ಮನ್ಮುಲ್‌ ಉಪಾಧ್ಯಕ್ಷ ಸ್ಥಾನದ ಫಲಿತಾಂಶ ಘೋಷಣೆಗೆ ತಡೆ

| Published : May 20 2025, 11:57 PM IST

ಸಾರಾಂಶ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಯು.ಸಿ.ಶಿವಕುಮಾರ್ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತ್ತಾದರೂ ಫಲಿತಾಂಶ ಪ್ರಕಟಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಫಲಿತಾಂಶ ಮತ ಪೆಟ್ಟಿಗೆಯಲ್ಲಿ ಉಳಿಯುವಂತಾಯಿತು.

ಕನ್ನಡಪ್ರಭ ವಾರ್ತೆ ಮದ್ದೂರು

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಯು.ಸಿ.ಶಿವಕುಮಾರ್ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತ್ತಾದರೂ ಫಲಿತಾಂಶ ಪ್ರಕಟಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಫಲಿತಾಂಶ ಮತ ಪೆಟ್ಟಿಗೆಯಲ್ಲಿ ಉಳಿಯುವಂತಾಯಿತು. ಹೀಗಾಗಿ ಹೈಕೋರ್ಟ್ ಆದೇಶದ ಫಲಿತಾಂತ ಪ್ರಕಟಣೆಯಾದರೆ ಉಪಾಧ್ಯಕ್ಷ ಸ್ಥಾನವು ಬಹುತೇಕ ಕಾಂಗ್ರೆಸ್ ಪಾಲಾಗುವ ನಿರೀಕ್ಷೆ ಇದೆ.

ತಾಲೂಕಿನ ಗೆಜ್ಜಲಗೆರೆಯ ಜಿಲ್ಲಾ ಹಾಲು ಒಕ್ಕೂಟದ ಸಭಾಂಗಣದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಯು.ಸಿ.ಶಿವಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಮಳವಳ್ಳಿಯ ಕೃಷ್ಣೇಗೌಡ ಹಾಗೂ ಎನ್‌ಡಿಎನಿಂದ ಎಂ.ಎಸ್‌.ರಘುನಂದನ್ ನಾಮಪತ್ರ ಸಲ್ಲಿಸಿದ್ದರು.

ನಂತರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿಯಾಗಿದ್ದ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರು ಗೌಪ್ಯ ಮತದಾನದ ಮೂಲಕ ಚುನಾವಣೆ ನಡೆಸಿದರು. ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾಗಿರುವ 12 ಮಂದಿ ಹಾಗೂ ಸರ್ಕಾರದ ಐದು ಮಂದಿ ನಾಮ ನಿರ್ದೇಶಕರು ಗಳು ರಹಸ್ಯ ಮತದಾನದಲ್ಲಿ ಪಾಲ್ಗೊಂಡು ಮತ ಚಲಾಯಿಸಿದರು.

ಒಕ್ಕೂಟದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ಫಲಿತಾಂಶ ಘೋಷಣೆಗೆ ಹೈಕೋರ್ಟ್‌ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಎಚ್‌.ಪಿ.ಸಂದೇಶ್ ಹಾಗೂ ರಾಮಚಂದ್ರ ಡಿ.ಹುದ್ದೂರ ತಡೆಯಾಜ್ಞೆ ನೀಡಿರುವುದರಿಂದ ಫಲಿತಾಂಶ ಘೋಷಣೆ ಮಾಡಲಾಗುತ್ತಿಲ್ಲ ಎಂದು ಚುನಾವಣಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಸುದ್ದಿಗಾರರಿಗೆ ತಿಳಿಸಿದರು. ಚುನಾವಣಾ ಪ್ರಕ್ರಿಯೆ ಬಳಿಕ ಚಲಾವಣೆಯಾದ ಮತಗಳನ್ನು ಹಾಗೂ ಅಗತ್ಯ ದಾಖಲೆಗಳನ್ನು ಮತ ಪೆಟ್ಟಿಗೆಯಲ್ಲಿ ಭದ್ರಪಡಿಸಿದ ನಂತರ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಮಂಡ್ಯ ಜಿಲ್ಲಾ ಖಜಾನೆಗೆ ಕೊಂಡೊಯ್ಯಲಾಯಿತು.ಮೇ 28 ರಂದು ಉಪಲೋಕಾಯುಕ್ತ ರಿಂದ ಅಹವಾಲು ಸ್ವೀಕಾರ

ಮಂಡ್ಯ: ಕರ್ನಾಟಕ ಉಪಲೋಕಾಯುಕ್ತ ಬಿ.ವೀರಪ್ಪ ಮೇ 28 ಮತ್ತು 29 ರಂದು ನಗರದಲ್ಲಿ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ಸಾರ್ವಜನಿಕರಿಂದ ಅರ್ಜಿ ಅಹವಾಲು ಸ್ವೀಕರಿಸಲಿದ್ದಾರೆ. ಮೇ 28 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ಹಾಗೂ ಮಧ್ಯಾಹ್ನ 2:30 ರಿಂದ ಸಂಜೆ 5ರವರೆಗೆ ನಗರದ ಸುಭಾಷ್‌ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ, ವಿಚಾರಣೆ ನಡೆಸುವರು. ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಅಧಿಕಾರಿ, ನೌಕರರಿಂದ ಕಾನೂನು ರೀತಿ ನಿರ್ವಹಿಸಬೇಕಾದ ಕೆಲಸದಲ್ಲಿ ವಿಳಂಬವಾಗಿದ್ದರೆ ಅಥವಾ ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ಕಾರಣವಿಲ್ಲದೇ ತೊಂದರೆ ಕೊಡುವುದು, ಲಂಚಕ್ಕೆ ಬೇಡಿಕೆ ಇಡುವುದು, ಇನ್ಯಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದರೆ, ಅದರಿಂದ ತೊಂದರೆಗೊಳಗಾದ ಸಾರ್ವಜನಿಕರು ಗೌರವಾನ್ವಿತರ ಮುಂದೆ ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ.

ಮೇ 29 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1.45 ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 6 ಗಂಟೆವರೆಗೆ ಸುಭಾಷ್‌ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲೆಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ (ಗೌರವಾನ್ವಿತ ಉಪಲೋಕಾಯುಕ್ತರ ವ್ಯಾಪ್ತಿಗೆ ಒಳಪಡುವ ಪ್ರಕರಣಗಳಲ್ಲಿ) ತನಿಖೆ ಮತ್ತು ವಿಚಾರಣೆಗೆ ಬಾಕಿಯಿರುವ ಪ್ರಕರಣಗಳಲ್ಲಿ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರೀತ್ಯಾ ವಿಚಾರಣೆ ನಡೆಸಲಿದ್ದಾರೆ.

ದೂರುದಾರರು ಮತ್ತು ಎದುರುದಾರರು ನಿಗದಿತ ಸಮಯದಲ್ಲಿ ಹಾಜರಿದ್ದು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕರ್ನಾಟಕ ಲೋಕಾಯುಕ್ತದ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.