ಎಂಜಿನಿಯರಿಂಗ್‌ಪದವೀಧರನ ಕೃಷಿ ಪ್ರೀತಿ

| Published : Apr 15 2025, 12:58 AM IST

ಸಾರಾಂಶ

6.20 ಎಕರೆ ಮಳೆಯಾಶ್ರಿತ ಹಾಗೂ ನೀರಾವರಿ ಜಮೀನಿನಲ್ಲಿ ಭತ್ತ, ರಾಗಿ, ಜೋಳ, ಕಬ್ಬು, ದ್ವಿದಳ ಧಾನ್ಯಗಳಾದ ಅಲಸಂದೆ ಮತ್ತು ಉದ್ದು ಬೆಳೆ

ಅಂಶಿ ಪ್ರಸನ್ನಕುಮಾರ್‌ಕನ್ನಡಪ್ರಭ ವಾರ್ತೆ ಮೈಸೂರುಎಚ್‌.ಡಿ. ಕೋಟೆ ತಾಲೂಕು ಚಾಮಳ್ಳಿಯ ಸಿ.ಎಸ್‌. ಸೋಮೇಶ್‌ ಅವರ ಪುತ್ರರಾದ ಎಸ್‌. ಚೇತನ್ ಕುಮಾರ್ ಓದಿರುವುದು ಬಿ.ಇ [ಸಿವಿಲ್‌]. ಆದರೆ ವ್ಯವಸಾಯದಲ್ಲಿ ಆಸಕ್ತಿ. ಹೀಗಾಗಿ ಎಂಜಿನಿಯರಿಂಗ್‌ ಮುಗಿದ ನಂತರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.ಅವರಿಗೆ 6.20 ಎಕರೆ ಮಳೆಯಾಶ್ರಿತ ಹಾಗೂ ನೀರಾವರಿ ಜಮೀನಿನಲ್ಲಿ ಭತ್ತ, ರಾಗಿ, ಜೋಳ, ಕಬ್ಬು, ದ್ವಿದಳ ಧಾನ್ಯಗಳಾದ ಅಲಸಂದೆ ಮತ್ತು ಉದ್ದು ಬೆಳೆಯುತ್ತಿದ್ದಾರೆ. ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ, ಬಾಳೆ, ಕಾಫಿ, ಪಪ್ಪಾಾಯಿ, ಶುಂಠಿ ಹಾಗೂ ಮೆಣಸಿನಕಾಯಿ.ಯನ್ನು ಸಹ ಬೆಳೆಯುತ್ತಿದ್ದಾರೆ. ತೋಟಗಾರಿಕಾ ಬೆಳೆಗಳಿಂದ 2023-24 ನೇ ಸಾಲಿನಲ್ಲಿ ರು. 4.50 ಲಕ್ಷ ಆದಾಯ ಗಳಿಸಿದ್ದಾರೆ. ಇವರು ತೆಂಗಿನ ಸಸಿಗಳ ನರ್ಸರಿಯನ್ನೂ ಸಹ ನಿರ್ವಹಿಸುತ್ತಿದ್ದು, ರೈತರಿಗೆ ಗುಣಮಟ್ಟದ ತೆಂಗಿನ ಸಸಿಗಳನ್ನು ನೀಡುತ್ತಿದ್ದಾರೆ. ಕೃಷಿ,ಅರಣ್ಯ, ತೋಟಗಾರಿಕಾ ಬೆಳೆ ಪದ್ಧತಿ ಅನುಸರಿಸುತ್ತಿದ್ದಾರೆ. ಬದುಗಳ ಮೇಲೆ ಹೆಬ್ಬೇವು, ಬಿದಿರು, ಹೊಂಗೆ ಸಿಲ್ವರ್, ಕಹಿ ಬೇವು, ಸುಬಾಬುಲ್, ನೀಲಗಿರಿ ಮತ್ತು ತೇಗದ ಮರಗಳನ್ನು ಬೆಳೆಸಿದ್ದಾರೆ. ಹನಿ ಹಾಗೂ ತುಂತುರು ನೀರಾವರಿ ಮೂಲಕ ನೀರಾವರಿ ವ್ಯವಸ್ಥೆ ಕಲ್ಪಿಸಿ, ನೀರಿನ ಸದ್ಬಳಕೆ ಮಾಡುತ್ತಿದ್ದಾರೆ. ಕೃಷಿಯ ಜೊತೆಗೆ ಉಪಕಸುಬುಗಳಾದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು ವಾರ್ಷಿಕವಾಗಿ ರು.1.10 ಲಕ್ಷ ನಿವ್ವಳ ಆದಾಯ ಪಡೆಯುತ್ತಿದ್ದಾರೆ. ರಾಸುಗಳಿಗೆ ನೇಪಿಯಾರ್, ಕೆಂಪು ಕಡ್ಡಿ ಹುಲ್ಲು, ಗಿನಿ ಹುಲ್ಲು, ಮೇವಿನ ಅಲಸಂದೆ, ಮೇವಿನ ಜೋಳ ಬೆಳೆಗಳನ್ನು ಬೆಳೆಯುತ್ತಾರೆ. ಕುರಿಗಳು, ಮೇಕೆ, ನಾಟಿ ಕೋಳಿ ಅಲ್ಲದೆ 10 ಜೇನು ಪೆಟ್ಟಿಗೆಗಳಲ್ಲಿ ಜೇನು ಸಾಕಾಣಿಕೆ ಮಾಡಿದ್ದು, ಕೃಷಿ ಹೊಂಡದಲ್ಲಿ 1000 ರೋವು ಹಾಗೂ 1000 ಕಾಟ್ಲಾ ಮೀನು ಸಾಕಾಣಿಕೆಯಿಂದ ಆದಾಯ ಹೆಚ್ಚಿಸಿಕೊಳ್ಳಿ ಗಮನಹರಿಸಿದ್ದಾರೆ.