ವಿವಿ ಸಾಗರ ಹಿನ್ನೀರಿನ ಜನತೆಗೆ ಮತ್ತೋಂದು ಹೊಡೆತ

| Published : Mar 03 2025, 01:45 AM IST

ಸಾರಾಂಶ

ಉತ್ತರೆಗುಡ್ಡದಲ್ಲಿ ಮೈನಿಂಗ್‌ ಬಂದ್‌ ಆಗುವ ಲಕ್ಷಣ । ಹೊಸದುರ್ಗ ತಾಲೂಕಿನ ಜನರಿಗೆ ಬಿಜೆಪಿ ಸರ್ಕಾರದ ಮತ್ತೊಂದು ಅನ್ಯಾಯದ ಕೊಡುಗೆ: ಗೂಳಿಹಟ್ಟಿ

ಕನ್ನಡಪ್ರಭ ವಾರ್ತೆ ಹೊಸದುರ್ಗ

ರಾಜರ ಕಾಲದಲ್ಲಿ ಹಿರಿಯೂರು ರೈತರ ಕಲ್ಯಾಣಕ್ಕೆ ನಮ್ಮ ತಾಲೂಕಿನ ಕೃಷಿ ಭೂಮಿ ಹೋಯ್ತು ಈಗ ಉತ್ತರೆ ಗುಡ್ಡವನ್ನು ವನ್ಯಜೀವಿ ಅಭಯಾರಣ್ಯ ಎಂದು ಘೋಷಣೆಯಾಗಿರುವುದರಿಂದ ಉತ್ತರೆಗುಡ್ಡದಲ್ಲಿ ನಡೆಯುತ್ತಿದ್ದ ಮೈನಿಂಗ್‌ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೂ ಬಂದ್‌ ಆಗುವ ಲಕ್ಷಣಗಳು ಕಾಣುತ್ತಿವೆ.

ಚಿತ್ರದುರ್ಗ ವ್ಯಾಪ್ತಿಯಲ್ಲಿ ಬರುವ ಹಿರಿಯೂರು, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲೂಕಿನ 11566.50 ಹೆಕ್ಟೇರ್‌ ಪ್ರದೇಶ ಕಾಯ್ದಿರಿಸಿದ ಅರಣ್ಯ ಭೂಮಿಯನ್ನು 2019ರಲ್ಲಿ ಲಕ್ಕಿಹಳ್ಳಿ ವ್ಯಾಪ್ತಿಯಲ್ಲಿ ಬರುವ ಅರಣ್ಯ ಪ್ರದೇಶದ 7359.19 ಹೆಕ್ಟೇರ್‌ ಪ್ರದೇಶವನ್ನು ಸೇರಿಸಿ ಉತ್ತರೆಗುಡ್ಡ ಕಾಯ್ದಿರಿಸಿದ ಅರಣ್ಯದೆಂದು ಘೋಷಣೆ ಮಾಡಲಾಗಿತ್ತು. ಈ ಅರಣ್ಯ ಪ್ರದೆಶವನ್ನು 2022 ರಲ್ಲಿ ಅಂದಿನ ಬಿಜೆಪಿ ಸರ್ಕಾರ ಉತ್ತರೆಗುಡ್ಡ ವನ್ಯಜೀವಿ ಅಭಯಾರಣ್ಯ ಎಂದು ಘೋಷಣೆ ಮಾಡಿದೆ.

