ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಸಮಾನಾಂತರವಾಗಿ ₹72 ಕೋಟಿ ವೆಚ್ಚದಲ್ಲಿ ಇನ್ನೊಂದು ಬ್ಯಾರೇಜ್ ನಿರ್ಮಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ನಗರದ ಹೊರವಲಯದ ಮೂಲಕ ವಿಜಯಪುರ ರಸ್ತೆ ಸೇರಿಸುವ ₹65 ಕೋಟಿ ವೆಚ್ಚದಲ್ಲಿ ರಿಂಗ್ ರಸ್ತೆ ನಿರ್ಮಿಸುವ ಪ್ರಸ್ತಾವ ರಾಜ್ಯ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ನಗರಸಭೆ ಆಶ್ರಯದಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ 76ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಮಖಂಡಿ ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗಿದೆ. ಸಣ್ಣ ಕೈಗಾರಿಕೆ ಮತ್ತು ಗುಡಿ ಕೈಗಾರಿಕೆ ಸ್ಥಾಪನೆಗಾಗಿ 2 ಸಾವಿರ ಎಕರೆ ಜಮೀನು ಬೇಕಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ₹೧೦ ಕೋಟಿ ಅನುದಾನ ಮಂಜೂರಾಗಿದೆ. ಇನ್ನೂ ₹150 ಕೋಟಿ ಅನುದಾನದ ಅವಶ್ಯಕತೆಯಿದೆ. ಜಮಖಂಡಿಯ ಬಾಗಲಕೋಟೆ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ 200ಎಕರೆ ಜಮೀನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಸದ್ಯಕ್ಕೆ 30 ಎಕರೆ ಜಮೀನು ಮಂಜೂರು ಮಾಡುವ ಭರಸವೆ ರಾಜ್ಯ ಸರ್ಕಾರ ನೀಡಿದೆ. ನಗರದ ರಾಣಿ ಚೆನ್ನಮ್ಮ ವೃತ್ತದಿಂದ ಎಸ್‌ಆರ್‌ಎ ಕ್ಲಬ್ ವರೆಗಿನ ರಸ್ತೆಯನ್ನು ದ್ವಿಪಥ ರಸ್ತೆಯನ್ನು ಪರಿವರ್ತಿಸಲು ರಾಜ್ಯ ಸರ್ಕಾರ ₹10 ಕೋಟಿ ಅನುದಾನ ನೀಡಲಿದೆ ಎಂದರು.
ಲಕ್ಕನಕೆರೆ ಉದ್ಯಾನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಜಂಬುಕೇಶ್ವರ ದೇವಸ್ಥಾನದ ಜೀಣೋದ್ಧಾರ ಕೈಗೊಳ್ಳಲಾಗುತ್ತಿದೆ. ತುಬಚಿ ಗ್ರಾಮದ ಹತ್ತಿರ ನೀರಾವರಿ ಯೋಜನೆ ಆರಂಭಿಸಲಾಗುವುದು. ಮರೇಗುದ್ದಿ ಏತನೀರಾವರಿ ಯೋಜನೆ ಮಂಜೂರಾತಿಗೆ ಒತ್ತಾಯಿಸಲಾಗುವುದು. ಬಾಲಕಿಯರ ವಸತಿಗೃಹ ನಿರ್ಮಾಣಕ್ಕೆ ಅನುಮತಿ ದೊರೆತಿದೆ. ಸುಮಾರು1600 ಜನರಿಗೆ ನಿವೇಶನಗಳ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರುಉಪವಿಭಾಗಾಧಿಕಾರಿ ಶ್ವೇತಾ ಮೋಹನ ಬೀಡಿಕರ ಧ್ವಜಾರೋಹಣ ನೆರವೇರಿಸಿ, ನಮ್ಮ ದೇಶದ ಸಂವಿಧಾನವೇ ನಮಗೆ ದೇವರು. ಆದ್ದರಿಂದ ಸಂವಿಧಾನ ಅರಿತು ಎಲ್ಲರೂ ನಡೆದುಕೊಳ್ಳಬೇಕು. ಗಣರಾಜ್ಯೋತ್ಸವ ರಾಷ್ಟ್ರೀಯ ಹಬ್ಬವಷ್ಟೇ ಅಲ್ಲ, ಬದಲಾಗಿ ನಮ್ಮ ಕರ್ತವ್ಯ ನೆನಪಿಸಿಕೊಳ್ಳುವುದಾಗಿದೆ ಎಂದರು.
ತಹಸೀಲ್ದಾರ್ ಸದಾಶಿವ ಮಕ್ಕೋಜಿ ಸರ್ವರನ್ನು ಸ್ವಾಗತಿಸಿ ಮಾತನಾಡಿದರು. ಇದಕ್ಕೂ ಮೊದಲು ಪೊಲೀಸ್, ಹೋಮಗಾರ್ಡ್ಸ್, ಎನ್‌ಸಿಸಿ ಕೆಡೆಟ್ಸ್, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ ಸೇರಿದಂತೆ ವಿವಿಧ ಪದಾತಿಧಳಗಳಿಂದ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಅನಿಲ ಕುಂಬಾರ ಅವರ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು.ಹಿರಿಯ ಪತ್ರಕರ್ತ ಎಂ.ಸಿ. ಗೊಂದೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ೨೩ ಸಾಧಕರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಮನರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ವಿದ್ಯಾರ್ಥಿನಿಯರಾದ ಶ್ರೀನಿಧಿ ಕೌಜಲಗಿ, ಪ್ರೀತಿಕಾ ಮಜ್ಜಣಗಿ ಭಾಷಣ ಮಾಡಿದರು. ನಗರಸಭೆ ಅಧ್ಯಕ್ಷ ಪರಮಗೊಂಡ ಗವರೋಜಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅನ್ವರ್ ಮೋಮಿನ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ನಗರಸಭೆ ಉಪಾಧ್ಯಕ್ಷೆ ರೇಖಾ ಕಂಬಳೆ, ಡಿವೈಎಸ್ಪಿ ಶಾಂತವೀರ ಈ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಜುನ್ನೂರ, ನಗರಸಭೆ ಪೌರಾಯಕ್ತ ಜ್ಯೋತಿ ಗಿರೀಶ ಎಸ್. ಮತ್ತಿತರರು ವೇದಿಕೆಯಲ್ಲಿದ್ದರು. ಡಾ.ಎನ್.ವಿ. ಅಸ್ಕಿ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ಬಸಣ್ಣವರ ವಂದಿಸಿದರು.