೈತರು ಆತ್ಮಹತ್ಯೆ

-----

ಕನ್ನಡಪ್ರಭ ವಾರ್ತೆ ಶಹಾಪುರ

ರಾಜ್ಯದಲ್ಲಿ ಸತತ ಸುರಿದ ಮಳೆಯಿಂದಾಗಿ ಬೆಳೆ ಹಾಳಾಗಿವೆ. ರೈತರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕೂಡ ಕುಸಿತವಾಗಿದೆ. ರೈತರು ಸಾಲ ಬಾಧೆಯಲ್ಲಿದ್ದು, ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತರ ಉಳಿವಿಗಾಗಿ ತಕ್ಷಣದಿಂದಲೇ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ನಗರದ ರೈತ ಸಂಘದ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಸಮಿತಿ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿ, 2023ರ ಏಪ್ರಿಲ್‌ನಿಂದ 2024ರ ಜೂನ್‌ವರೆಗೆ ರಾಜ್ಯದಲ್ಲಿ 1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಆತಂಕವನ್ನುಂಟು ಮಾಡಿದೆ. ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೇರ ಹೊಣೆಯಾಗಿವೆ ಎಂದು ಆರೋಪಿಸಿದರು.

ಕಳೆದ ಅವಧಿಯ ಬರಗಾಲದ ಸಂದರ್ಭದಲ್ಲಿ ಸರ್ಕಾರಗಳು ಜಂಟಿಯಾಗಿ ಖಾಸಗಿ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳದ್ದೂ ಸೇರಿ ಎಲ್ಲ ಸಾಲ ಮನ್ನಾ ಮಾಡಲು ಕ್ರಮವಹಿಸಬೇಕಿತ್ತು. ಸಾಲ ಕೊಟ್ಟು ಒತ್ತಡ ನೀಡಿದವರ ವಿರುದ್ಧ ಗಂಭೀರ ಕ್ರಮಕೈಗೊಂಡಿದ್ದರೆ ಈ ಆತ್ಮಹತ್ಯೆಗಳನ್ನು ತಡೆಯಬಹುದಿತ್ತು ಎಂದರು.

ಕೇರಳ ರಾಜ್ಯದಲ್ಲಿ ಜಾರಿ ಇರುವಂತೆ ಋಣಮುಕ್ತ ಕಾಯ್ದೆ ಕರ್ನಾಟಕ ರಾಜ್ಯದಲ್ಲಿ ಕೂಡ ಜಾರಿಯಾಗಬೇಕು. ರೈತರ ಬಹುದಿನಗಳ ಬೇಡಿಕೆಯಾಗಿರುವ ಕೃಷಿ ತಜ್ಞರಾಗಿರುವ ಡಾ. ಸ್ವಾಮಿನಾಥನ್ ವರದಿ ಜಾರಿಯಾಗಬೇಕು. ತಕ್ಷಣ ಆತ್ಮಹತ್ಯೆ ತಡೆಗೆ ರೈತರನ್ನು, ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ಕಮಿಟಿ ರಚಿಸಬೇಕು. ಈ ದಿಶೆಯಲ್ಲಿ ರೈತ ಸಂಘದವರು ಸೈನಿಕರ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ ಮಾತನಾಡಿ, ರೈತರ ನೆರವಿಗೆ ಧಾವಿಸುವುದನ್ನು ಬಿಟ್ಟು ಪರಸ್ಪರ ಭ್ರಷ್ಟಾಚಾರ ಆರೋಪ, ಪ್ರತ್ಯಾರೋಪ ಮಾಡುತ್ತ ಕಾಲಹರಣ ಮಾಡುತ್ತಿರುವ ರಾಜಕಾರಣಿಗಳಿಂದ ಜನತೆಗೆ ಭಾರಿ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದರು.

ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಸಾಗರ ಮಾತನಾಡಿ, ರೈತರ ವಿವಿಧ ಬೇಡಿಕೆಗಳಿಗಾಗಿ ಸೆ.9ರಂದು ಯಾದಗಿರಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಬೃಹತ್ ಪ್ರತಿಭಟನಾ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ರೈತ ಮುಖಂಡ ಧರ್ಮಣ್ಣ ದೊರೆ, ಭೀಮಣ್ಣ ಟಪ್ಪೆದಾರ, ರಾಮಯ್ಯ ಆಲ್ಹಾಳ, ವೆಂಕಟೇಶ್ ದೋರನಹಳ್ಳಿ , ಬಸನಗೌಡ ಮಾಲಿ ಪಾಟೀಲ್, ಭೀಮಣ್ಣ ವೆಂಕಟಗಿರಿ, ದೇವು ಭಾಗವಹಿಸಿದ್ದರು.

------

30ವೈಡಿಆರ್13: ಶಹಾಪುರ ನಗರದ ಪ್ರಾಂತ ರೈತ ಸಂಘದ ಕಚೇರಿಯಲ್ಲಿ ಜಿಲ್ಲಾ ಸಮಿತಿ ಸಭೆ ನಡೆಯಿತು.