ಮಂಗಳೂರು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಭಾನುವಾರ ನಡೆಯಿತು.

ಮಂಗಳೂರು: ನಗರದ ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಭಾನುವಾರ ನಡೆಯಿತು.ಮಂಗಳೂರು ಕೆಥೋಲಿಕ್ ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲಾ ಸಲ್ಡಾನಾ ವಾರ್ಷಿಕ ಮಹೋತ್ಸವದ ಕೃತಜ್ಞತಾ ಪೂಜೆಯ ನೇತೃತ್ವ ವಹಿಸಿ ಆಶೀವರ್ಚನ ನೀಡಿದರು. ದೇವರ ಮೇಲಿನ ವಿಶ್ವಾಸವು ಯಾರನ್ನೂ ನಿರಾಶೆ ಮಾಡುವುದಿಲ್ಲ ಎನ್ನುವುದಕ್ಕೆ ಮೇರಿ‌ ಮಾತೆಯೇ ಸಾಕ್ಷಿ. ಮೇರಿ ಮಾತೆ ಬದುಕಿನ ತುಂಬಾ ಯೇಸುವಿನ ಹಾದಿಯಲ್ಲಿ ಸಾಗಿಕೊಂಡು ಬಂದು ದೇವರ ಕೃಪೆಗೆ ಪಾತ್ರರಾದರು. ನಾವು ಯೇಸುವಿನ ತಾಯಿ ಮೇರಿ ಮಾತೆಯ ಆಶ್ರಯದಲ್ಲಿ ಉಳಿದರೆ ಅವರು ನಮ್ಮನ್ನು ನಿರಾಶೆಗೊಳಿಸಲಾರರು ಎಂದರು.

ಈ ಸಂದರ್ಭ ಪುಣ್ಯ ಕ್ಷೇತ್ರದ ನಿರ್ದೇಶಕ ಫಾ. ಬೆಂಜಮಿನ್ ಪಿಂಟೋ, ಸಹಾಯಕ ಧರ್ಮಗುರುಗಳಾದ ಫಾ. ಲ್ಯಾನ್ಸನ್ ಪಿಂಟೋ, ಫಾ. ಮೈಕಲ್ ಲೋಬೊ ಸೇರಿದಂತೆ ಮಂಗಳೂರು ಧರ್ಮಪ್ರಾಂತ್ಯದ 40ಕ್ಕೂ ಹೆಚ್ಚಿನ ಧರ್ಮಗುರುಗಳು ಪೂಜೆಯಲ್ಲಿ ಭಾಗವಹಿಸಿದ್ದರು. ಕೃತಜ್ಞತಾ ಪೂಜೆಯ ಬಳಿಕ‌ ಪರಮ‌ಪ್ರಸಾದದ ಆರಾಧನೆ‌ ನಡೆಯಿತು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಕೃತಜ್ಞತಾ ಪೂಜೆಯಲ್ಲಿ ಭಾಗವಹಿಸಿ ಪುನೀತರಾದರು.

ದಿನವಿಡೀ ಪೂಜೆ: ಪೊಂಪೈ ಮಾತೆಯ ಪುಣ್ಯಕ್ಷೇತ್ರದಲ್ಲಿ ಭಾನುವಾರ ಬೆಳಗ್ಗೆ 5.45 ಹಾಗೂ 7ಕ್ಕೆ ಕೊಂಕಣಿಯಲ್ಲಿ ಹಾಗೂ 8.15ಕ್ಕೆ ಇಂಗ್ಲಿಷ್‌ನಲ್ಲಿ ಪ್ರಾರ್ಥನೆ, 10.30ಕ್ಕೆ ಅನಾರೋಗ್ಯದಿಂದ ಬಳಲುವವರಿಗೋಸ್ಕರ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನೆರವೇರಿಸಲಾಯಿತು. ಈ ಸಂದರ್ಭ ಎಪಿಸ್ಕೋಪಲ್ ಸಿಟಿ ವಾರಾಡೊನ ವಿಗಾರ್‌ವಾರ್ ಫಾ. ಬೊನವೆಂಚರ್ ನಝರೇತ್ ಭಾಗವಹಿಸಿದ್ದರು.ಹಬ್ಬದ ಅಂಗವಾಗಿ ಉರ್ವ ಪೊಂಪೈ ಮಾತೆ ಚರ್ಚ್‌ನ್ನು ವೈವಿಧ್ಯಮಯ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.