ಇವರು ಮಣ್ಣು ಮತ್ತು ನೀರಿನ ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರದ ಬಳಕೆ ಮಾಡುತ್ತಿರುವುದಲ್ಲದೇ, ಭೂಮಿಯ ಫಲವತ್ತತೆಯನ್ನು ಕಾಪಾಡುವಲ್ಲಿ ಸಾವಯವ ಕೃಷಿ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ. ಹಸಿರೆಲೆ ಗೊಬ್ಬರ, ಎರೆಹುಳು ಗೊಬ್ಬರ, ಕಾಂಪೋಸ್ಟ್‌ಹಾಗೂ ಜೈವಿಕ ಗೊಬ್ಬರಗಳ ಬಳಕೆ ಮಾಡುತ್ತಿದ್ದಾರೆ. ಜೈವಿಕ ಅನಿಲ ಘಟಕ ಹೊಂದಿದ್ದು ಮನೆಗೆ ಬಳಸುತ್ತಾರೆ. ಬೆಳೆಗಳಲ್ಲಿ ಸಮಗ್ರ ರೋಗ ಮತ್ತು ಕೀಟಗಳ ನಿರ್ವಹಣೆಯಲ್ಲಿ ಬೀಜೋಪಚಾರದ ಉಪಯೋಗಗಳನ್ನು ಅರಿತು ಟ್ರೈಕೋಡರ್ಮ, ರೈಜೋಬಿಯಂ ಹಾಗೂ ರಾಸಾಯನಿಕ ರೋಗನಾಶಕಗಳನ್ನು ಬಳಸಿ ಬೀಜೋಪಚಾರ ಮಾಡುತ್ತಿದ್ದಾರೆ. ವಿಸ್ತರಣಾ ಶಿಕ್ಷಣ ಘಟಕ ನಾಗನಹಳ್ಳಿ, ಕೃಷಿ ಇಲಾಖೆ, ತೋಟಗಾರಿಕೆ ಹಾಗೂ ಹೈನುಗಾರಿಕೆ ಇಲಾಖೆಗಳಲ್ಲಿ ಜರುಗಲಿರುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇಲ್ಲಿ ಪಡೆದ ತಾಂತ್ರಿಕ ಮಾಹಿತಿಗಳನ್ನು ತಾವು ಅಳವಡಿಸಿಕೊಳ್ಳುವುದರ ಜೊತೆಗೆ ಇತರೆ ರೈತರಿಗೆ ಮಾದರಿ ಯುವ ರೈತರೆನಿಸಿಕೊಂಡಿದ್ದಾರೆ. 2024ನೇ ಸಾನಲ್ಲಿ ಎಚ್.ಡಿ. ಕೋಟೆ ತಾಲೂಕು ಮಟ್ಟದ ಯುವ ರೈತ ಪ್ರಶಸ್ತಿ ಪಡೆದಿದ್ದಾರೆ.ಸಂಪರ್ಕ ವಿಳಾಸಃಎಸ್‌. ಚೇತನ್ ಕುಮಾರ್ ಬಿನ್ ಸಿ.ಎನ್. ಸೋಮೇಶ್ಚಾಮಳ್ಳಿ, ಹಂಪಾಪುರ ಹೋಬಳಿ,ಎಚ್.ಡಿ. ಕೋಟೆ ತಾಲೂಕು, ಮೈಸೂರು ಜಿಲ್ಲೆಮೊ. 95384 17916 ಕೋಟ್ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಬಿ.ಇ ಪದವಿ ಪಡೆದಿದ್ದೇನೆ. ನಮಗೆ ಜಮೀನಿದ್ದು, ತಂದೆಯವರು ವ್ಯವಸಾಯ ಮಾಡುತ್ತಾರೆ. ನನಗೂ ಓದುವಾಗಿನಿಂದಲೂ ವ್ಯವಸಾಯದ ಬಗ್ಗೆ ಆಸಕ್ತಿ. ಹೀಗಾಗಿ ಜನ ಏನೆಂದರೂ ತಲೆಕೆಡಿಸಿಕೊಳ್ಳದೇ ಕೃಷಿಯಲ್ಲಿ ತೊಡಹಿಸಿಕೊಂಡಿದ್ದೇನೆ. ಇದರ ಜೊತೆಗೆ ನಿರ್ಮಾಣ ವ್ಯವಹಾರ ನಡೆಸಬೇಕು ಎಂಬ ಉದ್ದೇಶವಿದೆ.-ಎಸ್‌. ಚೇತನ್‌ಕುಮಾರ್‌, ಚಾಮಹಳ್ಳಿ