ಹೆದ್ದಾರಿಯಲ್ಲಿ ಹರಿಯುವ ಚರಂಡಿ ತ್ಯಾಜ್ಯದ ಕಿರಿಕಿರಿ

| Published : Oct 08 2024, 01:05 AM IST

ಸಾರಾಂಶ

ಕನಕಪುರ ಹೊರವಲಯದ ಬೆಂಗಳೂರು ರಸ್ತೆಯ ಕಲ್ಲಹಳ್ಳಿ ಗೇಟ್ ಮುಂದೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅರೆಬರೆ ಚರಂಡಿ ಕಾಮಗಾರಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚರಂಡಿ ನೀರು ಹರಿಯುತ್ತಿರುವುದು ಸಾರ್ವಜನಿಕರ ಓಡಾಡಕ್ಕೆ ಕಿರಿಕಿರಿ ಉಂಟು ಮಾಡುತ್ತಿದೆ.

-ಚರಂಡಿ ಸರಿಪಡಿಸಿ -ಅರೆಬರೆ ಚರಂಡಿ ಕಾಮಗಾರಿ ಆರೋಪ

-ಚರಂಡಿ ನಿರ್ಮಿಸಿ, ರಸ್ತೆ ಗುಂಡಿ ಮುಚ್ಚಲು ಸಾರ್ವಜನಿಕರ ಆಗ್ರಹಕನ್ನಡಪ್ರಭ ವಾರ್ತೆ ಕನಕಪುರ

ನಗರದ ಹೊರವಲಯದ ಬೆಂಗಳೂರು ರಸ್ತೆಯ ಕಲ್ಲಹಳ್ಳಿ ಗೇಟ್ ಮುಂದೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅರೆಬರೆ ಚರಂಡಿ ಕಾಮಗಾರಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚರಂಡಿ ನೀರು ಹರಿಯುತ್ತಿರುವುದು ಸಾರ್ವಜನಿಕರ ಓಡಾಡಕ್ಕೆ ಕಿರಿಕಿರಿ ಉಂಟು ಮಾಡುತ್ತಿದೆ.

ಕನಕಪುರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಹಲವು ವರ್ಷಗಳ ಹಿಂದೆ ರಸ್ತೆ ವಿಸ್ತರಣೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ಕೈಕೊಳ್ಳಲಾಗಿತ್ತು. ರೈಸ್‌ಮಿಲ್ ಬಳಿ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಹೆದ್ದಾರಿಯ ಎರಡು ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಲಾಗಿದೆ. ಆದರೆ ಕಲ್ಲಹಳ್ಳಿ ಗೇಟ್ ಬಳಿ ಕೆಲ ವಾಣಿಜ್ಯ ಮಳಿಗೆಗಳ ಮುಂದೆ ಅರೆಬರೆ ಚರಂಡಿ ನಿರ್ಮಾಣ ಮಾಡಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೈ ತೊಳೆದುಕೊಂಡಿದ್ದಾರೆ ಎಂದು ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಕೆಲ ಭಾಗಗಳಲ್ಲಿ ಚರಂಡಿ ನಿರ್ಮಾಣ ಮಾಡಿ ಇನ್ನು ಕೆಲವೆಡೆ ಕಾಮಗಾರಿ ಮಾಡದೆ ಬಿಟ್ಟಿರುವುದರಿಂದ ಚರಂಡಿ ತ್ಯಾಜ್ಯ ರಾಷ್ಟ್ರೀಯ ಹೆದ್ದಾರಿಯಲ್ಲೇ ಹರಿಯುತ್ತದೆ. ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನ ಸಂಚಾರದಿಂದ ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ.

