ಜೂನ್‌ 4 ರಿಂದ ಡೋರ್ನಹಳ್ಳಿ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವ, ಜಾತ್ರೆ

| Published : Jun 02 2024, 01:45 AM IST

ಸಾರಾಂಶ

ಜೂ.10 ರಿಂದ 14ರವರೆಗೆ ಚಾಮರಾಜ ಬಲದಂಡೆ ನಾಲೆಗೆ ನೀರು ಹರಿಸಿ ಅನುಕೂಲ ಮಾಡಬೇಕೆಂದು ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ತಹಸೀಲ್ದಾರರು, ಇದರ ಜತೆಗೆ ಲಾಳಂದೇವನಹಳ್ಳಿ ಗ್ರಾಪಂ ಅವರು ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿ ಯಾವುದೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತರಬೇಕೆಂದು ಆದೇಶಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಜೂ.4ರಿಂದ 14ರವರೆಗೆ ತಾಲೂಕಿನ ಡೋರ್ನಹಳ್ಳಿ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವ ಮತ್ತು ಜಾತ್ರೆಗೆ ತಾಲೂಕು ಆಡಳಿತದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಹೇಳಿದರು.

ಡೋರ್ನಹಳ್ಳಿಯ ಸಂತ ಅಂತೋಣಿಯವರ ಬಸಿಲಿಕಾದ ಸಮುದಾಯ ಭವನದಲ್ಲಿ ನಡೆದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಜಾತ್ರೆಯ ಅವಧಿಯಲ್ಲಿ ನಿತ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಮೂಲ ಸವಲತ್ತು ಕಲ್ಪಿಸಬೇಕು ಎಂದರು.

ಜೂ.10 ರಿಂದ 14ರವರೆಗೆ ಚಾಮರಾಜ ಬಲದಂಡೆ ನಾಲೆಗೆ ನೀರು ಹರಿಸಿ ಅನುಕೂಲ ಮಾಡಬೇಕೆಂದು ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ತಹಸೀಲ್ದಾರರು ಇದರ ಜತೆಗೆ ಲಾಳಂದೇವನಹಳ್ಳಿ ಗ್ರಾಪಂ ಅವರು ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿ ಯಾವುದೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತರಬೇಕೆಂದು ಆದೇಶಿಸಿದರು.

ಜಾತ್ರೆಗೆ ಬರುವ ಭಕ್ತಾದಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ 50 ಕೆಎಸ್.ಆರ್.ಟಿ ಬಸ್ ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಅವಶ್ಯಕತೆ ಇದ್ದರೆ ಮತ್ತಷ್ಟು ಬಸ್ ಗಳನ್ನು ಒದಗಿಸಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಹಸೀಲ್ದಾರರಿಗೆ ಮಾಹಿತಿ ನೀಡಿದರು.

12 ದಿನಗಳ ಕಾಲ ನಡೆಯುವ ಜಾತ್ರೆಗೆ ರಾಜ್ಯದಿಂದಲ್ಲದೆ ಹೊರ ರಾಜ್ಯದಿಂದಲೂ ಲಕ್ಷಾಂತರ ಭಕ್ತರು ಮತ್ತು ಸಾವಿರಾರು ವಾಹನಗಳು ಬರುವುದರಿಂದ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿ ವಾಹನಗಳ ನಿಲುಗಡೆಗೆ ಅಗತ್ಯ ಕ್ರಮ ವಹಿಸಲು ಪೊಲೀಸ್ ಇಲಾಖೆ ಈಗಾಗಲೇ ಸಭೆ ನಡೆಸಿ ತೀರ್ಮಾನ ಮಾಡಿದೆ ಎಂದು ಪಿಎಸ್.ಐ ಧನಂಜಯ್ ಸಭೆಗೆ ತಿಳಿಸಿದರು.

