ಸಾರಾಂಶ
ಬೆಂಗಳೂರು : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನ ದುರ್ಬಳಕೆಗೆ ಸಂಬಂಧಿಸಿದಂತೆ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದ್ದು, ಆ ಮೂಲಕ ಬಿಜೆಪಿ ಸರ್ಕಾರದ ಅವಧಿಯ ಮತ್ತೊಂದು ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಕೆಆರ್‌ಡಿಬಿ (ಆಗ ದತ್ತಾತ್ರೇಯ ಪಾಟೀಲ್ ರೇವೂರ ಅಧ್ಯಕ್ಷರಾಗಿದ್ದರು) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ರಚಿಸಲಾಗಿತ್ತು. 2020-21ರಿಂದ 2022-23ರ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ ಪ್ರತಿ ವರ್ಷ 100 ಕೋಟಿ ರು.ನಂತೆ ಒಟ್ಟು 300 ಕೋಟಿ ರು. ಅನುದಾನ ನೀಡಲಾಗಿತ್ತು.
ಕೆಕೆಆರ್‌ಡಿಬಿ ಇರುವಾಗ ಅದರ ಅಡಿ ಸಂಘ ರಚನೆ ಹಾಗೂ ಸಂಘಕ್ಕೆ ನೀಡಿರುವ ಅನುದಾನ ದುರ್ಬಳಕೆ ಕುರಿತಂತೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ ಅಕ್ರಮದ ಕುರಿತು ತನಿಖೆ ನಡೆಸುವಂತೆಯೂ ಆಗ್ರಹಿಸಿದ್ದರು. ಇದೀಗ ಕಾಂಗ್ರೆಸ್ ಸರ್ಕಾರ ಕೆಕೆಆರ್‌ಡಿಬಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಕ್ರಮದ ತನಿಖೆಗೆ ಮುಂದಾಗಿದೆ. ಅದಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ನೇತೃತ್ವದ ತನಿಖಾ ಸಮಿತಿ ರಚಿಸಲಾಗಿದ್ದು, 6 ತಿಂಗಳೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ.
ಕೋವಿಡ್ ವೇಳೆ ಪಿಪಿಇ ಕಿಟ್ ಖರೀದಿಯಲ್ಲಿ ಅಕ್ರಮ ನಡೆದಿದ್ದು, ಈ ಸಂಬಂಧ ಅಂದಿನ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ರಾಮುಲು ಅವರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸುವಂತೆ ನ್ಯಾ। ಕುನ್ಹಾ ಸಮಿತಿ ನೀಡಿದ್ದ ವರದಿ ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಅದರ ಬೆನ್ನಲ್ಲೇ ಕೆಕೆಆರ್‌ಡಿ ಪ್ರಕರಣವನ್ನೂ ತನಿಖೆಗೆ ಒಪ್ಪಿಸಿದೆ.
ರಮಣರೆಡ್ಡಿ ವರದಿ ಪರಿಶೀಲನೆಗೆ ಸೂಚನೆ:
ಕೆಕೆಆರ್‌ಡಿಬಿಯಲ್ಲಾಗಿರುವ ಅಕ್ರಮ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ ನೀಡಲಾದ ಅನುದಾನ ದುರ್ಬಳಕೆ ಕುರಿತಂತೆ 2023ರಲ್ಲಿಯೇ ಆಗ ಸೇವೆಯಲ್ಲಿದ್ದ ನಿವೃತ್ತ ಐಎಎಸ್ ಅಧಿಕಾರಿ ಡಾ. ಇ.ವಿ.ರಮಣರೆಡ್ಡಿ ಅವರಿಂದ ವರದಿ ತರಿಸಿಕೊಳ್ಳಲಾಗಿತ್ತು. ಆ ವರದಿಯನ್ನಾಧರಿಸಿ ಇದೀಗ ತನಿಖೆಗೆ ಆದೇಶಿಸಲಾಗಿದ್ದು, ತನಿಖಾ ಸಮಿತಿಯು ರಮಣ ರೆಡ್ಡಿ ಅವರ ವರದಿಯನ್ನೂ ಪರಿಶೀಲಿಸಿ, ತನಿಖೆ ನಡೆಸುವಂತೆ ನಿರ್ದೇಶಿಸಲಾಗಿದೆ.