ನಗರ ವ್ಯಾಪ್ತಿಯ ಹೆದ್ದಾರಿ ಬದಿಯಲ್ಲಿ ಚರಂಡಿ ನಿರ್ಮಿಸಿ ಅದರ ಮೇಲ್ಭಾಗದಲ್ಲಿ ಪಾದಚಾರಿಗಳು ಓಡಾಟಕ್ಕೆ ಪಾದಚಾರಿ ರಸ್ತೆ ನಿರ್ಮಿಸಬೇಕು. ಚರಂಡಿ ಇಲ್ಲದೆ ರಸ್ತೆಯಲ್ಲಿ ಹರಿಯುವ ಕೊಚ್ಚೆ ನೀರು ವಾಹನಗಳು ಓಡಾಡುವಾಗ ಪಾದಚಾರಿಗಳ ಮೇಲೆ ಚಿಮ್ಮುತ್ತದೆ. ಹೆದ್ದಾರಿ ಪಕ್ಕದಲ್ಲಿರುವ ಮಾಂಸದ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳಿಗೆ ಓಡಾಡುವ ಸಾರ್ವಜನಿಕರು ರಸ್ತೆಯಲ್ಲಿ ಹರಿಯುವ ತ್ಯಾಜ್ಯದ ನೀರಿನ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಹೆದ್ದಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಪಾದಚಾರಿಗಳ ಸುರಕ್ಷತೆಗೆ ಅಳವಡಿಸಿದ್ದ ಕಂಬಿಗಳು ತುಕ್ಕು ಹಿಡಿದು ಹಾಳಾಗಿವೆ. ಕೆಲವು ಕಡೆ ಕಳ್ಳರು ಪಾಲಾಗಿವೆ. ಹೆದ್ದಾರಿಯಲ್ಲಿ ಈಗಾಗಲೇ ಅಲ್ಲಲ್ಲಿ ಹಳ್ಳ ಗುಂಡಿಗಳು ಬಿದ್ದು ರಸ್ತೆ ಹಾಳಾಗಿದೆ. ರಾತ್ರಿ ವೇಳೆ ವೇಗವಾಗಿ ಬರುವ ದ್ವಿಚಕ್ರವಾಹನ ಸವಾರರು ರಸ್ತೆಯಲ್ಲಿರುವ ಗುಂಡಿಗಳನ್ನು ಕಾಣದೆ ಬೀಳುವಂತಾಗಿದೆ.

ಹೆದ್ದಾರಿ ನಿರ್ವಹಣೆ ಮಾಡಬೇಕಾದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಹೆದ್ದಾರಿ ಪಕ್ಕದಲ್ಲಿ ಚರಂಡಿ, ನಿರ್ಮಾಣ ಮಾಡಿ ತ್ಯಾಜ್ಯದ ನೀರು ರಸ್ತೆಯಲ್ಲಿ ಅರಿಯದಂತೆ ಕ್ರಮವಹಿಸಬೇಕು. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ವಾಹನ ಸವಾರರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕನಕಪುರದಿಂದ ತುಂಗಣಿವರೆಗೆ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಮಾಡಿ ಹಲವು ವರ್ಷಗಳೇ ಕಳೆದಿದೆ. ಆದರೆ ಕಲ್ಲಹಳ್ಳಿ ಗೇಟ್ ಮುಂದೆ ಕೆಲವೆಡೆ ಚರಂಡಿ ನಿರ್ಮಾಣ ಮಾಡಿಲ್ಲ. ಇದರಿಂದ ಚರಂಡಿ ತ್ಯಾಜ್ಯ ರಸ್ತೆಯಲ್ಲಿ ಹರಿಯುತ್ತಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಕಿರಿಕಿರಿ ಆಗುತ್ತಿದೆ. ಅಲ್ಲಲ್ಲಿ ಹೆದ್ದಾರಿ ರಸ್ತೆಯಲ್ಲಿ ಗುಂಡಿಗಳು ಬಿದ್ದು ಹಾಳಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು.

-ಕೆ.ಆರ್.ಸುರೇಶ್, ಮಾನವ ಹಕ್ಕುಗಳ ಹೋರಾಟಗಾರ