ಸಾಂಪ್ರದಾಯಿಕ ಕೃಷಿ, ಹೈನುಗಾರಿಕೆಯಿಂದ ವಾರ್ಷಿಕ 4 ಲಕ್ಷ ರು. ನಿವ್ವಳ ಲಾಭ

| Published : Apr 25 2025, 11:52 PM IST

ಸಾಂಪ್ರದಾಯಿಕ ಕೃಷಿ, ಹೈನುಗಾರಿಕೆಯಿಂದ ವಾರ್ಷಿಕ 4 ಲಕ್ಷ ರು. ನಿವ್ವಳ ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

ಹುಣಸೂರು ತಾಲೂಕು ಹನಗೋಡು ಹೋಬಳಿ ವಡ್ಡಂಬಾಳು ಗ್ರಾಮದ ದೇವರಾಜನಾಯಕ ಅವರ ಪತ್ನಿಯಾದ ವಿ.ಡಿ. ಕುಮಾರಿ ಅವರ ವಾರ್ಷಿಕ ಮೂರರಿಂದ ನಾಲ್ಕು ಲಕ್ಷ ರು.ವರೆಗೆ ನಿವ್ವಳ ಆದಾಯ ಗಳಿಸುತ್ತಿದ್ದಾರೆ. ಇವರಿಗೆ ನಾಲ್ಕು ಎಕರೆ ಜಮೀನಿದೆ. ಎರಡು ಕೊಳವೆ ಬಾವಿ ಕೊರೆಸಿದ್ದರು. ಒಂದು ವಿಫಲವಾದರೆ ಮತ್ತೊಂದರಲ್ಲಿ ಉತ್ತಮವಾಗಿ ನೀರು ಬರುತ್ತಿದೆ. ಕಳೆದ ಹದಿನೈದು ವರ್ಷಗಳಿಂದಲೂ ಪತಿಯೊಂದಿಗೆ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಹುಣಸೂರು ತಾಲೂಕು ಹನಗೋಡು ಹೋಬಳಿ ವಡ್ಡಂಬಾಳು ಗ್ರಾಮದ ದೇವರಾಜನಾಯಕ ಅವರ ಪತ್ನಿಯಾದ ವಿ.ಡಿ. ಕುಮಾರಿ ಅವರ ವಾರ್ಷಿಕ ಮೂರರಿಂದ ನಾಲ್ಕು ಲಕ್ಷ ರು.ವರೆಗೆ ನಿವ್ವಳ ಆದಾಯ ಗಳಿಸುತ್ತಿದ್ದಾರೆ.

ಇವರಿಗೆ ನಾಲ್ಕು ಎಕರೆ ಜಮೀನಿದೆ. ಎರಡು ಕೊಳವೆ ಬಾವಿ ಕೊರೆಸಿದ್ದರು. ಒಂದು ವಿಫಲವಾದರೆ ಮತ್ತೊಂದರಲ್ಲಿ ಉತ್ತಮವಾಗಿ ನೀರು ಬರುತ್ತಿದೆ. ಕಳೆದ ಹದಿನೈದು ವರ್ಷಗಳಿಂದಲೂ ಪತಿಯೊಂದಿಗೆ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಭತ್ತ, ಜೋಳ, ತೊಗರಿ, ರಾಗಿ, ಶುಂಠಿ, ಮೆಣಸಿನಕಾಯಿ ಬೆಳೆಯುತ್ತಾರೆ. ಇವರ ಜಮೀನಿಗೆ ಬಂದು ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ.

