ಸಾರಾಂಶ
- ಶೃಂಗೇರಿ ಮುಂದುವರಿದ ವರುಣನ ಆರ್ಭಟ । ಜನಜೀವನ ತತ್ತರ । ಗಾಳಿ ಆರ್ಭಟಕ್ಕೆ ಧರೆಗುರುಳುತ್ತಿರುವ ಮರಗಳು
ಕನ್ನಡಪ್ರಭ ವಾರ್ತೆ, ಶೃಂಗೇರಿತಾಲೂಕಿನಾದ್ಯಂತ ವರುಣನ ಆರ್ಭಟ ಹಾಗೂ ಗಾಳಿಯಿಂದ ವ್ಯಾಪಕ ಹಾನಿಯುಂಟಾಗುತ್ತಿರುವ ನಡುವೆ ಮಳೆ ಗಾಳಿ ಮುಂದುವರಿದು ರಾತ್ರಿಯಿಡಿ ಸುರಿದ ಮಳೆಯಿಂದ ಭಾನುವಾರ ಬೆಳಿಗ್ಗೆ ಮಂಗಳೂರು ಶೃಂಗೇರಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರು ಬಳಿ ಗುಡ್ಡಕುಸಿದು ಮರ ಹಾಗೂ ಮಣ್ಣು ರಸ್ತೆಯ ಮೇಲೆ ಬಿದ್ದ ಪರಿಣಾಮ ಸಂಚಾರ ಬಂದ್ ಆಗಿತ್ತು.
ಕೆಲಹೊತ್ತು ಜೆಸಿಬಿ, ಹಿಟಾಚಿ ತೆರವು ಕಾರ್ಯಾಚರಣೆ ನಡೆಸಿ ಮತ್ತು ಸಂಚಾರ ಪುನಾರಂಭಗೊಂಡಿತು. ಶನಿವಾರ ರಾತ್ರಿಯೂ ಭಾರೀ ಮಳೆಯಿಂದ ಗುಡ್ಡ ಕುಸಿದು ಬಿದ್ದು ಸಂಚಾರ ಬಂದ್ ಆಗಿತ್ತು. ರಾತ್ರೋರಾತ್ರಿ ಜೆಸಿಬಿ ಕಾರ್ಯಾಚರಣೆ ನಡೆಸಿ ಸಂಚಾರ ಪುನರ್ ಆರಂಭಗೊಳಿಸಲಾಗಿತ್ತು.ಗಾಳಿಯಿಂದಾಗಿ ಶೆಟ್ಟಿಹಳ್ಳಿಯಲ್ಲಿ ಮನೆ ಕುಸಿದು ಹಾನಿಯುಂಟಾಗಿದೆ. ಶೃಂಗೇರಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶ ದೆಲ್ಲೆಡೆ ಕಳೆದ 4ದಿನಗಳಿಂದ ವಿದ್ಯುತ್ ಸಂಪರ್ಕ ಸ್ಥಗಿತವಾಗಿ ಕುಡಿಯುವ ನೀರು, ಮೊಬೈಲ್, ದೂರವಾಣಿ ಸೇರಿದಂತೆ ಅಗತ್ಯ ಕೆಲಸ ಕಾರ್ಯಗಳಿಗೆ ಪರದಾಡುವಂತಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾ. ಹೆದ್ದಾರಿ 169 ರ ಶೃಂಗೇರಿ ಆನೆ ಗುಂದ, ತ್ಯಾವಣ ಬಳಿ ಗುಡ್ಡಕುಸಿದು ಮಣ್ಣು ರಾಶಿಯಾಗಿ ರಸ್ತೆಯ ಮೇಲೆ ಬಿದ್ದಿರು ವುದರಿಂದ ವಾಹನ ಸಂಚಾರಕ್ಕೆ ಅಡ್ಡಿ ಯಾಗಿತ್ತು. ಸತತ ಮಳೆಗೆ ಗುಡ್ಡಗಳು ರಸ್ತೆಯ ಮೇಲೆ ಬೀಳುತ್ತಿದೆ. ಭಾನುವಾರವೂ ಗಾಳಿ ಆರ್ಭಟ ಜೋರಾಗಿದ್ದು ಕೆರೆಕಟ್ಟೆ, ನೆಮ್ಮಾರು, ಕಿಗ್ಗಾ ಸೇರಿದಂತೆ ವಿವಿಧೆಡೆ ಮರಗಳು ರಸ್ತೆ, ವಿದ್ಯುತ್ ಲೈನ್ ಮೇಲೆ ಉರುಳಿ ಬೀಳುತ್ತಿವೆ.
