ರಸ್ತೆಗೆ ಇಳಿಯಲಿವೆ ಇನ್ನೂ 700-800 ಬಸ್‌ಗಳು

| Published : Apr 09 2025, 12:45 AM IST

ರಸ್ತೆಗೆ ಇಳಿಯಲಿವೆ ಇನ್ನೂ 700-800 ಬಸ್‌ಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಪಟ್ಟಣದ ನೂತನ ಬಸ್ ನಿಲ್ದಾಣಕ್ಕೆ ವೀರ ಶರಣ ಮಡಿವಾಳ ಮಾಚಿದೇವ ಬಸ್ ನಿಲ್ದಾಣವೆಂದು ನಾಮಕರಣ ಮಾಡಲಾಗಿದೆ. ಅವರ ಹೆಸರಲ್ಲಿ ಬಸ್ ನಿಲ್ದಾಣ ಕಾರ್ಯ ನಿರ್ವಹಿಸಲಿದ್ದು, ಶರಣರ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಅಧಿಕಾರಿಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪಟ್ಟಣದ ನೂತನ ಬಸ್ ನಿಲ್ದಾಣಕ್ಕೆ ವೀರ ಶರಣ ಮಡಿವಾಳ ಮಾಚಿದೇವ ಬಸ್ ನಿಲ್ದಾಣವೆಂದು ನಾಮಕರಣ ಮಾಡಲಾಗಿದೆ. ಅವರ ಹೆಸರಲ್ಲಿ ಬಸ್ ನಿಲ್ದಾಣ ಕಾರ್ಯ ನಿರ್ವಹಿಸಲಿದ್ದು, ಶರಣರ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಅಧಿಕಾರಿಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಪಟ್ಟಣದ ನೂತನ ಬಸ್ ನಿಲ್ದಾಣದ ಆವರಣದಲ್ಲಿ ಮಂಗಳವಾರ ನಡೆದ ಉದ್ಘಾಟನೆ ಹಾಗೂ ನಾಮಕರಣ ಸಮಾರಂಭದಲ್ಲಿ ಮಾತನಾಡಿದ ಅವರು, 12ನೇ ಶತಮಾನದ ಶರಣ ಮಡಿವಾಳ ಮಾಚಿದೇವರ ಹೆಸರು ಅಜರಾಮರವಾಗಬೇಕು ಎಂಬ ನಿಟ್ಟಿನಲ್ಲಿ ನಿಮಗಿಂತಲೂ ಮೊದಲು ನಮ್ಮ ಕ್ಷೇತ್ರದಲ್ಲಿ ಒಂದು ಮಾರ್ಗಕ್ಕೆ ಅವರ ಹೆಸರಿಡಲಾಗಿದೆ. ನಿಮ್ಮೆಲ್ಲರ ಬೇಡಿಕೆಯಂತೆ ವೀರ ಶರಣ ಮಡಿವಾಳ ಮಾಚಿದೇವರ ಹೆಸರನ್ನು ನಾಮಕರಣ ಮಾಡಲಾಗಿದೆ. ಶಕ್ತಿ ಯೋಜನೆಯಿಂದ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ಸಣ್ಣಪುಟ್ಟ ಸಮಸ್ಯೆಗಳಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ 700-800 ಬಸ್‌ಗಳು ರಸ್ತೆಗೆ ಇಳಿಯಲಿವೆ ಎಂದು ಸಚಿವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣಕ್ಕೆ ವೀರಶರಣ ಮಡಿವಾಳ ಮಾಚಿದೇವರ ಹೆಸರು ಅಜರಾಮರವಾಗಬೇಕು ಎಂಬ ನಿಟ್ಟಿನಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಲಾಗಿತ್ತು. ಅದರಂತೆ ಇಂದು ನಾಮಕರಣ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿತ್ತು. ಶರಣರ ಹೆಸರಿಡಲು ಹಿಂದಿನ ಶಾಸಕರು, ರಾಜಕೀಯ ಮುಖಂಡರು, ಪಟ್ಟಣದ ನಿವಾಸಿಗಳ ಹಾಗೂ ಗೆಳೆಯರ ಬಳಗದ ಬೇಡಿಕೆಯಾಗಿತ್ತು. ಎಲ್ಲರ ಬೇಡಿಕೆಯಂತೆ ಇಂದು ನಾಮಕರಣವಾಗಿದೆ, ಶರಣರ ಮೂರ್ತಿ ಪ್ರತಿಷ್ಠಾಪನೆಗೆ ಎಲ್ಲರ ಸಹಕಾರದೊಂದಿಗೆ ನಾನು ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವರಿಗೆ ಮನವಿ ಮಾಡಿದರು. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಇನ್ನು ಹೆಚ್ಚಿನ ಬಸ್‌ಗಳನ್ನು ಕ್ಷೇತ್ರದಲ್ಲಿ ಸಂಚರಿಸುವಂತಾಗಬೇಕು. ಕ್ಷೇತ್ರದಿಂದ ಬೆಂಗಳೂರಿಗೆ ಐಷಾರಾಮಿ ಕಲ್ಯಾಣ ರಥ ಬಸ್ ಸಂಚಾರಕ್ಕೆ ಹಾಗೂ ಬಸ್ ಡಿಪೋ ನಿರ್ಮಾಣಕ್ಕೆ ಬೇಕಾದ 5 ಎಕರೆ ಜಾಗ ಪಟ್ಟಣದಲ್ಲಿ ನೀಡಲಾಗುವುದು. ಪರಿಶೀಲಿಸಿ, ಆದಷ್ಟು ಬೇಗ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.

ಸಾನಿಧ್ಯ ವೀರಗಂಗಾಧರ ಶಿವಾಚಾರ್ಯರು ವಹಿಸಿ ಆಶೀರ್ವಚನ ನೀಡಿದರು. ಪ್ರಸ್ತಾವಿಕವಾಗಿ ವ್ಯವಸ್ಥಾಪಕ ನಿರ್ದೇಶಕರಾದ ಎಂ.ರಾಜಪ್ಪ ಮಾತನಾಡಿ ಇಲಾಖೆಯಿಂದ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಸಿಗುವ ಸೌಲತ್ತುಗಳ ಬಗ್ಗೆ ವಿವರಿಸಿದರು. ಪಟ್ಟಣದ ನಿವಾಸಿಗಳ ಭಾವನಾತ್ಮಕ ಸಂಬಂಧಕ್ಕೆ ಸ್ಪಂದಿಸಿ ವೀರ ಶರಣ ಮಡಿವಾಳ ಮಾಚಿದೇವರ ಹೆಸರು ನಾಮಕರಣ ಸಮಾರಂಭಕ್ಕೆ ಆಗಮಿಸಿದ ಸಚಿವರನ್ನು ಹಾಗೂ ಶರಣರ ಫೋಟೋ ಮೆರವಣಿಗೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬಸ್ ನಿಲ್ದಾಣದವರೆಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಹಲವಾರು ಜನರು ಸಚಿವರನ್ನು ಸನ್ಮಾನಿಸಿ ಮನವಿ ಪತ್ರ ಸಲ್ಲಿಸಿದರು.

ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಪಪಂ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಇಂಡಿ ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ, ತಹಸೀಲ್ದಾರ್ ಪ್ರಕಾಶ ಸಿಂದಗಿ ಸೇರಿದಂತೆ ಪಟ್ಟಣದ ಪ್ರಮುಖರು, ರಾಜಕೀಯ ಮುಖಂಡರು, ಪಪಂ ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಇಲಾಖೆ ಅಧಿಕಾರಿ ಬಸಲಿಂಗಪ್ಪ ಅಂಗಡಿ ನಿರೂಪಿಸಿದರು, ವಿಭಾಗೀಯ ನಿಯಂತ್ರಣ ಅಧಿಕಾರಿ ನಾರಾಯಣಪ್ಪ ಕುರುಬರ ಸ್ವಾಗತಿಸಿದರೆ, ನಾಗರಾಜ.ಜಿ ವಂದಿಸಿದರು.