ಸಾರಾಂಶ
ಅಭಿಮಾನಿ ಕೊಲೆ ಕೇಸ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಅಭಿಮಾನಿ ಕೊಲೆ ಕೇಸ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. 10 ವರ್ಷಗಳ ಹಿಂದಿನ ಕರಾಳ ಕಥೆ ಇದೀಗ ಬಯಲಾಗಿದ್ದು, ಕೊಲೆ ಪ್ರಕರಣ ಬಳಿಕ ದರ್ಶನ್‌ನ ಒಂದೊಂದೆ ಮುಖ ಅನಾವರಣಗೊಳ್ಳುತ್ತಿದೆ.ಟಿ.ನರಸೀಪುರ ಸಮೀಪದ ತೂಗುದೀಪ ಫಾರಂ ಹೌಸ್‌ನಲ್ಲಿ ಚಾಮರಾಜನಗರ ತಾಲೂಕಿನ ನಿಜಲಿಂಗನಪುರ ಮಹೇಶ್ ಬದುಕು ನರಕಮಯವಾಗಿದ್ದು, ಅಂದು ಪರಿಹಾರ ಕೊಡದೇ ದರ್ಶನ್ ಕ್ರೌರ್ಯ ಮೆರೆದಿದ್ದರು ಎಂದು ಮಹೇಶ್ ಆರೋಪಿಸಿದ್ದಾರೆ. ಕೆಲಸ ಮಾಡುವ ವೇಳೆ ಎತ್ತೊಂದು ಕೊಂಬಿನಿಂದ ತಿವಿದಿತ್ತು. ಕಣ್ಣಿನಿಂದ ತೂರಿ ತಲೆ ಬುರುಡೆಯ ಹೊರಗೆ ಎತ್ತಿನ ಕೊಂಬು ಬಂದಿತ್ತು. ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಮನೆಗೆ ತಂದು ನಟ ದರ್ಶನ್ ಕಡೆಯವರು ಬಿಟ್ಟು ಹೋಗಿದ್ದರು. ನಂತರ ಕುಟುಂಬದತ್ತ ನಟ ತಿರುಗಿಯೂ ನೋಡಿಲ್ಲ ಎಂದು ಕುಟುಂಬಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪರಿಹಾರ ಕೇಳಲು ಕಾರ್ಮಿಕನ ಸಂಬಂಧಿಕರು ಫಾರಂ ಹೌಸ್‌ಗೆ ಹೋದ್ರೆ ಸಾಕು ನಾಯಿಗಳನ್ನು ಛೂ ಬಿಡಲಾಗಿತ್ತು. ಬಳಿಕ ಮೈಸೂರಿನ ಹೊಟೇಲ್‌ಗೆ ಮಾತುಕತೆಗೆ ಕರೆಸಿ ರೌಡಿಗಳಿಂದ ಬೆದರಿಕೆ ಹಾಕಿದ್ದರು. ವಿಚಾರ ಹೊರಗಡೆ ಬಾಯಿಬಿಟ್ರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಡಿ ಬಾಸ್ ಆ್ಯಂಡ್ ಗ್ಯಾಂಗ್ ಹೆದರಿಸಿದ್ದರು ಎಂದು ಮಹೇಶ್ ಕುಟುಂಬ ಆರೋಪಿಸಿದೆ.ಹತ್ತು ವರ್ಷಗಳಿಂದ ಹಾಸಿಗೆ ಹಿಡಿದಿರುವ ಕೂಲಿ ಕಾರ್ಮಿಕ ಮಹೇಶ್‌ಗೆ ಸದ್ಯ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇದ್ದು ದರ್ಶನ್‌ಗೆ ಹಿಡಿ ಶಾಪ ಹಾಕುತ್ತಾ ಕಣ್ಣೀರಲ್ಲಿ ಕಾರ್ಮಿಕ ಮಹೇಶ್ ಕುಟುಂಬವಿದೆ. ಇವರಿಗೆ ದಾನಿಗಳ ನೆರವು ಅಗತ್ಯವಿದೆ.