ಕಬ್ಬಿನ ದರ ಘೋಷಿಸಿ ಸಕ್ಕರೆ ಕಾರ್ಖಾನೆ ಆರಂಭಿಸಿ

| Published : Dec 13 2024, 12:46 AM IST

ಸಾರಾಂಶ

ಕ್ಷೇತ್ರದ ಶಾಸಕ ವಿಠ್ಠಲ ಹಲಗೇಕರ ಅಧ್ಯಕ್ಷರಾಗಿರುವ ಲೈಲಾ ಶುಗರ್ಸ್ ಕಾರ್ಖಾನೆ ಕೂಡಲೇ ಕಬ್ಬಿನ ದರ ಘೋಷಿಸಿಬೇಕು. ನಂತರವಷ್ಟೇ ಕಾರ್ಖಾನೆಯನ್ನು ಆರಂಭಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಶಹರ ಘಟಕದ ಅಧ್ಯಕ್ಷ ಮಹಾಂತೇಶ ರಾಹೂತ್‌ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ಕ್ಷೇತ್ರದ ಶಾಸಕ ವಿಠ್ಠಲ ಹಲಗೇಕರ ಅಧ್ಯಕ್ಷರಾಗಿರುವ ಲೈಲಾ ಶುಗರ್ಸ್ ಕಾರ್ಖಾನೆ ಕೂಡಲೇ ಕಬ್ಬಿನ ದರ ಘೋಷಿಸಿಬೇಕು. ನಂತರವಷ್ಟೇ ಕಾರ್ಖಾನೆಯನ್ನು ಆರಂಭಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಶಹರ ಘಟಕದ ಅಧ್ಯಕ್ಷ ಮಹಾಂತೇಶ ರಾಹೂತ್‌ ಆಗ್ರಹಿಸಿದರು. ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷದ ಕಬ್ಬು ನುರಿಸುವ ಹಂಗಾಮು ಇನ್ನೂ ಆರಂಭಗೊಂಡಿಲ್ಲ. ಕಾರ್ಖಾನೆಯಿಂದ ಕಬ್ಬಿನ ದರ ಘೋಷಣೆಯಾಗಿಲ್ಲ. ಕಬ್ಬು ಕಟಾವು ಮಾಡುವ ಕಾರ್ಮಿಕರ ನೇಮಕಾತಿಯಾಗಿಲ್ಲ. ಇದರಿಂದ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಶಾಸಕರು ರೈತರ ಹಿತಾಸಕ್ತಿಗಾಗಿ ಬದ್ಧತೆ ಪ್ರದರ್ಶಿಸಬೇಕು ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (ಗ್ರಾಮೀಣ) ಈಶ್ವರ ಘಾಡಿ ಮಾತನಾಡಿ, ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಆ ಪಕ್ಷದ ಕಾನೂನು ಪ್ರಕೋಷ್ಠ ಸಂಚಾಲಕ ಆಕಾಶ ಅಥಣಿಕರ ಅವರು ತಾಲೂಕಿನ ಪಾಲಿ ಮತ್ತು ಮಳವ ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆಯರ ನಕಲಿ ನೇಮಕಾತಿ ಪತ್ರವನ್ನು ನೀಡುವ ಮೂಲಕ ಅವರಿಂದ ಸಾವಿರಾರು ರುಪಾಯಿ ಹಣ ಪಡೆದು ವಂಚಿಸಿದ್ದಾರೆ. ಜತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಹೆಸರಲ್ಲಿ ಫೋರ್ಜರಿ ಆದೇಶ ಪತ್ರ ತಯಾರಿಸಿ ಅಧಿಕಾರಿಯೊಬ್ಬರ ಫೋರ್ಜರಿ ಸಹಿ ಮಾಡಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.ಆಕಾಶ ಕರಿ ಕೋಟು ಹಾಕಿ ಸ್ವತಃ ವಕೀಲನೆಂದು ಹೇಳಿಕೊಂಡು ತಿರುಗುತ್ತಿದ್ದು, ಅವರು ಯಾವುದೇ ವಕೀಲಿ ಪದವಿ ಪಡದಿಲ್ಲ. ವಕೀಲಿ ವೃತ್ತಿ ಮಾಡಲು ಅವರ ಬಳಿ ಯಾವುದೇ ಅರ್ಹತೆಯಿಲ್ಲ. ಆಕಾಶ ಹಲವು ಜನರಿಗೆ ಕೆಲಸ ಕೊಡಿಸುವುದಾಗಿ ಸುಳ್ಳು ಹೇಳಿ ಹಣ ಪಡೆದು ವಂಚಿಸಿದ್ದಾರೆ. ಅವರ ವಿರುದ್ಧ ಬಹಳಷ್ಟು ಮೋಸ ವಂಚನೆ ಪ್ರಕರಣಗಳಿವೆ. ಹೀಗಾಗಿ ಪೊಲೀಸ್ ಇಲಾಖೆ ಅವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕು. ಅವರಿಂದ ವಂಚನೆಗೆ ಒಳಗಾದವರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮಹಾದೇವ ಕೋಳಿ, ದೇಮಣ್ಣ ಬಸರಿಕಟ್ಟಿ, ಸುರೇಶ ಜಾಧವ, ಲಕ್ಷ್ಮಣ ಮಾದಾರ, ಸಂಗಮೇಶ ವಾಲಿ, ರಾಮಚಂದ್ರ ಪಾಟೀಲ, ಮಹಾವೀರ ಹುಲಿಕವಿ, ಗುಡೂಸಾಬ್ ತೇಕಡಿ, ಜಾಕಿ ಫರ್ನಾಂಡಿಸ್, ತೋಹಿದ ಚಾಂದಖಾನವರ ಹಾಗೂ ಇತರರು ಇದ್ದರು.