ಭೈರವೈಕ್ಯರ ವಾರ್ಷಿಕ ಪಟ್ಟಾಭಿಷೇಕ: 51 ಹಿರಿಯ ಆದರ್ಶ ದಂಪತಿಗಳಿಗೆ ಅಭಿನಂದನೆ

| Published : Sep 28 2024, 01:24 AM IST

ಭೈರವೈಕ್ಯರ ವಾರ್ಷಿಕ ಪಟ್ಟಾಭಿಷೇಕ: 51 ಹಿರಿಯ ಆದರ್ಶ ದಂಪತಿಗಳಿಗೆ ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಅನ್ನ, ಅಕ್ಷರ ಮತ್ತು ಆರೋಗ್ಯ ದಾಸೋಹದ ಮೂಲಕ ಆದಿ ಚುಂಚನಗಿರಿ ಮಠವನ್ನು ವಿಶ್ವ ವಿಖ್ಯಾತಗೊಳಿಸಿದ ಶ್ರೇಯಸ್ಸು ಭೈರವೈಕ್ಯ ಶ್ರೀಗಳಿಗೆ ಸಲ್ಲುತ್ತದೆ. ಶ್ರೀಗಳನ್ನು ಸ್ಮರಿಸುವುದು ನಮ್ಮೆಲ್ಲರ ಪುಣ್ಯ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ 51ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಸವಿನೆನಪಿಗಾಗಿ 51 ಹಿರಿಯ ಆದರ್ಶ ದಂಪತಿಗಳನ್ನು ಅಭಿನಂದಿಸಲಾಯಿತು.

ತಾಲೂಕಿನ ಬಿಜಿಎಸ್ ಎಜುಕೇಷನ್ ಸೆಂಟರ್ ಶಾಲಾ ಆವರಣದಲ್ಲಿ 80 ವರ್ಷ ವಯಸ್ಸು ಹಾಗೂ 51 ವರ್ಷ ತುಂಬಿದ 51 ದಂಪತಿಗಳನ್ನು ಬಿಜಿಎಸ್ ಶಾಖಾಮಠದ ಪ್ರಧಾನ ಕಾರ್ಯದರ್ಶಿ ಡಾ.ಜೆ.ಎನ್ ರಾಮಕೃಷ್ಣೇಗೌಡ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅಭಿನಂದಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಎಚ್.ಟಿ.ಮಂಜು ಮಾತನಾಡಿ, ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ 51ನೇ ವರ್ಷದ ಪಟ್ಟಾಭಿಷೇಕದ ನೆನಪಿಗಾಗಿ ತಾಲೂಕಿನ ಅತೀ ಹಿರಿಯ ದಂಪತಿಗಳನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ಅನ್ನ, ಅಕ್ಷರ ಮತ್ತು ಆರೋಗ್ಯ ದಾಸೋಹದ ಮೂಲಕ ಆದಿ ಚುಂಚನಗಿರಿ ಮಠವನ್ನು ವಿಶ್ವ ವಿಖ್ಯಾತಗೊಳಿಸಿದ ಶ್ರೇಯಸ್ಸು ಭೈರವೈಕ್ಯ ಶ್ರೀಗಳಿಗೆ ಸಲ್ಲುತ್ತದೆ. ಶ್ರೀಗಳನ್ನು ಸ್ಮರಿಸುವುದು ನಮ್ಮೆಲ್ಲರ ಪುಣ್ಯ ಎಂದು ಹೇಳಿದರು.

ರಾಷ್ಟ್ರಕವಿ ಕುವೆಂಪು ಅವರಂತೆ ವಿಶ್ವಮಾನವ ಪರಿಕಲ್ಪನೆಯನ್ನು, ಬಸವಣ್ಣನವರಂತೆ ಸಮಸಮಾಜ ನಿರ್ಮಾಣಕ್ಕಾಗಿ ಸೇವೆ ಸಲ್ಲಿಸಿದ ಕೀರ್ತಿ ಭೈರವೈಕ್ಯ ಶ್ರೀಗಳದು. ಸಾಂಪ್ರದಾಯಿಕ ಆಚರಣೆಗಳ ಮೂಲಕ ಸನಾತನ ಸಂಸ್ಕೃತಿ ಪುನರುಜ್ಜೀವನಗೊಳಿಸಿದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಸಮಾಜದ ಸುಧಾರಕರಾಗಿ, ಜಾತಿ, ಧರ್ಮ, ಬೇಧ ಮರೆತು ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಅಕ್ಷರಸಂತ ಎಂದು ಬಣ್ಣಿಸಿದರು.

