ಕಟ್ಟಡ ಕುಸಿತ ದುರಂತಕ್ಕೆ ಮತ್ತೊಬ್ಬ ಎಂಜಿನಿಯರ್‌ ತಲೆದಂಡ

| Published : Oct 25 2024, 01:47 AM IST

ಸಾರಾಂಶ

ಬಾಬುಸಾ ಪಾಳ್ಯದಲ್ಲಿ ಕಟ್ಟಡ ಕುಸಿದು ಎಂಟು ಮಂದಿ ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ, ಗುರುವಾರ ಮತ್ತೊಬ್ಬ ಎಂಜಿನಿಯರ್‌ ಅಮಾನತುಗೊಳಿಸಿ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಾಬುಸಾ ಪಾಳ್ಯದಲ್ಲಿ ಕಟ್ಟಡ ಕುಸಿದು ಎಂಟು ಮಂದಿ ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ, ಗುರುವಾರ ಮತ್ತೊಬ್ಬ ಎಂಜಿನಿಯರ್‌ ಅಮಾನತುಗೊಳಿಸಿ ಆದೇಶಿಸಿದೆ.

ಬಿಬಿಎಂಪಿಯ ಕೆ.ಆರ್‌.ಪುರ ಯೋಜನಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹಾಗೂ ಹೊರಮಾವು ವಿಭಾಗದ ಹೆಚ್ಚುವರಿ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಮೇಶ್‌ ಅವರನ್ನು ಅಮಾನತುಗೊಳಿಸಲಾಗಿದೆ.

ಬಾಬುಸಾಪಾಳ್ಯದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿಯ ಕಾಯ್ದೆ ಪ್ರಕಾರ ನೋಟಿಸ್‌ ನೋಡಿದ್ದರೂ ಕಟ್ಟಡ ಉಪ ವಿಧಿ ಪ್ರಕಾರ ಅನಧಿಕೃತ ಕಟ್ಟಡ ತೆರವುಗೊಳಿಸಿಲ್ಲ. ಇದೀಗ ಆ ನಿರ್ಮಾಣ ಹಂತದ ಕಟ್ಟಡ ಕುಸಿದು ಎಂಟು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಕಾರ್ಮಿಕರ ಸಾವಿಗೆ ಕಾರಣಕರ್ತರಾಗಿದ್ದಾರೆ ಎಂದು ಮಹದೇವಪುರದ ವಲಯ ಆಯುಕ್ತರು ವರದಿ ನೀಡಿದ್ದಾರೆ. ಇದು ಗಂಭೀರ ಕರ್ತವ್ಯ ಲೋಪವಾಗಿದೆ. ಹೀಗಾಗಿ, ಇಲಾಖಾ ವಿಚಾರಣೆ ನಿರೀಕ್ಷಿಸಿ ಸೇವೆಯಿಂದ ಅಮಾನತುಗೊಳಿಸಿ ಬಿಬಿಎಂಪಿಯ ಆಡಳಿತ ವಿಭಾಗದ ಉಪ ಆಯುಕ್ತರು ಗುರುವಾರ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಬುಧವಾರ ಇದೇ ಕಟ್ಟಡ ಕುಸಿತಕ್ಕೆ ಸಂಬಂಧಿಸಿದಂತೆ ಹೊರಮಾವು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ವಿನಯ್‌ ಅವರನ್ನು ಅಮಾನತುಗೊಳಿಸಲಾಗಿತ್ತು.