ಸಾರಾಂಶ
ಕಪ್ಪುಸೈನಿಕ ಹುಳು ಮೊಟ್ಟೆ ಉತ್ಪಾದನಾ ಘಟಕಕ್ಕೆ ಅಂಕೋಲ ಪುರಸಭೆ ಅಧ್ಯಕ್ಷರು, ಅಧಿಕಾರಿಗಳ ಭೇಟಿ। ಪರಸ್ಪರ ವಿಚಾರ ವಿನಿಮಯ
ಕನ್ನಡಪ್ರಭ ವಾರ್ತೆ, ತರೀಕೆರೆಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆಗಳಿಂದ ಒಣ, ಹಸಿ ಕಸ ಸಂಗ್ರಹಿಸಿ, ತ್ಯಾಜ್ಯದ ಸಮರ್ಪಕ ನಿರ್ವಹಣೆಗೆ ಕಸದಿಂದ ಗೊಬ್ಬರ ತಯಾರಿಕೆ ಘಟಕದ ಕಾರ್ಯವೈಖರಿಯಿಂದ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿದ್ದ ತರೀಕೆರೆ ಪುರಸಭೆ ಕುವೆಂಪು ವಿಶ್ವವಿದ್ಯಾನಿಲಯ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಕಸ ವಿಲೇವಾರಿ, ಸ್ವಚ್ಛತೆ ಕುರಿತ ವಿಚಾರ ವಿನಿಮಯದ ಮೂಲಕ ಖ್ಯಾತಿಗೆ ಪಾತ್ರವಾಗಿತ್ತು. ಇದೀಗ ತರೀಕೆರೆ ಪುರಸಭೆಗೆ ತ್ಯಾಜ್ಯ ನಿರ್ವಹಣೆ, ಕಪ್ಪು ಸೈನಿಕ ಹುಳು ಮೊಟ್ಟೆ ಉತ್ಪಾದನಾ ಘಟಕ ಕಾರ್ಯ ಮುಖೇನ ಮತ್ತೊಂದು ಹೆಸರಾಗಿದೆ.ತರೀಕೆರೆ ಪುರಸಭೆಯಿಂದ ಪಟ್ಟಣದ ಹೊರ ವಲಯದಲ್ಲಿ ಸ್ಥಾಪಿಸಿರುವ ವಿಶಾಲವಾದ ಕಸ ನಿರ್ವಹಣ, ಘನ ತ್ಯಾಜ್ಯ ಘಟಕ ಮತ್ತು ಕಪ್ಪುಸೈನಿಕ ಹುಳು ಮೊಟ್ಟೆ ಉತ್ಪಾದನಾ ಘಟಕಕ್ಕೆ ಅಂಕೋಲ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಪುರಸಭೆ ಸದಸ್ಯರು ಮತ್ತು ಅಂಕೋಲ ಪುರಸಭೆ ಮುಖ್ಯಾಧಿ ಕಾರಿ ಮತ್ತಿತರರು ಭೇಟಿ ನೀಡುವ ಮೂಲಕ ಒಣ ಕಸ, ಹಸಿ ಕಸ ಸಂಗ್ರಹಣೆ ಮತ್ತು ಅದರ ವಿಲೇವಾರಿ, ತ್ಯಾಜ್ಯ ಘಟಕ ದಲ್ಲಿ ವಿವಿಧ ಕಸಗಳನ್ನು ಬೇರ್ಪಡಿಸುವಿಕೆಯಂತಹ ವಿಶೇಷ ವ್ಯವಸ್ಥೆ, ವಿವಿಧ ಬಗೆಯ ಯಂತ್ರಗಳ ನೆರವಿನಿಂದ ಸೈನಿಕ ಹುಳು ಮೊಟ್ಟೆ ಉತ್ಪಾದನಾ ಘಟಕದಿಂದ ಅತ್ಯಂತ ಉತ್ಕೃಷ್ಠ ಗೊಬ್ಬರ ತಯಾರಿಕೆ ಅದರ ನಿರ್ವಹಣೆ ಹಾಗೂ ವಿಲೇವಾರಿ ವಿಷಯಗಳ ಪರಸ್ಪರ ವಿನಿಮಯ ಮಾಡಿಕೊಳ್ಳುವಂತಹ ಸಂದರ್ಭ ಒದಗಿಬಂದಿತು. ಇದು ತರೀಕೆರೆ ಪುರಸಭೆಯ ಹೆಮ್ಮೆಯ ವಿಷಯ.ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮೈಸೂರಿನಲ್ಲಿ ನಗರಾಭವೃದ್ಧಿ ಸಂಸ್ಥೆಯಿಂದ ನಗರ ಸ್ಥಳೀಯ ಸಂಸ್ಥೆಗಳ ಪೌರಾ ಯುಕ್ತರು ಮತ್ತು ಮುಖ್ಯಾಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲೂ ತರೀಕೆರೆ ಪುರಸಭೆ ಸಾವಯವ ತ್ಯಾಜ್ಯ ವಿಲೇವಾರಿಯಲ್ಲಿ ಅಳವಡಿಸಿ ಕೊಂಡಿರುವ ಕಪ್ಪು ಸೈನಿಕ ಹುಳು ಮೊಟ್ಟೆ ಉತ್ಪಾದನೆ, ಲಾರ್ವ ಮೂಲಕ ಉತ್ತಮ ಗುಣಮಟ್ಟದ ಗೊಬ್ಬರ ತಯಾರಿಕೆ ಬಗ್ಗೆ ಪ್ರಸ್ತಾಪಿಸಿದ್ದ ವಿಷಯ ಮೆಚ್ಚುಗೆ ಪಾತ್ರವಾಗಿತ್ತು. ಈ ವಿಚಾರವನ್ನು ಕುವಂಪು ವಿವಿಯಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲೂ ಪ್ರಸ್ತಾಪಿಸಿದರು.
ಅಂಕೋಲಾ ಪುರಸಭೆ ತಂಡ ತರೀಕೆರೆ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತರೀಕೆರೆ ಪುರಸಭೆ ಪರಿಸರ ಅಭಿಯಂತರರಾದ ತಾಹಿರಾ ತಸ್ನೀಂ ಮಾತನಾಡಿ, ಪೌರಕಾರ್ಮಿಕರು ಪ್ರತಿನಿತ್ಯ ಮನೆ ಮನೆಗೆ ತೆರಳಿ ಹಸಿ ಕಸ, ಒಣ ಕಸ ಮತ್ತು ತ್ಯಾಜ್ಯ ಸಂಗ್ರಹಿಸಿ, ಪಟ್ಟಣದಲ್ಲಿ ಸ್ವಚ್ಛತೆಗೂ ಅವರ ಶ್ರಮವೇ ಕಾರಣ. ಘನತ್ಯಾಜ್ಯ ಘಟಕದಲ್ಲಿ ವಿವಿಧ ಕಸಗಳನ್ನು ಉತ್ಕೃಷ್ಠ ಗೊಬ್ಬರವಾಗಿ ಮಾರ್ಪಡಿಸುವಲ್ಲಿ ಕಪ್ಪು ಸೈನಿಕ ಹುಳು ಗಳದ್ದೇ ಪ್ರಮುಖ ಪಾತ್ರವಾಗಿದೆ ಎಂದು ಹೇಳಿದರು.ಕಪ್ಪು ಸೈನಿಕ ಹುಳುಗಳು ಎಲ್ಲ ಬಗೆಯ ಕಸಗಳನ್ನು ತಿಂದು ಹಾಕುತ್ತವೆ. ಉತ್ತಮ ಗೊಬ್ಬರದ ಮಾರುಕಟ್ಟೆ ಸಿದ್ಧಗೊಳಿಸಲು ಬೃಹತ್ ಯಂತ್ರ ಗಳನ್ನು ಬಳಸಲಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಪ್ರಥಮ ಬಾರಿಗೆ ತರೀಕೆರೆ ಪುರಸಭೆಯಿಂದ ಕಪ್ಪು ಸೈನಿಕ ಹುಳುಗಳ ಮೊಟ್ಟೆ ಉತ್ಪಾದನಾ ಘಟಕ ಸ್ಥಾಪಿಸಿ ದೊಡ್ಡ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಗೊಬ್ಬರ ಸಿದ್ಧಗೊಳಿಸಲಾಗುತ್ತಿದೆ. ಅಂಕೋಲದಿಂದ ತಾವು ಈ ಘನ ತ್ಯಾಜ್ಯ ಘಟಕ ವೀಕ್ಷಿಸಲು ಆಗಮಿಸಿರುವುದು ಸಂತೋಷ ತಂದಿದೆ ಎಂದರು.