ಸಾರಾಂಶ
ಯಲ್ಲಾಪುರ:
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರ ಮೇಲಿನ ಅಸಮಾಧಾನವನ್ನು ವಿದ್ಯಾರ್ಥಿಗಳು ಮತ್ತೊಮ್ಮೆ ಹೊರಹಾಕಿದ್ದು ಬುಧವಾರ ಕಾಲೇಜಿನ ಮುಂಭಾಗದಲ್ಲಿ ಪುನಃ ಮೌನ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಶಿವರಾಮ ಹೆಬ್ಬಾರ್ ಎಲ್ಲರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ತರಗತಿಗಳಿಗೆ ತೆರಳಿದ ಘಟನೆ ನಡೆಯಿತು.ಪ್ರಾಚಾರ್ಯರು ಮತ್ತು ವಿದ್ಯಾರ್ಥಿಗಳ ನಡುವೆ ಗೊಂದಲ ಏರ್ಪಟ್ಟು ಪ್ರಥಮ ದರ್ಜೆ ಕಾಲೇಜಿನ ಸಮಸ್ಯೆ ಮೌನ ಪ್ರತಿಭಟನೆಯ ಮಟ್ಟಕ್ಕೆ ಹೋಗಿತ್ತು. ಶನಿವಾರ ನಡೆಸಿದ ಪ್ರತಿಭಟನೆ ಸ್ಥಳಕ್ಕೆ ಶಾಸಕರು ಆಗಮಿಸಬೇಕೆಂದು ಪಟ್ಟು ಹಿಡಿದಿದ್ದ ವಿದ್ಯಾರ್ಥಿಗಳು ಶಾಸಕರ ಮೌಖಿಕ ಭರವಸೆಯ ಹಿನ್ನಲೆಯಲ್ಲಿ ಪ್ರತಿಭಟನೆ ಕೈಬಿಟ್ಟಿದ್ದರು. ಮತ್ತೆ ಬುಧವಾರ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದು ಸ್ಥಳಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಮಾಧ್ಯಮದವರ ಸಮ್ಮುಖದಲ್ಲೇ ವಿದ್ಯಾರ್ಥಿಗಳ, ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಮಾತು ಆಲಿಸಿ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದರು.ಪದವಿ ಕಾಲೇಜು ವಿಭಾಗದ ಜಂಟಿ ನಿರ್ದೇಶಕ ಪ್ರಕಾಶ ಹೊಸಮನಿ ಭೇಟಿ ನೀಡಿ ಶಾಸಕರೊಂದಿಗೆ ಮಾತನಾಡಿ, ಪ್ರಾಂಶುಪಾಲರ, ಉಪನ್ಯಾಸಕರೊಂದಿಗೆ ಪ್ರತ್ಯೇಕ ಅಭಿಪ್ರಾಯ ಸಂಗ್ರಹಿಸಿದರು.ಈ ವೇಳೆ ಕಾಲೇಜು ಅಭಿವೃದ್ಧಿ ಸಮಿತಿ ಪ್ರಮುಖರಾದ ಜಿಪಂ ಮಾಜಿ ಸದಸ್ಯ ವಿಜಯ್ ಮಿರಾಶಿ, ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ, ಪಪಂ ಮಾಜಿ ಅಧ್ಯಕ್ಷೆ ಸುನಂದಾ ದಾಸ್, ಉಲ್ಲಾಸ ಶಾನಭಾಗ, ರಾಜೇಂದ್ರ ಬದ್ದಿ ಉಪಸ್ಥಿತರಿದ್ದರು.
ಪ್ರತಿಭಟನೆ ದಾರಿ ಸೂಕ್ತವಲ್ಲ ಶಿಕ್ಷಣ ನೀಡುವ ದೇಗುಲದಲ್ಲಿ ಪ್ರತಿಭಟನೆಗಳು ನಡೆಯಬಾರದು. ಸಣ್ಣಪುಟ್ಟ ಸಮಸ್ಯೆಗಳನ್ನು ಪ್ರಾಚಾರ್ಯರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ತಮ್ಮ ನಡುವೆಯೇ ಬಗೆಹರಿಸಿಕೊಳ್ಳಬೇಕೇ ಹೊರತು ಪ್ರತಿಭಟನೆ ದಾರಿ ಸೂಕ್ತವಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಕಿವಿಮಾತು ಹೇಳಿದರು. ಕಾಲೇಜಿನಲ್ಲಿ ಉತ್ತಮ ಪಾಠ, ಪ್ರವಚನ ನಡೆದು ರಾಜ್ಯಕ್ಕೆ ಮಾದರಿಯಾಗಿ ಉತ್ತಮ ಫಲಿತಾಂಶ ಪಡೆದು ಸುದ್ದಿಯಾಗಬೇಕೇ ವಿನಃ ಇಂತಹ ಗೊಂದಲ, ಪ್ರತಿಭಟನೆಯ ಮೂಲಕ ಸುದ್ದಿಯಾಗುತ್ತಿರುವುದು ವಿಷಾದನೀಯ ಎಂದರು.ಎಲ್ಲರ ಸಮಸ್ಯೆ ಆಲಿಸಿದ್ದು ಶೀಘ್ರವೇ ಇತ್ಯರ್ಥಪಡಿಸಲಾಗುವುದು. ಕಾಲೇಜಿನಿಂದ ಹೊರಗುಳಿದು ಪ್ರತಿಭಟನೆಗೆ ಕುಳಿತ ವಿದ್ಯಾರ್ಥಿಗಳು ತರಗತಿಗೆ ತೆರಳಿ ಪಾಠ, ಪ್ರವಚನ ಕೇಳಿ ತಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಹೆಬ್ಬಾರ್ ಹೇಳಿದರು.