ತೀವ್ರ ವಾಂತಿ, ಬೇಧಿಗೆ ಮತ್ತೊಬ್ಬ ವೃದ್ಧೆ ಬಲಿ

| Published : Oct 16 2023, 01:45 AM IST

ಸಾರಾಂಶ

ಮತ್ತಿ ಗ್ರಾಮದಲ್ಲಿ ವಾರದಲ್ಲಿಯೇ ಮೂವರು ವೃದ್ಧರ ಸಾವು , ತಹಸೀಲ್ದಾರ್‌, ಡಿಎಚ್‌ಒ ಸೇರಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ

ಮತ್ತಿ ಗ್ರಾಮದಲ್ಲಿ ವಾರದಲ್ಲಿಯೇ ಮೂವರು ವೃದ್ಧರ ಸಾವು । ತಹಸೀಲ್ದಾರ್‌, ಡಿಎಚ್‌ಒ ಸೇರಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ವಾಂತಿ, ಬೇಧಿಯಿಂದ ತೀವ್ರ ಅಸ್ವಸ್ಥರಾಗಿದ್ದ ತಾಲೂಕಿನ ಮತ್ತಿ ಗ್ರಾಮದ ಕೆಂಚಮ್ಮ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಡುವುದರೊಂದಿಗೆ ಕಳೆದ 7-8 ದಿನಗಳ ಅವಧಿಯಲ್ಲಿ ಮೂವರು ವೃದ್ಧರು ಸಾವನ್ನಪ್ಪಿದಂತಾಗಿದೆ. ತಾಲೂಕಿನ ಮತ್ತಿ ಗ್ರಾಮದ ಕೆಂಚಮ್ಮ(65 ವರ್ಷ) ಮೃತ ಮಹಿಳೆ. ತೀವ್ರ ವಾಂತಿ, ಬೇಧಿಯಿಂದಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದ ಕೆಂಚಮ್ಮ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ವೃದ್ಧೆಯ ಸಾವಿಗೆ ಕಲುಷಿತ ನೀರು ಕಾರಣ ಎಂಬುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಸ್ಥರು ಹೇಳುವುದೇನು?:

ಮತ್ತಿ ಗ್ರಾಮದಲ್ಲಿ ಅ.7ರಂದು ಸಾವಿತ್ರಮ್ಮ(75 ವರ್ಷ), ಅ.8ರಂದು ಸೋಮಶೇಖರಪ್ಪ (65) ತೀವ್ರ ವಾಂತಿ ಬೇಧಿಯಿಂದಾಗಿ ಮೃತಪಟ್ಟಿದ್ದರು. ಕಲುಷಿತ ನೀರಿನಿಂದಾಗಿ ಗ್ರಾಮಸ್ಥರು ವಾಂತಿ, ಬೇಧಿಗೆ ಬಳಲುತ್ತಿದ್ದಾರೆ. ಶುದ್ಧ ನೀರು ಮರೀಚಿಕೆಯಾಗಿದ್ದು, ಕಲುಷಿತ ನೀರಿನಿಂದಾಗಿ ತಮ್ಮ ಊರಿನಲ್ಲಿ ಸಾವುಗಳು ಸಂಭವಿಸುತ್ತಿವೆ. ಅಲ್ಲದೇ, ಜಿಲ್ಲಾ ಆಸ್ಪತ್ರೆ, ಬಾಪೂಜಿ ಆಸ್ಪತ್ರೆ ಸೇರಿ ಇತರೆ ಖಾಸಗಿ ಆಸ್ಪತ್ರೆಗಳಲ್ಲೂ ತಮ್ಮ ಊರಿನ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಗ್ರಾಮಸ್ಥರು ಹೇಳಿದ್ದಾರೆ.

