ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಬೆಲೆ ಏರಿಕೆ ಗ್ಯಾರಂಟಿ ಕೊಡಲು ಹೊರಟಿದೆ. ದರ ಏರಿಕೆ ಮಾಡುವುದರಲ್ಲಿ ಸಿಎಂ ಸಿದ್ದರಾಮಯ್ಯ ನಿಸ್ಸೀಮರು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಕಿಡಿ ಕಾರಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ತಮ್ಮ ಪ್ರಣಾಳಿಕೆ ಮತ್ತೊಮ್ಮೆ ಓದಬೇಕು. ಪ್ರಣಾಳಿಕೆಯಲ್ಲಿ ಎಲ್ಲಾ ಸೌಲಭ್ಯ ಕೊಡುತ್ತೇವೆ ಅಂದಿದ್ದರು. ಈಗ ಅಧಿಕಾರಕ್ಕೆ ಬಂದು 16 ತಿಂಗಳಾದರೂ ₹865 ಕೋಟಿ ಹಾಲಿನ ಪ್ರೋತ್ಸಾಹ ಧನ ಕೊಟ್ಟಿಲ್ಲ. ಹಸುಗಳಿಗೆ ಮೇವು ಸಿಗುತ್ತಿಲ್ಲ. ಪಶು ಆಹಾರ ಬೆಲೆ ಸಹ ಏರಿಕೆ ಆಗಿದೆ ಎಂದು ದೂರಿದರು.
ಹಾಲು ಉತ್ಪಾದಕ ರೈತರಿಗೆ ನೀಡುವುದಾಗಿ ಹೇಳಿ ಹಾಲಿನ ದರ ಹೆಚ್ಚಳ ಮಾಡುತ್ತಿರುವ ಸರ್ಕಾರ ಗ್ರಾಹಕರ ಮೇಲೆ ಹೊರೆ ಹಾಕುತ್ತಿದೆ. ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ನೀಡುವುದಾಗಿ ಹೇಳುತ್ತಿದೆ. ಆದರೆ, ರೈತರಿಗೆ ಈಗಾಗಲೇ ನೀಡಬೇಕಿರುವ 865 ಕೋಟಿ ರು. ಪ್ರೋತ್ಸಾಹ ಧನ ಇನ್ನೂ ಬಾಕಿ ಇದೆ. ಇದನ್ನು ನೀಡದೆ ಮತ್ತೊಮ್ಮೆ ರೈತರ ಹೆಸರು ಹೇಳಿಕೊಂಡು ಗ್ರಾಹಕರ ಸುಲಿಗೆ ಮಾಡಲಾಗುತ್ತಿದೆ ಎಂದು ಹರಿಹಾಯ್ದರು.ಜೂನ್‍ನಲ್ಲಿ ಲೀಟರ್‌ಗೆ 5 ರು.ಜಾಸ್ತಿ ಮಾಡಲಾಗಿದೆ. ಹೀಗೆ ಜಾಸ್ತಿ ಮಾಡಿದ ದರಕ್ಕೆ50 ಮಿಲಿ ಹಾಲು ಹೆಚ್ಚುವರಿಯಾಗಿ ನೀಡುವುದು ಹೇಳಲಾಗಿತ್ತು. ಅದರೆ, ಅದನ್ನು ಪರೀಕ್ಷಿಸಿ ಖರೀದಿಸಲು ಗ್ರಾಹಕರಿಗೂ ಕಷ್ಟವಾಗುತ್ತಿದೆ. ಹೆಚ್ಚುವರಿ ಹಾಲನ್ನು ಬಹುತೇಕ ನಿಲ್ಲಿಸಲಾಗಿದೆ ಎಂದು ತಿಳಿಸಿದರು.
ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ, ಹಿಂಡಿ, ಬೂಸಾ ದರ ಹೆಚ್ಚಾಗಿದೆ. ಹೀಗಿದ್ದರೂ ಕೂಡ ಉತ್ಪಾದಕರಿಗೆ ನೀಡಬೇಕಿರುವ ಬಾಕಿ ನೀಡದೆ ಸತಾಯಿಸಲಾಗುತ್ತಿದೆ. ಇದು ಮುಖ್ಯಮಂತ್ರಿಗಳ ಬೆಲೆ ಏರಿಕೆಯ ಗ್ಯಾರಂಟಿಯಾಗಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಪ್ರಣಾಳಿಕೆಯನ್ನೇ ಅವರು ಮರೆತಿದ್ದಾರೆ. ಯಾವುದೇ ಕಾರಣಕ್ಕೂ ಹಾಲಿನ ದರ ಹೆಚ್ಚಳ ಮಾಡದಂತೆ ಆಗ್ರಹಿಸಿದರು.ಕೃಷಿ ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ರೈತ ಉತ್ಪಾದಕ ಸಂಘಗಳನ್ನು ಆರಂಭಿಸಲು ಯೋಜನೆ ರೂಪಿಸಿದೆ. ಇವುಗಳಿಗೆ ರಾಜ್ಯ ಸರ್ಕಾರ ಧನ ಸಹಾಯ ನೀಡಬೇಕಿದೆ. ರಾಜ್ಯದಲ್ಲಿ ಈ ರೀತಿಯ 750 ಸಂಘಗಳನ್ನು ತೆರೆಯಲು ಅವಕಾಶವಿದೆ. ಆದರೆ ಇದುವರೆಗೂ 480 ಎಫ್‌ಪಿಒ ಗಳನ್ನು ಮಾತ್ರ ಆರಂಭಿಸಲಾಗಿದೆ ಎಂದರು.
ಎಫ್‌ಪಿಒಗಳಿಗೆ ರಾಜ್ಯ ಸರ್ಕಾರ 54 ಕೋಟಿ ರು.ನೀಡಬೇಕಿದೆ. ಆದರೆ ಇದುವರೆಗೂ ನೀಡಿರುವುದು ಕೇವಲ 1.16 ಕೋಟಿ ಮಾತ್ರ. 15 ಬಾರಿ ಬಜೆಟ್ ಮಂಡನೆ ಮಾಡಿದ್ದೇನೆ ಎಂಬುದನ್ನು ಬಿಟ್ಟರೆ ಸಿದ್ದರಾಮಯ್ಯ ಸರ್ಕಾರ ದೀವಾಳಿತನದತ್ತ ಹೋಗಿದೆ ಎಂದು ಕಿಡಿಕಾರಿದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಸಿದ್ಧಲಿಂಗಪ್ಪ, ಉಪಾಧ್ಯಕ್ಷ ಗಣೇಶ್ ಬಿಳಕಿ, ಕುಮಾರ್ ನಾಯ್ಡು, ಕುಮಾರ್, ಕೆ.ವಿ. ಅಣ್ಣಪ್ಪ, ಚಂದ್ರಶೇಖರ್ ಇದ್ದರು.