ಹೈನುಗಾರಿಕೆ ಇವರ ಉಪಕಸುಬಾಗಿದೆ. ನಾಲ್ಕು ಹಸುಗಳಿವೆ. ಎಂಟು ಮೇಕೆಗಳಿವೆ. ಹದಿನೈದು ಕೋಳಿಗಳಿವೆ. ಪ್ರತಿನಿತ್ಯ ಡೇರಿಗೆ ಬೆಳಗ್ಗೆ ಹಾಗೂ ಸಂಜೆ ತಲಾ ಹತ್ತು ಲೀಟರ್‌ ಹಾಲು ಪೂರೈಸುತ್ತಾರೆ. ಇದರಿಂದಲೇ ಮಾಸಿಕ 21 ಸಾವಿರ ರು. ವರಮಾನವಿದೆ. ಹುಣಸೂರು ತಾಲೂಕಿನಲ್ಲಿ ಹೊಗೆಸೊಪ್ಪು ಪ್ರಮುಖ ವಾಣಿಜ್ಯ ಬೆಳೆ. ಹೀಗಾಗಿ ಇವರು ಕೂಡ ಈಗ ಹೊಗೆಸೊಪ್ಪು ಬೆಳೆಯುತ್ತಿದ್ದಾರೆ. ಜಮೀನಿನಲ್ಲಿ ತೇಗ ಹಾಗೂ ಸಿಲ್ವರ್‌ ಮರಗಳು ಕೂಡ ಇವೆ.

ಇವರು ಆಗಾಗ್ಗೆ ನಾಗನಹಳ್ಳಿಯಲ್ಲಿರುವ ಕೃಷಿ ವಿಸ್ತರಣಾ ಶಿಕ್ಷಣ ಘಟಕಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ಅಣಬೆ ಬೇಸಾಯ. ಸಿರಿಧಾನ್ಯ ನವಣೆಯಲ್ಲಿ ಚಕ್ಕಲಿ, ನಿಪ್ಪಟ್ಟು ಮಾಡುವ ಬಗ್ಗೆ ತರಬೇತಿ ಪಡೆದಿದ್ದಾರೆ. ಜೇನು ಸಾಕಾಣಿಕೆ ಬಗ್ಗೆ ಕೂಡ ತಿಳಿದುಕೊಂಡಿದ್ದಾರೆ. ಮಣ್ಣು ಪರೀಕ್ಷೆಯನ್ನು ಸಹ ಮಾಡಿಸಿ, ಮಣ್ಣಿನ ಫಲವತ್ತತೆ ಕಾಪಾಡುತ್ತಿದ್ದಾರೆ. ಇವರು ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸಿಲ್ಲ., ಕೊಟ್ಟಿಗೆ ಗೊಬ್ಬರವನ್ನೇ ಜಮೀನಿಗೆ ಹಾಕುತ್ತಾರೆ.

ಇವರಿಗೆ 203ನೇ ಸಾಲಿನಲ್ಲಿ ಬೆಂಗಳೂರಿನ ಜಿಕೆವಿಕೆಯಲ್ಲಿ ಹುಣಸೂರು ತಾಲೂಕು ಮಟ್ಟದ ಯುವ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ ನೀಡಲಾಗಿದೆ. ಮಗ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಾರೆ. ಮಗಳು ಮಡಿಕೇರಿಯಲ್ಲಿ ಬಿ.ಎಸ್ಸಿ ನರ್ಸಿಂಗ್‌ ಓದುತ್ತಿದ್ದಾರೆ.

ಸಂಪರ್ಕ ವಿಳಾಸಃ

ವಿ.ಡಿ. ಕುಮಾರಿ ಕೋಂ ದೇವರಾಜನಾಯಕ

ವಡ್ಡಂಬಾಳು. ಹೊನ್ನೇನಹಳ್ಳಿ ಅಂಚೆ

ಹನಗೋಡು ಹೋಬಳಿ,

ಹುಣಸೂರು ತಾಲೂಕು.

ಮೈಸೂರು ಜಿಲ್ಲೆ

ಮೊ. 81977 93540ವ್ಯವಸಾಯ ಕಷ್ಟ ಏನಲ್ಲ. ಮನಸ್ಸಿಟ್ಟು ಮಾಡಬೇಕು ಅಷ್ಟೇ. ಖಂಡಿತ ಅನುಕೂಲವಾಗುತ್ತದೆ.

- ವಿ.ಡಿ. ಕುಮಾರಿ, ವಡ್ಡಂಬಾಳು