ಹೇಮಗಿರಿ ಬಿಜಿಎಸ್ ಶಾಖಾಮಠದ ಪ್ರಧಾನ ಕಾರ್ಯದರ್ಶಿ ಡಾ. ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಭೈರವೈಕ್ಯ ಶ್ರೀಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಪ್ರತಿವರ್ಷದಂತೆ ಈ ವರ್ಷ 51 ಹಿರಿಯ ಆದರ್ಶ ದಂಪತಿಗಳಿಗೆ ಅಭಿನಂದನೆ ಸಮಾರಂಭ ಆಯೋಜಿಸಿದ್ದೇವೆ ಎಂದು ಹೇಳಿದರು.

ಸಮಾರಂಭದಲ್ಲಿ ಕೆ.ಆರ್.ನಗರ ಕಾಗಿನಲೆ ಮಹಾಸಂಸ್ಥಾನ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದಪುರಿ ಸ್ವಾಮೀಜಿ, ಕಾಪನಹಳ್ಳಿ ಗವಿಮಠದ ಸ್ವತಂತ್ರ ಚನ್ನವಿರ ಸ್ವಾಮೀಜಿ, ತೆಂಡೆಕೆರೆ ಬಾಳೆಹೊನ್ನೂರು ಶಾಖಾ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಬೇಬಿ ಶ್ರೀರಾಮ ಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ, ಎಲೆರಾಮಪುರ ಕುಂಚಟಿಗ ಮಹಾಸಂಸ್ಥಾನ ಮಠದ ಹನುಮಂತನಾಥ ಸ್ವಾಮೀಜಿ, ಶ್ರವಣಬೆಳಗೊಳ ಶ್ರೀ ಚೌಡೇಶ್ವರಿದೇವಿ ಮಹಾಸಂಸ್ಥಾನ ಮಠದ ಬಸವೇಶ್ವರ ಚೈತನ್ಯ ಸ್ವಾಮೀಜಿ, ಅಮೃತೂರು ವೇದವ್ಯಾಸ ಮಠದ ಬಸವಾನಂದ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ಈ ವೇಳೆ ಶ್ರೀಗಳ ಪುತ್ಥಳಿಗೆ ವಿವಿಧ ಬಗೆಯ ಅಭಿಷೇಕ, ಹೋಮ, ಹವನ ಪೂಜಾ ಕಾರ್ಯಕ್ರಮಗಳನ್ನು ನಡೆಸಿ ಆಶೀರ್ವಚನ ನೀಡಿದರು. ಹಿರಿಯ ಆದರ್ಶ ದಂಪತಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಆರ್.ಟಿ.ಒ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕ ಡಾಲು ರವಿ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಂಡಿಹೊಳೆ ಅಶೋಕ್, ಕಸಪಾ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣ ತಿಲಕ್, ಪುರಸಭಾ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ಹಿರಿಯ ಮುಖಂಡ ಬಂಡಿಹೊಳೆ ರಾಮೇಗೌಡ, ನಾಟನಹಳ್ಳಿ ನಿಂಗೇಗೌಡ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್, ಶೀಳನೆರೆ ಅಜಯ್, ಬಿಜಿಎಸ್ ಎಜುಕೇಷನ್ ಸೆಂಟರ್ ಶಾಲಾ ಶಿಕ್ಷಕರು, ಹಿರಿಯ ಆದರ್ಶ ದಂಪತಿಗಳು ಸೇರಿದಂತೆ ಉಪಸ್ಥಿತರಿದ್ದರು.