ಕರಾವಳಿಯಲ್ಲಿ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಮತ್ತೆ ಹಿನ್ನಡೆ!

| Published : Mar 11 2025, 12:46 AM IST

ಕರಾವಳಿಯಲ್ಲಿ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಮತ್ತೆ ಹಿನ್ನಡೆ!
Share this Article
  • FB
  • TW
  • Linkdin
  • Email

ಸಾರಾಂಶ

ಕರಾವಳಿಯಲ್ಲಿ ಹೈಕೋರ್ಟ್‌ ಸಂಚಾರಿ ಪೀಠ ಸ್ಥಾಪನೆಯ ಹೋರಾಟಕ್ಕೆ ಇದೀಗ ಮತ್ತೆ ಹಿನ್ನಡೆ ಉಂಟಾಗಿದೆ. ವಿಧಾನ ಪರಿಷತ್‌ನಲ್ಲಿ ಎಂಎಲ್ಸಿ ಐವನ್‌ ಡಿಸೋಜ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ‘ಸರ್ಕಾರದ ಎದುರು ಅಂತಹ ಯಾವುದೇ ಪ್ರಸ್ತಾಪ ಇಲ್ಲ’ ಎಂದು ಲಿಖಿತ ಉತ್ತರ ನೀಡಿದ್ದಾರೆ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ಮೂರೂವರೆ ದಶಕಗಳ ಹಿಂದೆ ಆರಂಭವಾದ- ಕರಾವಳಿಯಲ್ಲಿ ಹೈಕೋರ್ಟ್‌ ಸಂಚಾರಿ ಪೀಠ ಸ್ಥಾಪನೆಯ ಹೋರಾಟಕ್ಕೆ ಇದೀಗ ಮತ್ತೆ ಹಿನ್ನಡೆ ಉಂಟಾಗಿದೆ. ವಿಧಾನ ಪರಿಷತ್‌ನಲ್ಲಿ ಎಂಎಲ್ಸಿ ಐವನ್‌ ಡಿಸೋಜ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ‘ಸರ್ಕಾರದ ಎದುರು ಅಂತಹ ಯಾವುದೇ ಪ್ರಸ್ತಾಪ ಇಲ್ಲ’ ಎಂದು ಲಿಖಿತ ಉತ್ತರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ತೀವ್ರ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಲು ವಕೀಲರ ಸಂಘ ತೀರ್ಮಾನಿಸಿದೆ.

ಮಾರ್ಚ್‌ 6ರಂದು ಐವನ್‌ ಡಿಸೋಜ ಅವರು ‘ಕರಾವಳಿ ಭಾಗದಲ್ಲಿ ಉಚ್ಚ ನ್ಯಾಯಾಲಯದ ಸಂಚಾರಿ ಪೀಠ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಮಂಡಿಸಲಾಗಿದ್ದು, ಈ ಕುರಿತು ಕಾನೂನು ಇಲಾಖೆ ಕೈಗೊಂಡ ಕ್ರಮವೇನು?’ ಎಂಬ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಸಿಎಂ ಸಿದ್ದರಾಮಯ್ಯ, ‘ರಾಜ್ಯ ಪುನರ್ ವಿಂಗಡನಾ ಕಾಯ್ದೆ- 1956ರ ಕಲಂ 51ರ ಅನ್ವಯ, ಆಯಾ ರಾಜ್ಯಗಳ ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಮೂರ್ತಿಗಳು ರಾಜ್ಯಪಾಲರ ಅನುಮೋದನೆಯೊಂದಿಗೆ ರಾಜ್ಯದ ಇತರ ಯಾವುದೇ ಸ್ಥಳದಲ್ಲಿ ಸಂಚಾರಿ ಪೀಠವನ್ನು ವ್ಯವಸ್ಥೆಗೊಳಿಸಲು ಅಧಿಕಾರ ಹೊಂದಿರುತ್ತಾರೆ. ಪ್ರಸ್ತುತ ಈ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇರುವುದಿಲ್ಲ’ ಎಂದು ಹೇಳಿರುವುದು ಈ ಭಾಗದ ಬಹುದೊಡ್ಡ ಬೇಡಿಕೆ ಮೇಲೆ ಕೊಡಲಿಯೇಟು ಕೊಟ್ಟಂತಾಗಿದೆ.

ಫಲಿಸದ ಹೋರಾಟ:

1990ರ ದಶಕದಿಂದ ಹೈಕೋರ್ಟ್‌ ಸಂಚಾರಿ ಪೀಠಕ್ಕೆ ಬೇಡಿಕೆ ಇರಿಸಲಾಗಿದ್ದು, ಹೈಕೋರ್ಟ್‌ ಸೇರಿದಂತೆ ಆಗಿನ ಜನಪ್ರತಿನಿಧಿಗಳಿಗೆ ಮನವಿಗಳನ್ನು ನೀಡಲಾಗಿತ್ತು. 20 ವರ್ಷಗಳಿಂದೀಚೆಗೆ ಹೋರಾಟ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನೆಗಳು, ಜಾಥಾ, ಮನವಿ ಸಲ್ಲಿಕೆ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಆಗಿತ್ತು. ಕೆಲ ತಿಂಗಳ ಹಿಂದೆ ಹೈಕೋರ್ಟ್‌ ನ್ಯಾಯಮೂರ್ತಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಪೋಸ್ಟ್‌ ಕಾರ್ಡ್‌ ಅಭಿಯಾನ ನಡೆಸಲಾಗಿತ್ತು. ಈ ವರ್ಷದ ಬಜೆಟ್‌ ಅಧಿವೇಶನಕ್ಕೂ ಮೊದಲೇ ಎಂಎಲ್ಸಿ ಐವನ್‌ ಡಿಸೋಜ ಅವರು ವಿವಿಧ ಸಂಘ ಸಂಸ್ಥೆಗಳ ಜತೆ ಸರಣಿ ಸಭೆಗಳನ್ನು ನಡೆಸಿ ಬೆಂಬಲ ಕ್ರೋಢೀಕರಿಸುವ ಕೆಲಸ ಮಾಡಿದ್ದರು. ಕರಾವಳಿ ಆಸುಪಾಸಿನ ಐದಾರು ಜಿಲ್ಲೆಗಳ ವಕೀಲರ ಸಭೆ ನಡೆಸಲಾಗಿತ್ತು. ಸ್ವತಃ ಸಿಎಂ ಅವರಿಗೂ ನಿಯೋಗ ತೆರಳಿ ಮನವಿ ನೀಡಲಾಗಿತ್ತು. ಇಷ್ಟೆಲ್ಲ ಮಾಡಿದ ಬಳಿಕ ಈ ಬಜೆಟ್‌ ಅಧಿವೇಶನದಲ್ಲಿ ಸಂಚಾರಿ ಪೀಠಕ್ಕೆ ಅನುದಾನ ಮೀಸಲಿರಿಸುವ ನಿರೀಕ್ಷೆ ಇತ್ತು. ಅದೀಗ ಹುಸಿಯಾಗಿದೆ.

ಸಂಚಾರಿ ಪೀಠ ಏಕೆ?:

ಕರಾವಳಿ ಮತ್ತು ಆಸುಪಾಸಿನ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ ಭಾಗದಿಂದ ಬರೋಬ್ಬರಿ 10 ಸಾವಿರಕ್ಕೂ ಅಧಿಕ ಪ್ರಕರಣಗಳು ಹೈಕೋರ್ಟ್‌ನಲ್ಲಿವೆ. ಪ್ರಸ್ತುತ ಹೈಕೋರ್ಟ್‌ ಮೆಟ್ಟಿಲೇರಲು ದೊಡ್ಡ ಮೊತ್ತದ ಹಣ ಖರ್ಚಾಗುವುದು ಒಂದೆಡೆಯಾದರೆ, ಪ್ರತಿಸಲವೂ ಬೆಂಗಳೂರಿಗೆ ಹೋಗಿ ಬರುವ ಕಷ್ಟ, ಸುದೀರ್ಘ ಸಮಯ ತಗಲುವುದರಿಂದ ಜನಸಾಮಾನ್ಯರು ನ್ಯಾಯ ವಂಚಿತರಾಗುವ ಅಪಾಯ ಹೆಚ್ಚು. ಕರಾವಳಿಯಲ್ಲಿ ಸಂಚಾರಿ ಪೀಠ ಸ್ಥಾಪನೆಯಾದರೆ ಹಣ- ಸಮಯ ಎಲ್ಲವೂ ಉಳಿತಾಯವಾಗಲಿದೆ ಎನ್ನುತ್ತಾರೆ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್‌.ವಿ. ರಾಘವೇಂದ್ರ.ಬೆಂಗಳೂರು, ಧಾರವಾಡ, ಕಲಬುರಗಿಯಲ್ಲಿ ಹೈಕೋರ್ಟ್‌ ಸಂಚಾರಿ ಪೀಠ ಈಗಾಗಲೇ ಸ್ಥಾಪನೆಯಾಗಿದೆ. ಧಾರವಾಡದಲ್ಲಿ ಸಂಚಾರಿ ಪೀಠ ಸ್ಥಾಪನೆ ಪ್ರಸ್ತಾಪವನ್ನು ಹೈಕೋರ್ಟ್‌ ತಿರಸ್ಕರಿಸಿತ್ತು. ಆದರೆ ಬಜೆಟ್‌ನಲ್ಲಿ ಸೂಕ್ತ ಅನುದಾನ ಮೀಸಲಿಟ್ಟಿದ್ದರಿಂದ ಸ್ಥಾಪನೆ ಸಾಧ್ಯವಾಗಿತ್ತು. ದಕ್ಷಿಣ ಕನ್ನಡದಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ಈ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸುವ ನಿರೀಕ್ಷೆ ಇತ್ತು. ಆದರೆ ಮುಂದಿನ ದಿನಗಳಲ್ಲಾದರೂ ಇದು ಸಾಕಾರವಾಗುವ ನಿರೀಕ್ಷೆಯಿದೆ ಎಂದು ಎಚ್‌.ವಿ. ರಾಘವೇಂದ್ರ ಹೇಳುತ್ತಾರೆ.

ಕರಾವಳಿಯಲ್ಲಿ ಸಂಚಾರಿ ಪೀಠ ಆರಂಭ ಆಗಬೇಕಾದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟದ ಅಗತ್ಯವಿದೆ. ವಿವಿಧ ಸಂಘ ಸಂಸ್ಥೆಗಳು, ವಕೀಲರ ಸಂಘಟನೆಗಳು, ಪಕ್ಷಾತೀತವಾಗಿ ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಹೋರಾಟ ಹಮ್ಮಿಕೊಳ್ಳಲಿದ್ದೇವೆ. ಅದಕ್ಕಾಗಿ ಪೂರ್ವಭಾವಿ ಕೆಲಸಗಳನ್ನು ಮಾಡಿದ್ದೇವೆ.

- ಎಚ್‌.ವಿ. ರಾಘವೇಂದ್ರ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