ಪ್ರಮುಖವಾಗಿ ಆರೋಗ್ಯ ಮತ್ತು ಸೆಸ್ಕ್ ಇಲಾಖೆಯವರು ಸ್ಥಳದಲ್ಲಿಯೇ ತಮ್ಮ ಸಿಬ್ಬಂದಿಯನ್ನು ಮುಕ್ಕಾಂ ಮಾಡಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಸೂಚನೆ ನೀಡಿದ ಅವರು, ತಾತ್ಕಾಲಿಕ ಆಸ್ಪತ್ರೆ ಆರಂಭಿಸಿ ಆರೋಗ್ಯ ಸೇವೆ ವಹಿಸಬೇಕು ಎಂದರು.

ಇವರ ಜೊತೆಗೆ ತಾಲೂಕು ಮಟ್ಟದ ಇತರ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯ ಸಾಧಿಸಿ ವಿಶ್ವ ವಿಖ್ಯಾತ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವ ಯಶಸ್ವಿಯಾಗಿ ಜರುಗುವಂತೆ ನೋಡಿಕೊಳ್ಳಬೇಕೆಂದ ಅವರು, ನಾನು ಸಹ ಆಗಾಗ ಭೇಟಿ ನೀಡಿ ಸಿದ್ಧತೆ ಮತ್ತು ಅನುಕೂಲತೆಗಳ ಪರಿಶೀಲನೆ ನಡೆಸಲಿದ್ದು, ಸರ್ವರೂ ಸಹಕಾರ ನೀಡಬೇಕೆಂದು ಕೋರಿದರು.

ಪ್ರಮುಖವಾಗಿ ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮ ವಹಿಸಿ ಇದರೊಂದಿಗೆ ಜಾತ್ರಾ ಮೈದಾನದಲ್ಲಿ ತಿಂಡಿ ಮತ್ತು ಆಟೋಟಗಳ ಯಂತ್ರಗಳನ್ನು ಅಳವಡಿಸುವಾಗ ಖುದ್ದು ಪರಿಶೀಲನೆ ನಡೆಸಿ ಯಾವುದೇ ಅವಘಡಗಳು ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಹಸೀಲ್ದಾರರು ಖಟ್ಟೆಚ್ಚರ ನೀಡಿದರು.

ಸಂತ ಅಂತೋಣಿಯವರ ಬಸಿಲಿಕಾದ ಆಡಳಿತಾಧಿಕಾರಿ ರೆ.ಫಾ. ಪ್ರವೀಣ್ ಪೇದ್ರು ಮಾತನಾಡಿ, ವಿಶ್ವ ವಿಖ್ಯಾತ ಪವಾಡ ಪುರುಷ ಡೋರ್ನಹಳ್ಳಿಯ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವಕ್ಕೆ ತಾಲೂಕು ಆಡಳಿತ ಸ್ಥಳೀಯ ಗ್ರಾಪಂಯವರು ಮತ್ತು ಸಾರ್ವಜನಿಕರು ಸರ್ವ ರೀತಿಯ ಸಹಕಾರ ಮತ್ತು ಮಾರ್ಗದರ್ಶನ ನೀಡುವಂತೆ ಕೋರಿದರು.

ರೆ.ಫಾ.ಎನ್.ಟಿ. ಜೋಸೆಫ್ ಮಾತನಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜು, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್. ರಾಜಾರಾಂ ವೈಲಾಯ, ಅಬಕಾರಿ ನಿರೀಕ್ಷಕ ಶ್ರೀನಿವಾಸಮೂರ್ತಿ, ಶಿರಸ್ತೇದಾರ್ ಅಸ್ಲಾಂಬಾಷ, ಪಿಡಿಒ ಧನಂಜಯ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ. ರಮೇಶ್, ಕಂದಾಯಾಧಿಕಾರಿ ಸಿದ್ದರಾಜು, ಸಾರಿಗೆ ಇಲಾಖೆಯ ಸುರೇಶ್ ಇದ್ದರು.