ಸಾರಾಂಶ
ಹುಬ್ಬಳ್ಳಿ: ನಗರದ ಚನ್ನಪೇಟೆಯಲ್ಲಿ ಸಿಲಿಂಡರ್ ಸೋರಿಕೆಯಾಗಿ ತಂದೆ ಹಾಗೂ 7 ವರ್ಷ ಮಗು ತೀವ್ರವಾಗಿ ಗಾಯಗೊಂಡ ಪ್ರಕರಣ ನಡೆದ ಒಂದು ದಿನದಲ್ಲೇ ಇದೀಗ ಇಲ್ಲಿನ ಶಕ್ತಿ ಕಾಲನಿಯ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಮತ್ತೊಂದು ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿದೆ. ಇದರಿಂದ ಒಂದೇ ಕುಟುಂಬ ನಾಲ್ವರು ಗಾಯಗೊಂಡಿದ್ದಾರೆ.
ಶಕ್ತಿ ಕಾಲನಿಯ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಲ್ಲಿ ವಾಸವಾಗಿದ್ದ ಕ್ರೀಡಾ ತರಬೇತುದಾರ ಮಹಾಂತೇಶ ಬಳ್ಳಾರಿ (40), ಪತ್ನಿ ಗಂಗಮ್ಮ (38), ಮಕ್ಕಳಾದ ಕಾರುಣ್ಯ (9) ಮತ್ತು ಮನೋರಂಜನ್ (7)ತೀವ್ರವಾಗಿ ಗಾಯಗೊಂಡಿದ್ದಾರೆ.ಏನು ಕಾರಣ?: ಗ್ಯಾಸ್ ಸೋರಿಕೆಯಾಗಿದೆ. ಆದರೆ, ಇದು ಮನೆಯವರಿಗೆ ಗೊತ್ತಾಗಿಲ್ಲ. ತಡರಾತ್ರಿ ಕತ್ತಲಲ್ಲಿ ಮೊಬೈಲ್ ಟಾರ್ಚ್ ಆನ್ ಮಾಡುತ್ತಿದ್ದಂತೆ ಬೆಂಕಿ ತಗುಲಿದೆ. ಇದರಿಂದಾಗಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಕಿ ಕೆನ್ನಾಲಿಗೆ ಮನೆ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದರೆ, ಮನೆಯಲ್ಲಿನ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಘಟನೆ ನಡೆಯುತ್ತಿದ್ದ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಹಾಗೂ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.ಗಾಯಾಳುಗಳನ್ನು ಕೆಎಂಸಿಆರ್‌ಐಗೆ ದಾಖಲಿಸಲಾಗಿದ್ದು, ಬೆಂಕಿಯಿಂದ ಗಂಗಮ್ಮ ಅವರ ದೇಹ ಶೇ. 65 ಭಾಗ, ಮಹಾಂತೇಶ ಶೇ.15, ಮನೋರಂಜನ ಶೇ. 13, ಕಾರುಣ್ಯ ಶೇ. 8ರಷ್ಟು ಭಾಗ ಸುಟ್ಟಿದೆ. ಗಂಗಮ್ಮ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರಿಗೂ ಚಿಕಿತ್ಸೆ ಮುಂದುವರಿದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಶಹರ ತಹಸೀಲ್ದಾರ್ ಮಹೇಶ ಹಾಗೂ ಅಧಿಕಾರಿಗಳ ತಂಡ ಗುರುವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಸ್ಥಿತಿಗತಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ, ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ಘಟನೆ ಸಂಭವಿಸಿದ್ದು, ಗ್ಯಾಸ್ ಸಿಲಿಂಡರ್ ಸ್ಫೋಟವಾಗಿಲ್ಲ. ಘಟನೆಯಲ್ಲಿ ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಗಾಯಗಳಾಗಿದ್ದು, ಅದರಲ್ಲಿ ಗಂಗಮ್ಮ ಎನ್ನುವರಿಗೆ ತೀವ್ರವಾದ ಗಾಯವಾಗಿದೆ, ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಮಾಹಿತಿ ನೀಡಿದರು.
ಪದೇ ಪದೇ ಘಟನೆ: ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಪೇಟೆಯಲ್ಲಿ ಬುಧವಾರ ಬೆಳಗಿನಜಾವ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅವಘಡ ಪ್ರಕರಣದಲ್ಲಿ ನಾಲ್ವರು ಗಾಯಗೊಂಡಿದ್ದರು. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ. ಅದಾದ ಒಂದೇ ದಿನದಲ್ಲೇ ಶಕ್ತಿಕಾಲನಿಯಲ್ಲಿ ಗ್ಯಾಸ್ ಸೋರಿಕೆಯಿಂದಲೇ ಅಗ್ನಿ ಅವಘಡ ನಡೆದಿದೆ. ಕಳೆದ ಏಳೆಂಟು ತಿಂಗಳಲ್ಲಿ ಗ್ಯಾಸ್ ಸೋರಿಕೆ ಉಂಟಾಗಿ ನಗರದಲ್ಲಿ 10ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರೆ, 7-8 ಜನ ಗಾಯಗೊಂಡಿದ್ದಾರೆ. ಹಾಗಾಗಿ ಅಡುಗೆ ಗ್ಯಾಸ್ ಬಳಕೆದಾರರು ಸೂಕ್ತ ಮುಂಜಾಗ್ರತಾ ಕ್ರಮದ ಜತೆಗೆ ಎಚ್ಚರಿಕೆ ವಹಿಸಬೇಕು. ಪದೇ ಪದೇ ಗ್ಯಾಸ್ ಸೋರಿಕೆಯಿಂದ ಉಂಟಾಗುತ್ತಿರುವ ದುರ್ಘಟನೆಗಳಿಂದಾಗಿ ಜನರಲ್ಲಿ ಆತಂಕದಲ್ಲಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂಬುದು ಪ್ರಜ್ಞಾವಂತರ ಆಗ್ರಹ.ಗಾಯಾಳುಗಳ ಆರೋಗ್ಯ ವಿಚಾರಿಸಿದ ಹೊರಟ್ಟಿ: ಇಲ್ಲಿಯ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಗುರುವಾರ ವಿಚಾರಿಸಿ, ಹೆಚ್ಚಿನ ಚಿಕಿತ್ಸಾ ಸೌಲಭ್ಯ ನೀಡಲು ವೈದ್ಯರಿಗೆ ಸೂಚಿಸಿದರು.