ಸಾರಾಂಶ
ಮೂಲ್ಕಿ: ಮೂಲ್ಕಿಯ ಮಾನಂಪಾಡಿ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವದ ಅಂಗವಾಗಿ ಕಾರ್ನಾಡ್ ಕಟ್ಟೆಯಿಂದ ಪ್ರತಿಷ್ಠಿತ ಶ್ರೀದೇವಿಯ ಪ್ರತಿಬಿಂಬವನ್ನು ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ತರಲಾಯಿತು.
ಕುಬೆವೂರು ಶ್ರೀ ಜಾರಂದಾಯ ಸೇವಾ ಮಿತ್ರ ಮಂಡಳಿ ಅವರ ಭಜನೆ, ಶ್ರೀ ವೀರಭದ್ರ ಬಳಗ ಕಿನ್ನಿಗೋಳಿ ಚೆಂಡೆವಾದನದೊಂದಿಗೆ ಮೆರವಣಿಗೆ ನಡೆಯಿತು. ರಾತ್ರಿ ಶ್ರೀ ಮಹಾಗಣಪತಿ ದೇವರಿಗೆ ಪೂಜೆ, ಶ್ರೀ ವೀರಭದ್ರ ದೇವರಿಗೆ ರಂಗ ಪೂಜೆ , ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಡಾ. ಶ್ರೀವತ್ಸ ಉಪಾಧ್ಯಾಯ, ದೇವಸ್ಥಾನದ ಆಡಳಿತ ಮೊಕ್ತೇಸರ ಪುರಂದರ ಡಿ. ಶೆಟ್ಟಿಗಾರ್ ಹಾಗೂ ಗುರಿಕಾರರು ಉಪಸ್ಥಿತರಿದ್ದರು. ಬಪ್ಪನಾಡು ಜಾತ್ರೆ: ನಾಳೆ ಮೂಲ್ಕಿ ಸೀಮೆ ಭಕ್ತರ ಹೊರೆಕಾಣಿಕೆ ಸಮರ್ಪಣೆಮೂಲ್ಕಿ: ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಮೂಲ್ಕಿಯ ಕಾರು ಚಾಲಕ ಮಾಲಕರ ಸಂಘ, ರಿಕ್ಷಾ ಚಾಲಕ ಮಾಲಕರ ಸಂಘ, ಹಿಂದೂ ಯುವ ಸೇನೆ, ಮೂಲ್ಕಿ ಘಟಕ ದ ಸಹಕಾರದಲ್ಲಿ ಮೂಲ್ಕಿ ಸೀಮೆ ಒಂಭತ್ತು ಮಾಗಣೆಯ ಭಕ್ತರ 3ನೇ ವರ್ಷದ ಹೊರೆ ಕಾಣಿಕೆ ಸಮರ್ಪಣೆಯು ಮಾರ್ಚ್ 22ರಂದು ನಡೆಯಲಿದೆ. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಜಾತ್ರಾ ಮಹೋತ್ಸವವು ಮಾ.24ರಿಂದ 31ರ ವರೆಗೆ ನಡೆಯಲಿದೆ.
