ಕಬ್ಬಿನ ದರ ನಿಗದಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೈಗೊಂಡ ರೈತರ ಪಾದಯಾತ್ರೆ ಭಾನುವಾರ ಸಂಜೆ ಧಾರವಾಡ ಜಿಲ್ಲೆ ಪ್ರವೇಶಿಸಿದೆ. ದಸರಾ ಹಬ್ಬದೊಳಗೆ ಎಂಎಸ್‌ಪಿ ದರ ನಿಗದಿ ಆಗದೇ ಇದ್ದರೆ ಅ. 22ರಂದು ಧಾರವಾಡದಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತರನ್ನು ಸೇರಿಸಿ ಹೋರಾಟ ಮಾಡುವ ಮತ್ತೊಂದು ಎಚ್ಚರಿಕೆಯನ್ನು ರೈತರು ನೀಡಿದ್ದಾರೆ.

ಭಾನುವಾರ ಧಾರವಾಡ ಪ್ರವೇಶಿಸಿದ ರೈತರ ಪಾದಯಾತ್ರೆ

ಕನ್ನಡಪ್ರಭ ವಾರ್ತೆ ಧಾರವಾಡಕಬ್ಬಿನ ದರ ನಿಗದಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೈಗೊಂಡ ರೈತರ ಪಾದಯಾತ್ರೆ ಭಾನುವಾರ ಸಂಜೆ ಧಾರವಾಡ ಜಿಲ್ಲೆ ಪ್ರವೇಶಿಸಿದೆ. ದಸರಾ ಹಬ್ಬದೊಳಗೆ ಎಂಎಸ್‌ಪಿ ದರ ನಿಗದಿ ಆಗದೇ ಇದ್ದರೆ ಅ. 22ರಂದು ಧಾರವಾಡದಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತರನ್ನು ಸೇರಿಸಿ ಹೋರಾಟ ಮಾಡುವ ಮತ್ತೊಂದು ಎಚ್ಚರಿಕೆಯನ್ನು ರೈತರು ನೀಡಿದ್ದಾರೆ.

ಶನಿವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿಯ ಬಳಿಕ ರೈತರ ಹೋರಾಟದ ಕಿಚ್ಚು ಕಿತ್ತೂರಿನಲ್ಲಿ ಶಮನಗೊಳ್ಳುವ ನಿರೀಕ್ಷೆ ಬಹಳಷ್ಟಿತ್ತು. ಆದರೆ ಅದು ವಿಫಲಗೊಂಡು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೇ ರೈತರನ್ನು ಭೇಟಿ ಮಾಡಿ ಚರ್ಚೆ ಮಾಡಬೇಕು ಎಂದು ರೈತ ಮುಖಂಡರು ಪಟ್ಟು ಹಿಡಿದರು. ಹೀಗಾಗಿ ಭಾನುವಾರ ಮಧ್ಯಾಹ್ನ ಬೆಳಗಾವಿ ಜಿಲ್ಲೆಯ ಕಿತ್ತೂರಿನಿಂದ ಹೊರಟು ರೈತರು ಧಾರವಾಡ ಗಡಿ ಗ್ರಾಮ ತೇಗೂರು ಪ್ರವೇಶಿಸಿದರು.ಅಲ್ಲಿ ರಾತ್ರಿ 9ರ ವರೆಗೂ ನಡೆದ ಸಮಾವೇಶದಲ್ಲಿ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್, ಧಾರವಾಡ ಡಿಸಿ ಆರ್. ಸ್ನೇಹಲ್, ಐಪಿಎಸ್ ಅಧಿಕಾರಿ ಭೀಮಾಶಂಕರ ಗುಳೇದ, ಧಾರವಾಡ ಪೊಲೀಸ್ ಕಮಿಷನರ್ ಭೂಷಣ ಬೊರಸೆ, ಧಾರವಾಡ ಎಸ್ಪಿ ಗುಂಜನ್ ಆರ್ಯ ಪಾದಯಾತ್ರೆ ಕೈಬಿಡಲು ನಡೆಸಿದ ಪ್ರಯತ್ನ ಸಹ ವಿಫಲವಾಗಿ ಎಂಎಸ್‌ಪಿ ದರ ನಿಗದಿ ಆಗುವ ವರೆಗೂ ಹೋರಾಟ ಮಾಡಲು ರೈತ ಮುಖಂಡ ಚೂನಪ್ಪ ಪೂಜಾರಿ ಘೋಷಿಸಿದರು.

ಅ. 14ರಂದು ಸಂಜೆ ಬೆಳಗಾವಿ ಹತ್ತರಗಿ ಟೋಲ ಗೇಟ್‌ನಿಂದ ರೈತರ ಈ ಪಾದಯಾತ್ರೆ ಆರಂಭ ಆಗಿದೆ. ನಾಲ್ಕು ದಿನದಿಂದ ಬೆಳೆಗಾವಿ ಜಿಲ್ಲೆಯ ವಿವಿಧೆಡೆ ಸಮಾವೇಶ ನಡೆಸಿದ ರೈತರು ಐದನೇ ದಿನ ಭಾನುವಾರ ಸಮೀಪದ ತೇಗೂರು ಬಳಿ ಮುಲ್ಲಾ ದಾಬಾ ಬಳಿ ಸಮಾವೇಶಗೊಂಡಿದ್ದಾರೆ.ಸಚಿವ ಪ್ರಹ್ಲಾದ್ ಜೋಶಿ ಅವರ ಮನೆ ಮುಂಧೆ ಧರಣಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಕಾನೂನಾತ್ಮಕ ಬೆಳವಣಿಗೆಯಲ್ಲಿ ರೈತ ಮುಖಂಡರು ದಸರಾ ಹಬ್ಬದ ಮರುದಿನವೇ ಅ. 22ರಂದು ಧಾರವಾಡ ಸಮೀಪದ ಯರಿಕೊಪ್ಪ ಬಳಿ ದೊಡ್ಡ ಸಂಖ್ಯೆಯಲ್ಲಿ ರೈತರನ್ನು ಸೇರಿಸಿ ಹೋರಾಟ ನಡೆಸಲು ತೀರ್ಮಾನಿಸಿದರು.

ತೇಗೂರ ರೈತ ಸಮಾವೇಶಕ್ಕೂ ಮುಂಚೆ ಭಾನುವಾರ ಮಧ್ಯಾಹ್ನ ರೈತ ಮುಖಂಡ ಚೂನಪ್ಪ ಪೂಜಾರಿ ಹಾಗೂ ಇತರೆ ಮುಖಂಡರ ಜತೆ ಯರಿಕೊಪ್ಪ ಬಳಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸಭೆ ನಡೆಸಿದ್ದು, ಕಾನೂನು-ಸುವ್ಯವಸ್ಥೆ, ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ರೈತರು ಎಷ್ಟು? ಹೋರಾಟದ ಸ್ವರೂಪ? ಸಂಚಾರ ದಟ್ಟಣೆ, ಭದ್ರತಾ ವ್ಯವಸ್ಥೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು.