ಕೊಯವ ಸಮಾಜದ ವಾರ್ಷಿಕ ಮಹಾಸಭೆ

| Published : Oct 12 2025, 01:02 AM IST

ಸಾರಾಂಶ

ಕೊಯವ ಸಮಾಜದ ವಾರ್ಷಿಕ ಮಹಾಸಭೆ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸುವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಯವ ಸಮಾಜದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸುವ ಕಾರ್ಯಕ್ರಮ ಮೂರ್ನಾಡಿನ ಪ್ರಗತಿ ಕಟ್ಟಡದ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಸೇನಾಧಿಕಾರಿ ಹಾಗೂ ನಿವೃತ್ತ ಪೊಲೀಸ್ ಉಪಠಾಣಾಧಿಕಾರಿ ಜಿಲ್ಲಂಡ ಸನ್ನು ಚೀಯಣ್ಣ ಅವರು, ಭಾರತೀಯ ಸೇನೆಯಲ್ಲಿ ಸೇವೆ ಮಾಡುವುದು ಮಹಾಭಾಗ್ಯದ ಕೆಲಸ. ಶಿಸ್ತು, ಸಮಯ ಪಾಲನೆ, ನಿಷ್ಠೆ, ಪ್ರಾಮಾಣಿಕತೆ, ದೇಶಾಭಿಮಾನವನ್ನು ಮೈಗೂಡಿಸಿಕೊಂಡು ಸೇವೆ ಮಾಡಿದರೆ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.

ಉತ್ತಮ ಭವಿಷ್ಯ: ಯುವ ಪೀಳಿಗೆ ಉನ್ನತ ಶಿಕ್ಷಣ ಪಡೆದು ಸೇನೆಯಲ್ಲಿ ಸೇವೆ ಸಲ್ಲಿಸಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಮತ್ತು ಇರುವ ಅವಕಾಶಗಳನ್ನು ಬಳಸಿಕೊಂಡು ಸೈನಿಕರಿಂದ ಅಧಿಕಾರಿಯವರೆಗೆ ಬಡ್ತಿ ಹೊಂದಲು ಸಾಧ್ಯವಿದೆ ಎಂದು ಸಲಹೆ ನೀಡಿದರು.ನಿವೃತ್ತ ಎಎಸ್‌ಐ ನೇಂದುಮಂಡ ಪ್ರಕಾಶ್ ಮಾತನಾಡಿ, ದೇಶದ ಗಡಿಯ ಭದ್ರತೆ ಎಷ್ಟು ಮುಖ್ಯವೋ, ದೇಶದ ಆಂತರಿಕ ಭದ್ರತೆಯೂ ಅಷ್ಟೇ ಮುಖ್ಯ ಎಂದು ಹೇಳಿದರು.ಕಾನೂನಿನ ಚೌಕಟ್ಟಿನಡಿ ಜನಾನುರಾಗಿಯಾಗಿ ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯ. ನನ್ನ ಕರ್ತವ್ಯದ ದಿನಗಳಲ್ಲಿ ನಿಷ್ಠೆಯಿಂದ ಕೆಲಸ ನಿರ್ವಹಿಸಿದ ತೃಪ್ತಿ ನನಗಿದೆ. ಇಂದಿನ ಯುವ ಸಮೂಹ ಓದಿನಲ್ಲಿ ಹೆಚ್ಚಿನ ಆಸಕ್ತಿ ತೋರಿ ಉನ್ನತ ಶಿಕ್ಷಣ ಪಡೆಯಬೇಕು. ವಿವಿಧ ಇಲಾಖೆಗಳಲ್ಲಿ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ಪೋಷಕರಿಗೆ ಹಾಗೂ ಸಮಾಜಕ್ಕೆ ಹೆಸರು ತರುವಂತಾಗಬೇಕು ಎಂದು ಕರೆ ನೀಡಿದರು. ಕೊಯವ ಸಮಾಜದ ಉಪಾಧ್ಯಕ್ಷ ಹಾಗೂ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಮಾತನಾಡಿ, ಸಮಾಜ ಬಾಂಧವರು ಸರ್ಕಾರದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಜಾತಿ ಜನಗಣತಿಯ ಸಮೀಕ್ಷೆಯಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗದೆ ಜಾತಿಯ ಕಾಲಂನಲ್ಲಿ ‘ಕೊಯವ’ ಎಂದು ಉಪಕಾಲಂನಲ್ಲಿ ಏನೂ ಬರೆಯದೆ ಖಾಲಿಬಿಟ್ಟು, ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸುವಂತೆ ಮನವಿ ಮಾಡಿದರು.