ಜಾತ್ರೆಯ ಸಮಯದಲ್ಲಿ ನಡೆಯುವ ಅನ್ನಪ್ರಸಾದ ಮತ್ತು ನಿತ್ಯ ಅನ್ನಸಂತರ್ಪಣೆಗೆ ಬೇಕಾಗುವ ಅಕ್ಕಿ, ಬೆಲ್ಲ, ಸಕ್ಕರೆ, ತೊಗರಿಬೇಳೆ, ಎಣ್ಣೆ, ಉಪ್ಪು, ತೆಂಗಿನಕಾಯಿ ಮತ್ತು ತರಕಾರಿಗಳನ್ನು ಮಾಗಣೆಯ ಭಕ್ತರು ಹೊರೆಕಾಣಿಕೆಯ ರೂಪದಲ್ಲಿ ಶ್ರೀ ದೇವಿಗೆ ಅರ್ಪಿಸಲಿದ್ದಾರೆ. ಹೊರೆಕಾಣಿಕೆ ನೀಡುವ ಭಕ್ತಾದಿಗಳು ಮಾ.22ರಂದು ಸಂಜೆ 4.30ರ ಒಳಗೆ ಮೂಲ್ಕಿ ಪುನರೂರು ಹೋಟೆಲ್‌ನ ಹತ್ತಿರ ಇರುವ ಶಾರದಾ ಮಂಟಪಕ್ಕೆ ಒಪ್ಪಿಸಬೇಕು. ಮೂಲ್ಕಿಯ ಶಾರದಾ ಮಂಟಪದಿಂದ ಸಂಜೆ 5.30ಕ್ಕೆ ಹೊರೆಕಾಣಿಕೆಯ ಮೆರವಣಿಗೆಯು ಹೊರಟು ಬಪ್ಪನಾಡು ದೇವಸ್ಥಾನಕ್ಕೆ ಸಮರ್ಪಿಸಲಾಗುವುದು. ಒಂಭತ್ತು ಮಾಗಣೆಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.ಕೊಲಕಾಡಿ ಕಾಳಿಕಾಂಬಾ ದೇವಸ್ಥಾನ: 25ರಿಂದ ವರ್ಷಾವಧಿ ಮಹೋತ್ಸವಮೂಲ್ಕಿ: ಮೂಲ್ಕಿ ಸಮೀಪದ ಕೊಲಕಾಡಿ ಒಂಬತ್ತು ಮಾಗಣೆಯ ಶ್ರೀ ಕಾಳಿಕಾಂಬಾ ದೇವಸ್ಥಾನದ ವರ್ಷಾವಧಿ ಮಹೋತ್ಸವವು ಮಾ.25ರಿಂದ 28ರ ವರೆಗೆ ಜರುಗಲಿದೆ. ಮಾ.25ರಂದು ತೋರಣ ಮೂಹೂರ್ತ, ನವಗ್ರಹ ಹೋಮಾದಿಗಳು, ಮಾ.26ರಂದು ಬಲಿ ಹೊರಟು ಉತ್ಸವ ಆರಂಭ ಮತ್ತು ಲಾಲಕಿ ಉತ್ಸವ ಹಾಗೂ ದರ್ಶನ, ಮಾ. 27ರಂದು ಜಗದ್ಗುರು ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮಿಗಳು ಹಾಗು ಅನಂತ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ವಿವಿಧ ಉತ್ಸವ, ಬಲಿ, ಪಾಲಕಿ ಸವಾರಿ , ಅಲಂಕಾರ ಪೂಜೆ, ದಿಕ್ಷಾಲ ಬಲಿ, ಲಾಲಕಿ ಮತ್ತು ಪಾಲಕಿ ಉತ್ಸವ, ಹಗಲು ರಥೋತ್ಸವ, ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ ದರ್ಶನ ಬಲಿ ಹೊರಟು, ಲಾಲಕಿ ಮತ್ತು ಪಾಲಕಿ ಉತ್ಸವ, ರಥೋತ್ಸವ, ರಥ ಕಾಣಿಕೆ ಅವಭೃತ ಸ್ನಾನ, ಜಳಕದ ಬಲಿ, ಮಾ. 28ರಂದು ಸಂಪ್ರೋಕ್ಷಣೆ, ಮಹಾಪೂಜೆ, ಸಂತರ್ಪಣೆ ರಾತ್ರಿ ಶ್ರೀ ಸತ್ಯ ದೇವತೆಗೆ ತಂಬಿಲ ಸೇವೆ, ಶ್ರೀ ಭದ್ರಕಾಳಿ ಮಹಾ ಶಕ್ತಿಗೆ ಗದ್ದಿಗೆ ಪೂಜೆ ನಡೆದ ಅನಂತರ ಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.