*ಏನಿದು ವನ್ಯ ಜೀವಿ ಅಭಯಾರಣ್ಯ: ವೈವಿಧ್ಯಮಯ ಜೀವಿ ಸಂಕುಲ ಹೊಂದಿರುವ ಉತ್ತರೆಗುಡ್ಡ ಕಾಯ್ದಿರಿಸಿದ ಅರಣ್ಯದಲ್ಲಿ ಕರಡಿ, ಚಿರತೆ, ಹೈನಾ, ಭಾರತೀಯ ತೋಳ ಸೇರಿದಂತೆ ವೈವಿದ್ಯಮಯ ಸಸ್ಯವರ್ಗ, ಪ್ರಾಣಿ ಸಂಕುಲ, ಸಸ್ತನಿಗಳು, ಉಭಯಚರಗಳು, ಸರೀಸೃಪಗಳು, ಚಿಟ್ಟೆಗಳಿವೆ ಎಂದು ಹಿಂದಿನ ಮೈಸೂರು ಅರಸರು ಈ ಪ್ರದೇಶವನ್ನು ಕಾಯ್ದಿಸಿರಿದ ಅರಣ್ಯ ಎಂದು ಘೋಷಣೆ ಮಾಡಿದ್ದರು. ಈ ವೈವಿದ್ಯಮಯ ಜೀವ ರಾಶಿಯನ್ನು ಉಳಿಸುವ ನಿಟ್ಟಿನಲ್ಲಿ 2022ರಲ್ಲಿ ಬಿಜೆಪಿ ಸರ್ಕಾರ ಈ ಪ್ರದೇಶವನ್ನು ಉತ್ತರೆಗುಡ್ಡ ವನ್ಯಜೀವಿ ಅಭಯಾರಣ್ಯ ಎಂದು ಘೋಷಣೆ ಮಾಡಿದೆ. ಇದರಿಂದಾಗಿ ಇನ್ನು ಮುಂದೆ ಈ ಗುಡ್ಡದಲ್ಲಿ ಯಾವುದೇ ರೀತಿಯ ಚಟುವಟಿಕೆಗಳನ್ನು ಮಾಡುವಂತಿಲ್ಲ.

ಇಲ್ಲಿಯವರೆಗೆ ಈ ಗುಡ್ಡದಲ್ಲಿ ರೈತರು ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಅಲ್ಲದೆ ಈ ಗುಡ್ಡದಲ್ಲಿ ಜಾನುವಾರು ಸೇರಿದಂತೆ ಕುರಿ ಮೇಕೆಗಳನ್ನು ಮೇಯಿಸಲಾಗುತ್ತಿತ್ತು ಅಲ್ಲದೆ ಕಬ್ಬಿಣದ ಅದಿರಿನ ಗಣಿಗಾರಿಕೆಯೂ ಈ ಪ್ರದೇಶದಲ್ಲಿ ನಡೆಯುತ್ತಿದ್ದರಿಂದ ಈ ಭಾಗದ ಜನ ಗಣಿಗಾರಿಕೆಯ ಮೂಲಕ ಆರ್ಥಿಕ ಮೂಲವನ್ನು ಕಂಡು ಕೊಂಡಿದ್ದರು ಇದರಿಂದ ಈ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್‌ ಬೀಳಲಿದೆ.

ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಗೂಳಿಹಟ್ಟಿ ಶೇಖರ್‌, ಡ್ಯಾಂನಿಂದ ಅನ್ಯಾಯಕ್ಕೋಳಗಾಗಿದ್ದ ಹೊಸದುರ್ಗ ತಾಲೂಕಿನ ಜನರಿಗೆ ನಮ್ಮ ಬಿಜೆಪಿ ಸರ್ಕಾರದ ಮತ್ತೊಂದು ಅನ್ಯಾಯದ ಕೊಡುಗೆಯಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

2022ರಲ್ಲಿ ನಾನು ಈ ಆದೇಶ ಹೊರಡಿಸದಂತೆ ತಕರಾರು ಮಾಡಿದ್ದೆ. ಆದರೂ ನಮ್ಮ ಆಕ್ಷೇಪಣೆಯ ನಡುವೆ ಇಂತದೊಂದು ಆದೇಶ ಹೊರಡಿಸಿದ್ದು ಇದು ಕಾರ್ಯಚರಣೆಗೆ ಬರುವ ಮುನ್ನ ನಮ್ಮ ತಾಲೂಕಿನ ಜನ ಎಚ್ಚೆತ್ತುಕೊಳ್ಳಬೇಕಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಅತಿ ಶೀಘ್ರದಲ್ಲಿಯೇ ಮಾಡುವುದಾಗಿ ತಿಳಿಸಿದರು.

