ಸಾಂಘಿಕವಾಗಿ ನಡೆದ ವಾರ್ಷಿಕ ಹಬ್ಬ

| Published : Aug 29 2025, 01:00 AM IST

ಸಾರಾಂಶ

ಬಿಡುವಿಲ್ಲದ ಮಳೆಯ ಅಬ್ಬರದಲ್ಲಿ ವಾರ್ಷಿಕ ಹಬ್ಬ ಸಾಂಘಿಕವಾಗಿ ನಡೆಯಿತು.

ಗೋಕರ್ಣ: ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಗಣೇಶ ಚತುರ್ಥಿ ಹಬ್ಬವನ್ನ ಸಂಭ್ರಮ ಸಡಗರದಿಂದ ಬುಧವಾರ ಆಚರಿಸಲಾಯಿತು.

ಬಿಡುವಿಲ್ಲದ ಮಳೆಯ ಅಬ್ಬರದಲ್ಲಿ ವಾರ್ಷಿಕ ಹಬ್ಬ ಸಾಂಘಿಕವಾಗಿ ನಡೆಯಿತು.

ಬಾಲವಟುವಾಗಿ ನಿಂತು ಪರಶಿವನ ಆತ್ಮಲಿಂಗವನ್ನು ಇಲ್ಲಿ ಪ್ರತಿಷ್ಠಾಪಿಸಿ ತಾನು ನೆಲೆ ನಿಂತ ಮಹಾಗಣಪತಿಗೆ ವಿಶೇಷ ಪೂಜೆ ನಡೆಯಿತು. ಮುಂಜಾನೆಯಿಂದಲೇ ಭಕ್ತರು ಮಹಾಗಣಪತಿ ಮಂದಿರಕ್ಕೆ ಆಗಮಿಸಿ ವಿವಿಧ ಪೂಜಾ ಸೇವೆ, ದೇವರ ದರ್ಶನ ಪಡೆದರು. ಈ ಭಾಗದ ಎಲ್ಲ ಮನೆಗಳಲ್ಲಿ ವಿನಾಯಕನಿಗೆ ತಯಾರಿಸಿದ ವಿಶಿಷ್ಟ ಭಕ್ಷ್ಯಗಳನ್ನು ತಂದು ನೈವೇದ್ಯ ಮಾಡುವುದು ವಾಡಿಕೆಯಾಗಿದೆ. ಅದರಂತೆ ಈ ವರ್ಷವೂ ನಡೆಯಿತು. ಮಂದಿರದ ಅರ್ಚಕ ಕುಟುಂಬದವರಿಂದ ವಿಶೇಷ ಪೂಜೆ ಮತ್ತಿತರ ದೈವಿಕ ಕಾರ್ಯಗಳು ಜರುಗಿದವು. ದೇವರಿಗೆ ವಿಶೇಷ ಅಲಂಕಾರ ಮಂದಿರಕ್ಕೆ ವಿದ್ಯುತ್ ದೀಪಾಲಂಕಾರ ಭಕ್ತರನ್ನ ಆಕರ್ಷಿಸಿತು.

ಈ ವೇಳೆ ಮಂದಿರದ ಅರ್ಚಕರು, ವ್ಯವಸ್ಥಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು.

ತಾರಮಕ್ಕಿಯಲ್ಲಿರುವ ಕೇತಕಿ ವಿನಾಯಕ, ಕೋಟಿತೀರ್ಥ ಕಟ್ಟೆಯಲ್ಲಿರುವ ಪಟ್ಟೆ ವಿನಾಯಕ, ರಥಬೀದಿಯ ವನವಿನಾಯಕ ಸೇರಿದಂತೆ ಇಲ್ಲಿನ ಎಲ್ಲ ಗಣೇಶನ ಮಂದಿರದಲ್ಲಿ ವಿಶೇಷ ಪೂಜೆ ಜರುಗಿತು.

ಸಾರ್ವಜನಿಕ ಗಣೇಶೋತ್ಸವ:

ಅಹಲ್ಯಬಾಯಿ ಹೊಳ್ಕರ್ ಛತ್ರದಲ್ಲಿ ಯಂಗಸ್ಟಾರ್ ಕ್ಲಬ್‌ನವರಿಂದ ಪ್ರತಿಷ್ಠಾಪಿಸಿದ ಗಣೇಶ, ಮೇಲಿನಕೇರಿ ವಿಜಯ ವಿನಾಯಕ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಿದ ವಿನಾಯಕ, ಅಟೋರಿಕ್ಷಾ ಚಾಲಕ ಮಾಲಕರ ಸಂಘದರ ಗಣಪತಿ ಆಲದಕೇರಿ ಕೇತಕಿ ವಿನಾಯಕ ಗಣೇಶೋತ್ಸವ ಸಮಿತಿ, ಬಿಜ್ಜೂರಿನ ಭದ್ರಕಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರಿಂದ ಗಣೇಶನ ಪ್ರತಿಷ್ಠಾಪಿಸಿ ಆರಾಧಿಸಲಾಯಿತು.

ಇದರಂತೆ ಗಂಗಾವಳಿ, ನಾಡುಮಾಸ್ಕೇರಿ, ಬಂಕಿಕೊಡ್ಲ, ತದಡಿ, ತೊರ್ಕೆ, ಮಾದನಗೇರಿ, ಹಿರೇಗುತ್ತಿ, ಬರ್ಗಿಯಲ್ಲಿ ಸಹ ಸಾರ್ವಜನಿಕವಾಗಿ ವಿನಾಯಕನನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು.

ಪ್ರತಿ ಮನೆಯಲ್ಲೂ ಕುಟುಂಬ ಸದಸ್ಯರು ಒಂದಾಗಿ ಪ್ರಥಮ ಪೂಜಿತನ ಆರಾಧಿಸಿದರು. ಹಲವಾರು ಮನೆಗಳಲ್ಲಿ ವಿಶೇಷ ಅಲಂಕಾರದಲ್ಲಿ ಗಣಪತಿ ಪ್ರತಿಷ್ಠಾಪಿಸಿ ಪೂಜಿಸಿದರು.

ವಿಘ್ನ ವಿನಾಶಕನ ಹಬ್ಬಕ್ಕೆ ಮಳೆಯ ವಿಘ್ನ:

ಹಬ್ಬಕ್ಕಿಂತ ಹಿಂದಿನ ದಿನದವರೆಗೂ ಬಿಸಿಲಿನ ವಾತಾವರಣವಿತ್ತು. ಜನರು ಉತ್ಸಾಹದಿಂದ ಹಬ್ಬ ಆಚರಣೆಗೆ ಅಣಿಯಾಗುತ್ತಿದ್ದರು. ಆದರೆ ಒಂದೇ ಬಾರಿ ಮಳೆಯ ಅಬ್ಬರ ಜೋರಾಗಿದ್ದು, ಬುಧವಾರ ಸಹ ಅಧಿಕ ಮಳೆಯಾಗಿ ವಿಘ್ನ ವಿನಾಶಕನ ಹಬ್ಬಕ್ಕೆ ಅತ್ತಿತ್ತ ತಿರುಗಾಡಲು, ಗಣೇಶನ ಮೂರ್ತಿ ತರಲು ತೊಡಕು ಉಂಟುಮಾಡಿತ್ತು.