ಶಿವಾನಂದ ಗೊಂಬಿ
ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಪ್ರತ್ಯೇಕಿಸುವ ವಿಚಾರದಲ್ಲಿ ಮತ್ತೆ ಗೊಂದಲ ಸೃಷ್ಟಿಯಾಗಿದೆ. ಅತ್ತ ಧಾರವಾಡದಲ್ಲಿ ನಾಗರಿಕರು ಸತ್ಯ ಪ್ರತಿಪಾದನಾ ಸಮಿತಿ ರಚಿಸಿಕೊಂಡು ಹೋರಾಟ ನಡೆಸುತ್ತಿದ್ದರೆ, ಇತ್ತ ಇದಕ್ಕೆ ವಿರೋಧವಾಗಿ ವಿಭಜಿಸುವುದು ಬೇಡ ಎಂಬ ಬೇಡಿಕೆಯನ್ನು ಮೆಟ್ರೋಪಾಲಿಟನ್ ಸಿಟಿ ವೇದಿಕೆ ಸರ್ಕಾರದ ಮುಂದಿಟ್ಟಿದೆ. ಇದರಿಂದಾಗಿ ಪಾಲಿಕೆ ಪ್ರತ್ಯೇಕಕ್ಕೆ ಮತ್ತೊಂದು ತಿರುವು ಸಿಕ್ಕಂತಾಗಿದೆ.
ಮೊದಲು ಪ್ರತ್ಯೇಕವಾಗಿದ್ದವು:ಮಹಾನಗರ ಪಾಲಿಕೆ ರಚನೆಯಾಗುವ ಮುನ್ನ ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ಪುರಸಭೆಗಳಿದ್ದು ಆಡಳಿತ ನಡೆಸಿದ್ದವು. 1855ರ ಆ. 15ರಂದು 18 ಸದಸ್ಯರನ್ನೊಳಗೊಂಡ ಹುಬ್ಬಳ್ಳಿ ಪುರಸಭೆ ಅಸ್ತಿತ್ವಕ್ಕೆ ಬಂದಿತ್ತು. ಜಿಲ್ಲೆಯ ಕಲೆಕ್ಟರೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರೆ ಸದಸ್ಯರನ್ನು ಆಯುಕ್ತ (ಕಮಿಷನರ್) ಎಂದು ಕರೆಯಲಾಗುತ್ತಿತ್ತು. ಆಗಿನ ಬ್ರಿಟಿಷ್ ಸರ್ಕಾರವೇ ಎಲ್ಲ ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಿತ್ತು.
ಇನ್ನು ಧಾರವಾಡ ಪುರಸಭೆಯೂ 1856ರ ಜನವರಿ 1ರಂದು ಅಸ್ತಿತ್ವಕ್ಕೆ ಬಂದಿದ್ದು 1907ರಲ್ಲಿ ಎಸ್.ಕೆ. ರೊದ್ದ ಮೊದಲ ಸರ್ಕಾರೇತರ ನಗರ ಸಭಾಧ್ಯಕ್ಷರಾಗಿದ್ದರು. ಅದಾದ ಬಳಿಕ ಎಸ್.ವಿ. ಮೆಣಸಿನಕಾಯಿ ನಾಮನಿರ್ದೇಶಿತ ಅಧ್ಯಕ್ಷರಾಗಿದ್ದರು. 1920ರಲ್ಲಿ ಎನ್.ಜಿ. ಕರಗುದರಿ ಪ್ರಥಮ ಚುನಾಯಿತ ನಗರ ಸಭಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವುದು ಇತಿಹಾಸ.