3 ವರ್ಷಗಳ ಹಣ ವಿನಿಯೋಗದ ಪರಿಶೀಲನೆ:
ರಾಜ್ಯ ಸರ್ಕಾರದ ಆದೇಶದಂತೆ 2020-21ರಿಂದ 2022-23ರವರೆಗೆ ಕೆಕೆಆರ್‌ಡಿಬಿಗೆ ಸರ್ಕಾರದಿಂದ ಬಿಡುಗಡೆ ಮಾಡಲಾದ ಅನುದಾನ ಮತ್ತು ಅದರ ವಿನಿಯೋಗದ ಬಗ್ಗೆ ಪರಿಶೀಲಿಸಬೇಕು. ಆ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ ಬಿಡುಗಡೆ ಮಾಡಿರುವ 300 ಕೋಟಿ ರು. ವೆಚ್ಚ ಮಾಡುವಲ್ಲಿ ಅಕ್ರಮ ನಡೆದಿದೆ ಎಂಬ ಬಗ್ಗೆ ಹಾಗೂ ಕೆಕೆಆರ್‌ಡಿಬಿ ಅನುದಾನದಲ್ಲಿ ಕೋವಿಡ್ ಅವಧಿಯಲ್ಲಿ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿನ ಅಕ್ರಮ ಬಗ್ಗೆ ಪರಿಶೀಲಿಸಲು ಸೂಚಿಸಲಾಗಿದೆ.
ಕೋವಿಡ್ ಅವಧಿಯಲ್ಲಿ ಮೃತಪಟ್ಟ ಖಾಸಗಿ ಶಾಲಾ ಶಿಕ್ಷಕರ ಕುಟುಂಬದವರಿಗೆ ಸರ್ಕಾರದ ಅನುಮೋದನೆ ಇಲ್ಲದೇ 50 ಸಾವಿರ ರು. ಪರಿಹಾರ ನೀಡಿರುವುದು, ಕೆಕೆಆರ್‌ಡಿಬಿ ಅಧಿಕಾರ ಮೀರಿ ದೇಶಿಹಸುಗಳ ಸಾಕಣೆಗೆ 327.40 ಕೋಟಿ ರು. ಪ್ರೋತ್ಸಾಹಧನ ನೀಡಿರುವುದು, ಕಲ್ಯಾಣ ಕರ್ನಾಟಕ ವ್ಯಾಪ್ತಿಯ 6 ಜಿಲ್ಲೆಗಳಲ್ಲಿ 310.59 ಕೋಟಿ ರು. ವೆಚ್ಚದಲ್ಲಿ 1 ಕೋಟಿ ಸಸಿ ನೆಟ್ಟಿರುವ ಕುರಿತು ಹಾಗೂ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಆಚರಣೆಗಾಗಿ ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ಬಿಡುಗಡೆಯಾದ ಮೊತ್ತಕ್ಕಿಂತ ಹೆಚ್ಚುವರಿಯಾಗಿ 50 ಲಕ್ಷ ರು. ವೆಚ್ಚ ಮಾಡಿರುವ ಬಗ್ಗೆ ಪರಿಶೀಲಿಸುವಂತೆ ತನಿಖಾ ಸಮಿತಿಗೆ ತಿಳಿಸಲಾಗಿದೆ.
- ಕಲ್ಯಾಣ ಕರ್ನಾಟಕ ಮಂಡಳಿಯಲ್ಲಿ ಗೋಲ್ಮಾಲ್
- 300 ಕೋಟಿ ಅನುದಾನ ದುರ್ಬಳಕೆ ಬಗ್ಗೆ ತನಿಖೆ - ಕೊರೋನಾಸ್ತ್ರದ ಬಳಿಕ ಇನ್ನೊಂದು ಬ್ರಹ್ಮಾಸ್ತ್ರ!
ಏನಿದು ಆರೋಪ?
- ಯಡಿಯೂರಪ್ಪ ಸಿಎಂ ಆಗಿದ್ದಾಗ 2020ರಿಂದ 2023ರವರೆಗೆ ಕೆಕೆಆರ್‌ಡಿಬಿಗೆ 300 ಕೋಟಿ ರು. ಅನುದಾನ ಬಿಡುಗಡೆ
- ಈ ಅನುದಾನ ವೆಚ್ಚ ಮಾಡುವಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆಗಲೇ ಆರೋಪ ಮಾಡಿದ್ದ ಕಾಂಗ್ರೆಸ್ ಶಾಸಕರು
- ಈಗ ಈ ಬಗ್ಗೆ ತನಿಖೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ನೇತೃತ್ವದ ತನಿಖಾ ಸಮಿತಿ ರಚನೆ
- - ಕೋವಿಡ್ ಅವಧಿಯಲ್ಲಿ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ಪರಿಹಾರ ನೀಡಿಕೆ, ದೇಶಿ ಹಸುಗಳ ಸಾಕಣೆಗೆ ಪ್ರೋತ್ಸಾಹಧನ, 1 ಕೋಟಿ ಸಸಿ ನೆಟ್ಟಿರುವುದು ಮುಂತಾದವುಗಳ ಬಗ್ಗೆ ತನಿಖೆ ಸಾಧ್ಯತೆ