ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ನಶಿಸುತ್ತಿರುವ ಹೋರಾಟಗಳ ಪೈಕಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ರೈತ ಮುಖಂಡ ಅಣ್ಣೂರು ಮಹೇಂದ್ರ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ ಶ್ಲಾಘಿಸಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ರೈತ ಹೋರಾಟಗಾರ ಅಣ್ಣೂರು ಮಹೇಂದ್ರ ಅವರ 55ನೇ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಹಾಗೂ ಅಣ್ಣೂರು ಮಹೇಂದ್ರ ಅವರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತ ಮುಖಂಡ ಅಣ್ಣೂರು ಮಹೇಂದ್ರ ಅವರು ಪ್ರಾಮಾಣಿಕ ಹೋರಾಟಗಾರರಲ್ಲಿ ಒಬ್ಬರೆನಿಸಿದ್ದಾರೆ. ಕುಟುಂಬ, ಆರೋಗ್ಯ, ವೈಯಕ್ತಿಕ ಜೀವನ ಯಾವುದಕ್ಕೂ ಅಂಟಿಕೊಳ್ಳದೇ ಹೋರಾಟವೇ ಅವರ ಬದುಕಾಗಿದೆ. ಇಂತಹ ತ್ಯಾಗ ಜೀವಿಗಳಿಂದ ಚಳವಳಿಗಳು ಜೀವಂತವಾಗಿವೆ ಎಂದು ತಿಳಿಸಿದರು.ಹೋರಾಟಗಾರರಾದ ಮೇಲೆ ತ್ಯಾಗದ ಜೀವನಕ್ಕೂ ಸಿದ್ಧರಾಗಬೇಕು. ಇಂದು ವ್ಯವಸ್ಥೆಯ ಜತೆ ಹೊಂದಾಣಿಕೆ ಮಾಡಿಕೊಳ್ಳುವವರ ಸಂಖ್ಯೆಯೇ ದೊಡ್ಡದಿದೆ. ಇಂತಹ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಸಮಸ್ಯೆ ವಿರುದ್ಧ ಹೋರಾಟ ಮಾಡುವವರ ಸಂಖ್ಯೆ ಬೆರಳೆಣಿಕೆಯಷ್ಟಿದೆ ಎಂದರು.
ಮನ್ಮುಲ್ ನಿರ್ದೇಶಕ ಎಸ್.ಪಿ. ಸ್ವಾಮಿ ಮಾತನಾಡಿ, ಚಳವಳಿಗಳ ಮೂಲಕ ನಾಯಕರಾದವರು, ಇಂದು ಯಾವುದೋ ವೈಯಕ್ತಿಕ ಆಸೆ- ಆಕಾಂಕ್ಷೆಗಳಿಗೆ ಬಲಿಯಾಗಿ ಚಳವಳಿಗಳನ್ನು ಬಲಿಕೊಡುತ್ತಿದ್ದಾರೆ. ಇಂತಹ ನಾಯಕರಿಂದ ಜನ ಸಾಮಾನ್ಯರಿಗೆ ನ್ಯಾಯ ಮರೀಚಿಕೆಯಾಗಿದೆ. ಅಣ್ಣೂರು ಮಹೇಂದ್ರ ಅವರ ಹೋರಾಟಗಳು ನಿಸ್ಸಂಶಯವಾಗಿ ಸಮುದಾಯದ ಹಿತದೃಷ್ಟಿಯಿಂದ ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನಿವೃತ್ತ ಕಾರ್ಯಪಾಲಕ ಅಭಿಯಂತರ ಬಸವರಾಜೇಗೌಡ ಮಾತನಾಡಿ, ಹೋರಾಟಗಾರರನ್ನು ಇಂದು ಗುರುತಿಸುವುದೇ ಅಪರೂಪ. ಅಣ್ಣೂರು ಮಹೇಂದ್ರ ಅವರ ಹೋರಾಟವನ್ನು ಗಮನಿಸಿ ಅಭಿನಂದಿಸುತ್ತಿರುವ ಪ್ರಗತಿಪರ ಸಂಘಟನೆಗಳ ಕೆಲಸ ಶ್ಲಾಘನೀಯ ಎಂದರು.
ರೈತ ಮುಖಂಡ ಅಣ್ಣೂರು ಮಹೇಂದ್ರ ದಂಪತಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅರ್ಜುನ್ ಕುಮಾರ್, ಎಸ್‌ಬಿಐ ಬ್ಯಾಂಕ್‌ನ ವ್ಯವಸ್ಥಾಪಕಿ ದಯಾಮಣಿ, ಭಾರತೀನಗರ ಪೊಲೀಸ್ ಠಾಣೆ ಮುಖ್ಯ ಪೇದೆ ಪ್ರಭುಸ್ವಾಮಿ, ಶರಣರ ವೇದಿಕೆ ಅಧ್ಯಕ್ಷ ಕಾಡುಕೊತ್ತನಹಳ್ಳಿ ನಂದೀಶ ಅವರನ್ನು ಅಭಿನಂದಿಸಲಾಯಿತು.ಇತ್ತೀಚೆಗೆ ನಿಧನರಾದ ದೊಡ್ಡರಸಿನಕೆರೆ ಗ್ರಾಪಂ ಮಾಜಿ ಅಧ್ಯಕ್ಷ ಡಿ.ಎಂ ಮಂಚೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಸೌಭಾಗ್ಯ ರಾಮಣ್ಣ, ಮಾಜಿ ಅಧ್ಯಕ್ಷೆ ನಾಗಮಣಿ ಮಹೇಂದ್ರ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ಶಂಭೂನಹಳ್ಳಿ ಸುರೇಶ್, ಕರಡಕೆರೆ ಹನುಮಂತೇಗೌಡ, ಯರಗನಹಳ್ಳಿ ರಾಮಕೃಷ್ಣ, ತೊರೆಚಾಕನಹಳ್ಳಿ ಶಂಕರೇಗೌಡ, ರಘು ವೆಂಕಟೇಗೌಡ, ಗುಡಿಗೇರೆ ಬಸವರಾಜು, ಡಿ.ಕೆ. ಲತಾ, ಕೆ.ಪಿ. ದೊಡ್ಡಿ ಪುಟ್ಟಸ್ವಾಮಿ, ಅಣ್ಣೂರು ಸಿದ್ದೇಗೌಡ, ಪ್ರಜಾಪ್ರಿಯಾ ವೆಂಕಟೇಶ ಸೇರಿದಂತೆ ಮತ್ತಿತರರಿದ್ದರು.