ನಲ್ಲಿ ನೀರೇ ಗ್ರಾಮಸ್ಥರಿಗೆ ಆಸರೆ:

ಸೋಮಶೇಖರಪ್ಪ ಸಾವಿಗೆ ಕಲುಷಿತ ನೀರೇ ಕಾರಣ. ವಾಂತಿ, ಬೇಧಿ ಕಾಣಿಸಿಕೊಂಡಾಗ ತಕ್ಷಣ‍ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಗುಣವಾಗದ್ದರಿಂದ ಮತ್ತೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದೆವು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಮ್ಮ ತಂದೆ ಸಾವಿಗೆ ಕಲುಷಿತ ನೀರು ಪೂರೈಸಿರುವುದು ಕಾರಣ ಎಂದು ಮೃತರ ಪುತ್ರ ಪಿ.ಎಸ್‌.ಪ್ರಭಾಕರ ಕುಟುಂಬ ದೂರುತ್ತದೆ. ಶುದ್ಧ ನೀರಿನ ಘಟಕವಿದ್ದರೂ ಗ್ರಾಮಕ್ಕೆ ಅದರಿಂದ ಉಪಯೋಗವಿಲ್ಲ. ಗ್ರಾಪಂ ಪೂರೈಸುತ್ತಿರುವ ನಲ್ಲಿ ನೀರು ಇಡೀ ಗ್ರಾಮಸ್ಥರಿಗೆ ಆಸರೆ ಎಂದು ಗ್ರಾಮಸ್ಥರು ತಿಳಿಸಿದರು.

ಚರಂಡಿ ನೀರು ಪೈಪ್ ಸೇರದಂತೆ ಕ್ರಮವಹಿಸಿ:

ಗ್ರಾಪಂ ಕುಡಿಯುವ ನೀರು ಪೂರೈಸುವ ಪೈಪ್‌ಗಳು ಅಲ್ಲಲ್ಲಿ ಒಡೆದಿದ್ದು, ಚರಂಡಿ ನೀರು ಸಹ ಅದಕ್ಕೆ ಸೇರಿಕೆಯಾಗುತ್ತಿದೆ. ಕಳೆದ 15 ದಿನಗಳಿಂದಲೂ ಗ್ರಾಮದಲ್ಲಿ ವಾಂತಿ ಬೇಧಿ ಪ್ರಕರಣಗಳು ಕಂಡು ಬರುತ್ತಿವೆ. ಗ್ರಾಪಂ ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಮೃತಪಟ್ಟ ಮೂವರೂ ಹಿರಿಯ ನಾಗರಿಕರಿಗೆ ಅನಾರೋಗ್ಯದ ಕಾರಣಕ್ಕೆ ಸಾವು ಸಂಭ‍ವಿಸಿವೆಯೆಂದು ಅಧಿಕಾರಿಗಳು ಹೇಳುತ್ತಾರೆ. ಮತ್ತೆ ಯಾವುದೇ ಸಾವು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಗ್ರಾಮಕ್ಕೆ ಪೂರೈಸುವ ಕುಡಿಯುವ ನೀರು ಕಲುಷಿತವಾಗದಂತೆ, ಚರಂಡಿ ನೀರು ಪೈಪ್ ಸೇರದಂತೆ ಅಗತ್ಯ ಕ್ರಮ ಕೈಗೊಳ್ಳಲಿ ಎಂಬುದಾಗಿ ಗ್ರಾಮಸ್ಥರು ಜಿಲ್ಲಾಡಳಿತ, ಜಿಪಂ, ತಾಪಂ, ಗ್ರಾಪಂ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಅಧಿಕಾರಿಗಳಿಂದ ಪರಿಶೀಲನೆ:

ವಾಂತಿ ಬೇಧ, ಸಾವಿನ ಪ್ರಕರಣಗಳ ಹಿನ್ನೆಲೆಯಲ್ಲಿ ಶನಿವಾರ ತಹಸೀಲ್ದಾರ್ ಎಂ.ಬಿ.ಅಶ್ವತ್ಥ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಷಣ್ಮುಖಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್‌, ಡಾ.ಎಂ.ಕೆ.ರುದ್ರಸ್ವಾಮಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಕೆ.ನಟರಾಜ, ಡಾ.ಭುವನೇಶ ನಾಯ್ಕರನ್ನು ಒಳಗೊಂಡ ತಂಡವು ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿತು. ಗ್ರಾಮಸ್ಥರು ತಮ್ಮ ಊರಿಗೆ ಶುದ್ಧ ನೀರು ಪೂರೈಸುವಂತೆ, ಸಾವು-ನೋವಿನ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಏನು ಕಾರಣವೆಂದು ಸ್ಪಷ್ಟವಾಗಲಿ: ಗ್ರಾಮಸ್ಥರು

ಊರಿನ ಮೂರು ಹಿರಿಯ ಜೀವಗಳ ಸಾವಿಗೆ ಕಲುಷಿತ ನೀರಿನ ಪೂರೈಕೆಯೇ ಕಾರಣ. ಇಂತಹ ನೀರು ಕುಡಿದು 30ಕ್ಕೂ ಹೆಚ್ಚು ಮಂದಿ ಕಳೆದೊಂದು ವಾರದಿಂದಲೂ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿರುವುದು ಸಾಮಾನ್ಯವಾಗಿದೆ. ಆದರೆ, ಇದನ್ನೆಲ್ಲಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೇ, ನೀರಿನ ಸ್ಯಾಂಪಲ್ ಪರೀಕ್ಷೆ ಮಾಡಿಸಿದ್ದು, ನೀರು ಕುಡಿಯಲು ಯೋಗ್ಯವಾಗಿದೆಯೆಂಬ ಸಬೂಬು ಹೇಳುತ್ತಿದ್ದಾರೆ. 30ಕ್ಕೂ ಮಂದಿ ವಾಂತಿ, ಬೇಧಿಯಿಂದ ಬಳಲುತ್ತಿದ್ದು, ಇದಕ್ಕೆ ಏನು ಕಾರಣ ಎಂಬುದು ಸ್ಪಷ್ಟವಾಗಬೇಕಲ್ಲವೇ ಎಂಬುದಾಗಿ ಗ್ರಾಮಸ್ಥರು ಪ್ರಶ್ನಿಸುತ್ತಾರೆ.

ಕಲುಷಿತ ನೀರು ಸಾವಿಗೆ ಕಾರಣವಲ್ಲ: ಡಿಎಚ್‌ಒ

ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟ ಕೆಂಚಮ್ಮನ ಸಾವಿಗೆ ಕಲುಷಿತ ನೀರು ಕಾರಣವಲ್ಲ. ಕೆಂಚಮ್ಮ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಕಳೆದೊಂದು ವಾರದ ಅವಧಿಯಲ್ಲಿ ಮೃತಪಟ್ಟಿರುವ ಸಾವಿತ್ರಮ್ಮ, ಸೋಮಣ್ಣ ಎಂಬುವರು ಅನಾರೋಗ್ಯದ ಕಾರಣಕ್ಕೆ ಮೃತಪಟ್ಟಿದ್ದಾರೆಯೇ ಹೊರತು ಕಲುಷಿತ ನೀರು ಸಾವಿಗೆ ಕಾರಣವಲ್ಲ. ಮತ್ತಿ ಗ್ರಾಮಸ್ಥರಿಗೆ ಪೂರೈಸುವ ನೀರಿನ ಸ್ಯಾಂಪಲ್ ಪರೀಕ್ಷೆ ಮಾಡಿಸಿದ್ದು, ನೀರು ಕುಡಿಯಲು ಯೋಗ್ಯವಾಗಿದೆಯೆಂಬ ವರದಿ ಬಂದಿದೆಯೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ ಸ್ಪಷ್ಟಪಡಿಸಿದ್ದಾರೆ.