ಹಂಪಿ ವಿರೂಪಾಕ್ಷೇಶ್ವರ ದೇಗುಲದಲ್ಲಿ ಮತ್ತೊಂದು ಡ್ರಿಲ್‌ ಪ್ರಕರಣ ಬಯಲಿಗೆ!

| Published : Nov 19 2023, 01:30 AM IST

ಹಂಪಿ ವಿರೂಪಾಕ್ಷೇಶ್ವರ ದೇಗುಲದಲ್ಲಿ ಮತ್ತೊಂದು ಡ್ರಿಲ್‌ ಪ್ರಕರಣ ಬಯಲಿಗೆ!
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ಈಗ ಬರೀ ಸ್ಮಾರಕಗಳಿಗೆ ಡ್ರಿಲ್‌ ಮಾಡಿರುವ ಪ್ರಕರಣಗಳು ಒಂದೊಂದಾಗಿ ಹೊರ ಬರಲಾರಂಭಿಸಿವೆ. ಈಗ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಆವರಣದಲ್ಲೇ ಶುದ್ಧ ಕುಡಿಯುವ ನೀರಿನ ಘಟಕದ ನೀರಿನ ಹೊರ ಹರವಿಗಾಗಿ ವಿಜಯನಗರ ಕಾಲದ ಮಂಟಪ ಗೋಡೆಗೆ ಡ್ರಿಲ್‌ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೃಷ್ಣ ಎನ್. ಲಮಾಣಿ

ಹೊಸಪೇಟೆ: ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ಈಗ ಬರೀ ಸ್ಮಾರಕಗಳಿಗೆ ಡ್ರಿಲ್‌ ಮಾಡಿರುವ ಪ್ರಕರಣಗಳು ಒಂದೊಂದಾಗಿ ಹೊರ ಬರಲಾರಂಭಿಸಿವೆ. ಈಗ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಆವರಣದಲ್ಲೇ ಶುದ್ಧ ಕುಡಿಯುವ ನೀರಿನ ಘಟಕದ ನೀರಿನ ಹೊರ ಹರವಿಗಾಗಿ ವಿಜಯನಗರ ಕಾಲದ ಮಂಟಪ ಗೋಡೆಗೆ ಡ್ರಿಲ್‌ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಗರ್ಭಗುಡಿಯ ಉತ್ತರ ದಿಕ್ಕಿನ ಬಾಗಿಲಿನ ಕಂಬಗಳಿಗೆ ಮುಜರಾಯಿ ಇಲಾಖೆ ಡ್ರಿಲ್‌ ಮಾಡಿ ಮೊಳೆ ಹೊಡೆದ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಇಂತಹ ಹಲವು ಪ್ರಕರಣಗಳು ಹಂಪಿಯಲ್ಲಿ ನಡೆದಿದ್ದು, ಸ್ಮಾರಕಗಳನ್ನು ಸಂರಕ್ಷಣೆ ಮಾಡುವ ಕಾರ್ಯ ಪುರಾತತ್ವ ಇಲಾಖೆಯಿಂದ ಸರಿಯಾಗಿ ನಡೆಯುತ್ತಿಲ್ಲ ಎಂದು ಸ್ಮಾರಕಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾರಿಂದ ಕಾಮಗಾರಿ?: ಹಂಪಿಗೆ ಆಗಮಿಸುವ ಪ್ರವಾಸಿಗರು ಹಾಗೂ ಭಕ್ತರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದಕ್ಕಾಗಿ ಭಾರತೀಯ ಪುರಾತತ್ವ ಇಲಾಖೆಯೇ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆ.

ಆದರೆ, ಈ ಘಟಕ ಸ್ಥಾಪನೆ ವೇಳೆ ನೀರಿನ ಹೊರ ಹರವಿಗಾಗಿ ವಿಜಯನಗರ ಕಾಲದಲ್ಲಿ ನಿರ್ಮಿಸಿರುವ ಮಂಟಪದ ಗೋಡೆಯೊಂದಕ್ಕೆ ಡ್ರಿಲ್‌ ಮಾಡಿ, ಪೈಪ್‌ಗಳನ್ನು ಜೋಡಿಸಿದೆ.

ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ 1975ರಿಂದಲೇ ಭಾರತೀಯ ಪುರಾತತ್ವ ಇಲಾಖೆ ಹಂಪಿಯಲ್ಲಿ ಕಾರ್ಯಾಚರಿಸುತ್ತಿದೆ. ಆದರೆ, 1986ರಲ್ಲೇ ಯುನೆಸ್ಕೊ ಹಂಪಿ ಸ್ಮಾರಕಗಳನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ಆದರೆ, ಹಂಪಿ ಸ್ಮಾರಕಗಳನ್ನು ಸಂರಕ್ಷಣೆ ಮಾಡುವ ಕಾರ್ಯವನ್ನು ಪುರಾತತ್ವ ಇಲಾಖೆ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಹಂಪಿ ರಥಬೀದಿಯಲ್ಲೇ ದೊಡ್ಡ ದೊಡ್ಡ ಕ್ರೇನ್, ಜೆಸಿಬಿಗಳನ್ನು ಬಳಸಿ ಕಾಮಗಾರಿಗಳನ್ನು ಕೂಡ ಮಾಡಲಾಗಿದೆ. ಆದರೂ ನಿಯಮ ಉಲ್ಲಂಘನೆಯಾದರೂ ಪುರಾತತ್ವ ಇಲಾಖೆ ಮೌನಕ್ಕೆ ಶರಣಾಗುತ್ತಿದೆ ಎಂಬುದು ಚರಿತ್ರೆಪ್ರಿಯರ ಆರೋಪ.

ಆಯುಕ್ತರಿಗೆ ಪತ್ರ: ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಕಂಬಗಳಿಗೆ ಮೊಳೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೇ ಈಗಾಗಲೇ ಮುಜರಾಯಿ ಇಲಾಖೆ ಆಯುಕ್ತರಿಗೆ ಭಾರತೀಯ ಪುರಾತತ್ವ ಇಲಾಖೆಯ ಹಂಪಿ ವಲಯದಿಂದ ಪತ್ರ ಬರೆಯಲಾಗಿದೆ. ಅವರಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮವಹಿಸಲು ಪುರಾತತ್ವ ಇಲಾಖೆ ಎದುರು ನೋಡುತ್ತಿದೆ ಎಂದು ಪುರಾತತ್ವ ಇಲಾಖೆಯ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಈ ಮಧ್ಯೆ ಹಂಪಿ ನಿರ್ವಹಣಾ ಪ್ರಾಧಿಕಾರದ ಆಯುಕ್ತರು ಕೂಡ ಶ್ರೀ ವಿರೂಪಾಕ್ಷೇಶ್ವರ ದೇಗುಲಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈಗ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ವೇಳೆ ಮಂಟಪದ ಗೋಡೆಗೆ ಡ್ರಿಲ್‌ ಮಾಡಿರುವುದು ಬಯಲಿಗೆ ಬಂದಿದೆ. ಹಂಪಿ ಸ್ಮಾರಕಗಳ ಸಂರಕ್ಷಣೆಗೆ ಸೂಕ್ತ ಕ್ರಮವಹಿಸಬೇಕು ಎಂಬುದು ಚರಿತ್ರೆ ಪ್ರಿಯರ ಒತ್ತಾಯವೂ ಆಗಿದೆ.ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಒಂದು ನಿಯಮ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳಿಗೆ ಒಂದು ನಿಯಮನಾ? ತಪ್ಪೆಸಗಿದ ಎರಡೂ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮವಹಿಸಬೇಕು. ಹಂಪಿ ಸ್ಮಾರಕಗಳನ್ನು ಸಂರಕ್ಷಣೆ ಮಾಡಬೇಕು. ಮಂಟಪ, ಕಂಬಗಳಿಗೆ ಡ್ರಿಲ್‌ ಮಾಡಿ ಹಾಳು ಮಾಡುವುದು ಸಲ್ಲದು ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಅಧ್ಯಕ್ಷ ಡಾ. ವಿಶ್ವನಾಥ ಮಾಳಗಿ ಹೇಳುತ್ತಾರೆ. ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ ಮಾಡಿರುವ ಸ್ಥಳ ಹಳೇ ಮಂಟಪವಲ್ಲ. ಸಂರಕ್ಷಿತ ಪ್ರದೇಶದಲ್ಲಿ ಡ್ರಿಲ್‌ ಮಾಡಲಾಗಿಲ್ಲ. ಸುಖಾಸುಮ್ಮನೆ ಈಗ ಆರೋಪ ಹೊರಿಸಲಾಗುತ್ತಿದೆ ಕೇಂದ್ರ ಪುರಾತತ್ವ ಇಲಾಖೆಯ ಹಂಪಿ ವೃತ್ತದ ಅಧಿಕಾರಿ ನಿಹಿಲ್‌ ದಾಸ್‌ ಹೇಳುತ್ತಾರೆ.