ತುಂಗಾನದಿ ಉಗಮಸ್ಥಾನ ಪಶ್ಚಿಮ ಘಟ್ಟಗಳ ತಪ್ಪಲಿನ ಎಸ್. ಕೆ. ಬಾರ್ಡರ್, ಗುಲಂಜಿಮನೆ, ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಶನಿವಾರ ಸಂಜೆಯಿಂದ ತುಂಗಾನದಿ ಪ್ರವಾಹ ಹೆಚ್ಚಾಗಿ ರಾತ್ರಿ ದಿಢೀರ್ ಗಾಂಧಿ ಮೈದಾನ ಸಂಪೂರ್ಣ ಜಲಾವೃತ ಗೊಂಡಿತು. ಶೃಂಗೇರಿ ಕೆವಿಆರ್ ರಸ್ತೆ , ಬೈಪಾಸ್ ರಸ್ತೆ ಉದ್ದಕ್ಕೂ ಪ್ರವಾಹದಲ್ಲಿ ಮುಳುಗಡೆಯಾಗಿತ್ತು. ಶ್ರೀಮಠದ ತುಂಗಾನದಿ ತೀರದ ಕಪ್ಪೆ ಶಂಕರ ದೇವಾಲಯ, ನರಸಿಂಹವನದ ತುಂಗಾನದಿ ತೀರದ ಸಂಧ್ಯಾವಂದನೆ ಮಂಟಪಕ್ಕೂ ನೀರು ನುಗ್ಗಿತ್ತು. ಶ್ರೀಮಠದ ನರಸಿಂಹವಕ್ಕೆ ಹೋಗುವ ದಾರಿ ಸಂಪರ್ಕ ಕಡಿತಗೊಂಡಿತ್ತು,ಶೃಂಗೇರಿ ವಿದ್ಯಾರಣ್ಯ ಪುರ ಸಂಪರ್ಕ ಕಲ್ಪಿಸುವ ರಸ್ತೆಗೂ ಪ್ರವಾಹ ಬಂದು ಬೆಳಗಿನವರೆಗೂ ಸಂಪರ್ಕ ಮತ್ತೆ ಕಡಿತ ಗೊಂಡಿತ್ತು. ಕುರಬಗೇರಿ ರಸ್ತೆ ಮೇಲೂ ಪ್ರವಾಹ ತುಂಬಿ ಕೆಲ ಮನೆ, ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿತ್ತು. ಗಾಂಧಿ ಮೈದಾನ ಕಲ್ಕಟ್ಟೆ ಸಂಪರ್ಕ ಕಲ್ಪಿಸುವ ತೂಗುಸೇತುವೆ ತುಂಬಿದ್ದರಿಂದ ಸಂಪರ್ಕ ಕಡಿದು. ನೆಮ್ಮಾರು ಹೊಳೆಹದ್ದು ಸಂಪರ್ಕ ತೂಗು ಸೇತುವೆ ಅರ್ಧ ಮುಳುಗಿದ್ದರಿಂದ ಸಂಪರ್ಕವೇ ಕಳೆದುಕೊಂಡಿದೆ.
ರಾತ್ರಿ ಗಾಂಧಿ ಮೈದಾನದಲ್ಲಿ ನೀರು ನುಗ್ಗಿ ಸಾಲುಗಟ್ಟಿ ನಿಂತಿದ್ದ ಪ್ರವಾಸಿ ವಾಹನಗಳು ನೀರಿನಲ್ಲಿ ಸಿಲುಕಿ ಕೊಂಡವು. ವಾಹನ ತೆರವು ಗೊಳಿಸಲು ಆರಂಭಿಸಿದರೂ ಪ್ರವಾಹದ ನೀರು ಹೆಚ್ಚಳವಾಗುತ್ತಲೇ ಇತ್ತು. ಕೆಲ ವಾಹನನಗಳನ್ನು ತೆರವು ಗೊಳಿಸಿದರೂ ಇನ್ನು ಹಲವು ವಾಹನಗಳು ನೀರಿನಲ್ಲಿ ಮುಳುಗಿದವು.ಅಂಗಡಿ ಹೋಟೇಲುಗಳಿಗೂ ನೀರು ನುಗ್ಗಿತು. ಗಾಳಿ ಮಳೆ ಆರ್ಭಟ ಮುಂದುವರಿದಿದೆ. ತುಂಗಾ ನದಿ ನೀರು ಬೈಪಾಸ್ ರಸ್ತೆಯಲ್ಲಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳೆಲ್ಲ ಇನ್ನೂ ಜಲಾವೃತವಾಗಿವೆ.27 ಶ್ರೀ ಚಿತ್ರ 2-
ಶೃಂಗೇರಿ ಸುತ್ತಮುತ್ತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶೃಂಗೇರಿ ಮಂಗಳೂರು ಸಂಪರ್ಕ ನೆಮ್ಮಾರು ಬಳಿ ಭಾನುವಾರ ಬೆಳಿಗ್ಗೆ ಮತ್ತೆ ಗುಡ್ಡಕುಸಿದಿದ್ದರಿಂದ ರಸ್ತೆ ಸಂಪರ್ಕ ಬಂದ್ ಆಗಿ ವಾಹನಗಳು ನಿಂತಿರುವುದು.27 ಶ್ರೀ ಚಿತ್ರ 3-ಶೃಂಗೇರಿ ಪಟ್ಟಣದ ವಾಹನನಿಲುಗಡೆ ಪ್ರದೇಶದಲ್ಲಿ ಶನಿವಾರ ರಾತ್ರಿ ತುಂಗಾ ನದಿಯ ಪ್ರವಾಹ ಹರಿಯುತ್ತಿರುವುದು.
27 ಶ್ರೀ ಚಿತ್ರ 4-ಶೃಂಗೇರಿ ಶ್ರೀ ಮಠದ ನರಸಿಂಹವನದ ತುಂಗಾ ನದಿ ತೀರದಲ್ಲಿರುವ ಸಂದ್ಯಾವಂದನ ಮಂಟಪ ಶನಿವಾರ ತುಂಗಾ ನದಿಯ ಪ್ರವಾಹದಲ್ಲಿ ಮುಳುಗಿರುವುದು.