*ಇದು ಕೂಡ ಹಿರಿಯೂರಿನ ದಬ್ಬಾಳಿಕೆ:

ಹಿರಿಯೂರಿನ ಕೆಲ ಸಂಘಟನೆಗಳು ಹಾಗೂ ಅಲ್ಲಿನ ರಾಜಕೀಯ ನಾಯಕರು ವಿವಿ ಸಾಗರ ಜಲಾಶಯದ ಮೇಲೆ ಮಾಡುತ್ತಿರುವ ದಬ್ಬಾಳಿಕೆ ಸಾಲದೆಂಬಂತೆ ಹಿನ್ನಿರಿನ ಪ್ರದೇಶದಲ್ಲಿ ಬರುವ ಅರಣ್ಯ ಪ್ರದೆಶವನ್ನು ಅಭಯಾರಣ್ಯ ಎಂದು ಘೋಷಣೆ ಮಾಡಿಸುವಲ್ಲಿ ಹಿರಿಯೂರಿನ ರಾಜಕೀಯ ನಾಯಕರ ಪಾತ್ರವಿದೆ ಎಂದಿದ್ದಾರೆ. 2022ರಲ್ಲಿ ವಿಧಾನಸಭೆಯಲ್ಲಿ ಈ ವಿಷಯ ಮಂಡನೆಯಾದಾಗ ನಾನು ವಿರೋಧಿಸಿದ್ದೆ ಆದರೆ ಅಂದಿನ ಹಿರಿಯೂರು ಶಾಸಕಿ ಪೂರ್ಣೀಮಾ ಅವರು ಘೋಷಣೆಗೆ ಒತ್ತಡ ಹಾಕಿದ್ದರು ಎಂದರು.

ಇದನ್ನು ಪ್ರಶ್ನಿಸುವ ಮನಸ್ಥಿಯಲ್ಲಿ ನಮ್ಮ ತಾಲೂಕಿನ ಜನರಿಲ್ಲ ಅಲ್ಲದೆ ಮಾಡದಕೆರೆ ಹಾಗೂ ಮತ್ತೋಡು ಹೋಬಳಿಯ ಬಾಗದಲ್ಲಿ ಬಹುತೇಕ ಹಿಂದುಳಿದ ಜನರಿದ್ದು ಈ ಭಾಗದಲ್ಲಿ ಕುರಿ ಮೇಯಿಸಿಕೊಂಡಿದ್ದರು ಅಲ್ಲದೆ ಗಣಿಗಾರಿಕೆ ಮಾಡಿಕೊಂಡು ಅಲ್ಪ ಪ್ರಮಾಣದಲ್ಲಿ ಆರ್ಥಿಕ ಸ್ವಾವಲಂಭನೆ ಮಾಡಿಕೊಳ್ಳುತ್ತಿದ್ದರು ಇದಕ್ಕೆಲ್ಲಾ ತಡೆಯಾಗಲಿದೆ. ಹಾಗಾಗಿ ನಮ್ಮ ನೀರು ನಮ್ಮ ಹಕ್ಕು ಹಾಗೂ ವನ್ಯಜೀವಿ ಅಭಯಾರಣ್ಯ ಎಂಬ ಘೋಷಣೆಯನ್ನು ಹಿಂಪಡೆಯುವಂತೆ ಒತ್ತಾಯಿಸುವ ಕಾರ್ಯಕ್ರಮ ರೂಪಿಸಿಕೊಂಡು ನಮ್ಮ ತಾಲೂಕಿನ ಜನರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.