ಅವಿನಾಭಾವ ಸಂಬಂಧ ಹೆಚ್ಚುತ್ತದೆ: ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಜಿಲ್ಲಂಡ ಮಾದಪ್ಪ ಅವರು ವರ್ಷಕ್ಕೆ ಒಂದು ಬಾರಿ ಸಮಾಜದ ಸದಸ್ಯರು ಒಂದೇ ವೇದಿಕೆಯಡಿ ಸೇರುವುದರಿಂದ ಪರಸ್ಪರ ಅವಿನಾಭಾವ ಸಂಬಂಧ ಹೆಚ್ಚುತ್ತದೆ ಮತ್ತು ನಮ್ಮಲ್ಲಿ ಏನೇ ಗೊಂದಲಗಳಿದ್ದರೂ ಬಗೆ ಹರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.ಸದಸ್ಯರ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯಲು ಸಮಾಜದಿಂದ ನೀಡಲ್ಪಡುವ ದತ್ತಿನಿಧಿಯ ಪ್ರೋತ್ಸಾಹಧನ ಸಹಕಾರಿಯಾಗಲಿದೆ ಎಂದು ಹೇಳಿದರು.ಸಮಾಜಕ್ಕೆ ಸ್ವಂತ ಕಟ್ಟಡದ ಅಗತ್ಯವಿದೆ, ಈಗಾಗಲೇ ಖರೀದಿಸಿರುವ ನಿವೇಶನದಲ್ಲಿ ಆದಷ್ಟು ಶೀಘ್ರ ಸರ್ಕಾರದ ಅನುದಾನ ಪಡೆದು ಕಟ್ಟಡ ನಿರ್ಮಿಸಲಾಗುವುದು ಎಂದರು. ಸಮಾಜದ ನಿರ್ದೇಶಕರಾದ ಕಾಂಞಂಗಡ ಸುಬ್ಬಯ್ಯ, ಮಲ್ಲಂಡ ಮಹೇಶ್, ಮೇಚಿರ ಹರೀಶ್, ತೋರೆರ ನಳಿನಿ ಅಯ್ಯಪ್ಪ, ನೇಂದುಮಂಡ ಗೀತ ನಾಣಯ್ಯ, ಈರಮಂಡ ದಮಯಂತಿ, ಪುದಿಯೊಕ್ಕಡ ರೆಮಿತ ಸುಜಯ್ ಉಪಸ್ಥಿತರಿದ್ದರು. ಮೇಚಿರ ದೀಪ್ತಿ ಪ್ರಾರ್ಥಿಸಿ, ಅಧ್ಯಕ್ಷ ಜಿಲ್ಲಂಡ ಮಾದಪ್ಪ ಸ್ವಾಗತಿಸಿ, ಅಚ್ಚಪಂಡ ಧರ್ಮಾವತಿ ನಿರೂಪಿಸಿದರು ಹಾಗೂ ಕಳ್ಳೀರ ನಾಣಯ್ಯ ವಂದಿಸಿದರು. ಸಮಾಜದ ಗೌರವ ಕಾರ್ಯದರ್ಶಿ ತೋರೆರ ಕಾಶಿ ಕಾರ್ಯಪ್ಪ ಅವರು ಕಳೆದ ಮಹಾಸಭೆಯ ವರದಿ ಮತ್ತು 2024-25ನೇ ಸಾಲಿನ ಲೆಕ್ಕಪತ್ರ ಮಂಡಿಸಿ ಅಂಗೀಕಾರ ಪಡೆದರು.

ಪ್ರೋತ್ಸಾಹ ಧನ ವಿತರಣೆ: 10ನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ನಾಯಮಂಡ ತನ್ಮಯಿ, ದ್ವಿತೀಯ ಪಿಯುಸಿಯ ಮೇಚಿರ ಶಿಲ್ಪ ಮತ್ತು ಅಚ್ಚಪಂಡ ಪ್ರಜ್ಞ, ಪದವಿಯ ಮೇಚಿರ ದೀಪ್ತಿ ಹರೀಶ್ ಹಾಗೂ ಮೇಚಿರ ತ್ರಿವೇಣಿ ಅವರಿಗೆ ಸಮಾಜದ ದತ್ತಿನಿಧಿಯಿಂದ ಪ್ರೋತ್ಸಾಹ ಧನ ವಿತರಿಸಲಾಯಿತು. ನವೆಂಬರ್ ತಿಂಗಳ ಅಂತ್ಯದಲ್ಲಿ ನಡೆಯುವ ಕೊಡವ ಭಾಷಿಕ 21 ಜನಾಂಗಗಳ ಕ್ರೀಡಾಕೂಟದಲ್ಲಿ ಸಮಾಜದ ವತಿಯಿಂದ ಸ್ಪರ್ಧಿಸುವ ಕ್ರೀಡಾಪಟುಗಳಿಗೆ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಟಿ-ಶರ್ಟ್ಗಳನ್ನು ವಿತರಿಸಿ ಶುಭ ಹಾರೈಸಿದರು.ಸಭೆಯ ನಂತರ ಕೈಲ್‌ಪೋಳ್ದ್ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು, ಕೊಡವ ಹಾಡುಗಾರಿಕೆ, ಉಮ್ಮತ್ತಾಟ್, ಮಾಲಗತ್ತಾಟ್ ಕಾರ್ಯಕ್ರಮಗಳು ನಡೆದವು.