ಶಾಸಕ ಜಿ.ಎಚ್.ಶ್ರೀನಿವಾಸ್, ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು, ಪೌರಕಾರ್ಮಿಕರು ತರೀಕೆರೆ ಪಟ್ಟಣವನ್ನು ಸ್ವಚ್ಛವಾಗಿಡುವಲ್ಲಿ ನೀಡುತ್ತಿರುವ ಸಹಕಾರ ಪುರಸಭೆ ಈ ಕೀರ್ತಿಗೆ ಕಾರಣವಾಗಿದೆ ಎಂದು ಹೇಳಿದರು.
ಅಂಕೋಲ ಪುರಸಭೆ ಅಧ್ಯಕ್ಷ ಸೂರಜ್ ನಾಯ್ಕ ಮಾತನಾಡಿ ತರೀಕೆರೆ ಪುರಸಭೆ ತ್ಯಾಜ್ಯ ಘಟಕ ವೀಕ್ಷಿಸಲು ಖುಷಿ ಎನಿಸುತ್ತದೆ. ಇದೇ ರೀತಿ ನಾವು ಕೂಡ ನಿರ್ವಹಿಸಬೇಕು ಎಂದು ಹೇಳಿದರು.ಅಂಕೋಲ ಪುರಸಭೆ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಮುಖ್ಯಾಧಿಕಾರಿ ಎಚ್.ಅಕ್ಷತಾ ಮಾತನಾಡಿದರು. ತರೀಕೆರೆ ಪುರಸಭೆ ಪೌರಕಾರ್ಮಿಕರು, ಅಂಕೋಲ ಪುರಸಭೆ ಸದಸ್ಯರು, ಪುರಸಭೆ ಸದಸ್ಯ ಟಿ.ಜಿ.ಅಶೋಕ್ ಕುಮಾರ್ ಮಾತನಾಡಿ, ತರೀಕೆರೆ ಪುರಸಭೆ ವ್ಯವಸ್ಥಾಪಕರಾದ ವಿಜಯಕುಮಾರ್, ಕಂದಾಯ ಅಧಿಕಾರಿ ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಕರಾದ ಮಹೇಶ್ವರಪ್ಪ, ಗಿರೀಶ್ ಕುಮಾರ್, ಪ್ರಕಾಶ್ , ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.22ಕೆಟಿಆರ್.ಕೆ.04ಃ ತರೀಕೆರೆ ಪುರಸಭೆ ಕಸ ನಿರ್ವಹಣೆ ಘನತ್ಯಾಜ್ಯ ಘಟಕಕ್ಕೆ ಅಂಕೋಲ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಪುರಸಭೆ ಸದಸ್ಯರು ಭೇಟಿ ನೀಡಿ ಘನತ್ಯಾಜ್ಯ ಘಟಕದ ಕಾರ್ಯ ಪರಿಶೀಲಿಸಿದರು. ಪುರಸಭೆ ಸದಸ್ಯ ಟಿ.ಜಿ.ಅಶೋಕ್ ಕುಮಾರ್, ಪುರಸಭೆ ಪರಿಸರ ಅಭಿಯಂತರರಾದ ತಾಹಿರಾ ತಸ್ನೀಂ ಮತ್ತಿತರರು ಇದ್ದರು.