ಪಾಲಿಕೆ ರಚನೆ:
ಹೀಗೆ ಸ್ವಾತಂತ್ರ್ಯಪೂರ್ವದಲ್ಲೇ ಅಸ್ತಿತ್ವಕ್ಕೆ ಬಂದ ಪ್ರತ್ಯೇಕ ಪುರಸಭೆಗಳು ಸ್ವಾತಂತ್ರ ನಂತರ (1962) ಒಗ್ಗೂಡಿಸಿ ‘ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ’ ಎಂದು ರಚಿಸಿತು. ಈ ಮೂಲಕ 20 ಕಿಲೋ ಮೀಟರ್ ದೂರದಿಂದ ಬೇರ್ಪಟ್ಟಿದ್ದ 2 ನಗರಗಳು ಒಂದಾದವು. ಆಗಿನಿಂದ ಮಹಾನಗರ ಪಾಲಿಕೆಯಾಗಿ ಎರಡೂ ನಗರಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ.ಪ್ರತ್ಯೇಕ ಪಾಲಿಕೆ ಕೂಗು:
ಈ ನಡುವೆ ಹುಬ್ಬಳ್ಳಿಗೆ ಸಿಕ್ಕಷ್ಟು ಪ್ರಾಶಸ್ತ್ಯ ಧಾರವಾಡಕ್ಕೆ ಸಿಗುತ್ತಿಲ್ಲ ಎಂದು ಆರೋಪಿಸಿ ಧಾರವಾಡದ ನಾಗರಿಕರು ಪ್ರತ್ಯೇಕ ಪಾಲಿಕೆ ಬೇಡಿಕೆ ಮುಂದಿಟ್ಟಿದ್ದು ಜನಪ್ರತಿನಿಧಿಗಳು ಸಹ ಬೆಂಬಲಿಸಿದ್ದಾರೆ. 2 ವರ್ಷದ ಹಿಂದೆ ಮಹಾನಗರ ಪಾಲಿಕೆ ಸಭೆಯಲ್ಲಿ ಪ್ರತ್ಯೇಕ ಪಾಲಿಕೆಯ ಠರಾವು ಪಾಸ್ ಮಾಡಿ ಸರ್ಕಾರಕ್ಕೆ ಕಳಿಸಲಾಗಿತ್ತು. ಸರ್ಕಾರವೂ ಅನುಮೋದಿಸಿ ರಾಜ್ಯಪಾಲರಿಗೂ ಕಳುಹಿಸಿತ್ತು. ಆದರೆ, ರಾಜ್ಯಪಾಲರಿಂದ ಅಂಕಿತ ದೊರೆತಿರಲಿಲ್ಲ. ಅಷ್ಟರೊಳಗೆ ಪ್ರತ್ಯೇಕ ಪಾಲಿಕೆ ಮಾಡಿದರೆ ಅನುದಾನಕ್ಕೆ ಹೊಡೆತ ಬೀಳುತ್ತದೆ. ಹೀಗಾಗಿ ಪ್ರತ್ಯೇಕ ಪಾಲಿಕೆ ಮಾಡದೆ ಬೃಹತ್ ಪಾಲಿಕೆಯನ್ನಾಗಿ ಅಭಿವೃದ್ಧಿಪಡಿಸಿ ಎಂದು ಠರಾವು ಪಾಸ್ ಮಾಡಿತು. ಇದಕ್ಕೆ ಧಾರವಾಡದಲ್ಲಿ ತೀವ್ರ ವಿರೋಧವೂ ವ್ಯಕ್ತವಾಗಿ ಅಹೋರಾತ್ರಿ ಧರಣಿ, ಸರದಿ ಉಪವಾಸ ಸತ್ಯಾಗ್ರಹ ಆರಂಭವಾಯಿತು. ಮೊದಲಿಗೆ ವಿರೋಧಿಸಿದ್ದ ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲಿಸಿದವು. ರಾಜ್ಯಪಾಲರು ಎರಡು ಷರತ್ತು ಹಾಕಿ ಸರ್ಕಾರದ ಅನುಮೋದನೆಗೆ ಅಂಕಿತ ಕೂಡ ಹಾಕಿದ್ದುಂಟು. ಇದೀಗ ಸರ್ಕಾರದ ಅಂಗಳದಲ್ಲಿ ಪ್ರತ್ಯೇಕತೆಯ ಚೆಂಡು ಇದೆ. ಇದರ ನಡುವೆ ಧಾರವಾಡದಲ್ಲಿ ಸತ್ಯಪ್ರತಿಪಾದನಾ ಸಮಿತಿ ನಡೆಸುತ್ತಿದ್ದ ಹೋರಾಟವನ್ನು ಸರ್ಕಾರಕ್ಕೆ ಗಡವು ನೀಡಿ ಹಿಂಪಡೆಯಲಾಗಿದೆ.ಪ್ರತ್ಯೇಕ ಬೇಡ:
ಈ ಎಲ್ಲದರ ನಡುವೆ ಮೆಟ್ರೋಪಾಲಿಟನ್ ಸಿಟಿ ವೇದಿಕೆ ಹುಟ್ಟುಕೊಂಡಿದ್ದು, ಇದು ಪ್ರತ್ಯೇಕ ಪಾಲಿಕೆಯನ್ನಾಗಿಸಲು ವಿರೋಧಿಸುತ್ತಿದೆ. ಹು-ಧಾ ರಾಜ್ಯದ 2ನೇ ದೊಡ್ಡ ನಗರವೆನಿಸಿದೆ. ಪ್ರತ್ಯೇಕವಾದರೆ ಈ ಮೌಲ್ಯ ಕಳೆದುಕೊಳ್ಳಲಿದೆ. ಮೆಟ್ರೋಪಾಲಿಟನ್ ಸಿಟಿಯಾದರೆ ರಾಷ್ಟ್ರಮಟ್ಟದ 70 ಅತಿ ದೊಡ್ಡ ಮೆಟ್ರೋಪಾಲಿಟನ್ ಸಿಟಿ ಪಟ್ಟಿಯಲ್ಲಿ ಸೇರ್ಪಡೆಯಾಗಲಿದೆ. ಉತ್ತರ ಕರ್ನಾಟಕದ ಪ್ರಮುಖ ಶಕ್ತಿ ಹಾಗೂ ಆರ್ಥಿಕ ಕೇಂದ್ರವಾಗಿ ಮತ್ತಷ್ಟು ಬೆಳೆಯುತ್ತದೆ. ಆದಕಾರಣ ಪ್ರತ್ಯೇಕಿಸುವುದು ಬೇಡ ಎಂಬ ವಾದ ಮೆಟ್ರೋಪಾಲಿಟನ್ ಸಿಟಿ ವೇದಿಕೆಯದ್ದು. ಈ ಸಂಬಂಧ ಎಲ್ಲ ಶಾಸಕರು, ಸಂಘ ಸಂಸ್ಥೆ, ಮುಖ್ಯಮಂತ್ರಿಗಳಿಗೂ ವೇದಿಕೆ ಪತ್ರ ಬರೆದಿದೆ.ಪ್ರತ್ಯೇಕತೆ ಬೇಕು:
ಪ್ರತ್ಯೇಕವಾದರೆ ಎರಡು ಪಾಲಿಕೆಗೂ ಪ್ರತ್ಯೇಕ ಅನುದಾನ ದೊರೆಯುತ್ತದೆ. ಇಲ್ಲಿನ ನಾಗರಿಕರು ಹುಬ್ಬಳ್ಳಿಗೆ ಅಲೆಯುವುದು ತಪ್ಪುತ್ತದೆ. ಸ್ಮಾರ್ಟ್‌ಸಿಟಿ ಯೋಜನೆಯ ಲಾಭ ಧಾರವಾಡಕ್ಕೆ ಸಿಕ್ಕಿಲ್ಲ. ಅಭಿವೃದ್ಧಿ ವಿಷಯದಲ್ಲಿ ತಾರತಮ್ಯವಾಗುತ್ತಲೇ ಇದೆ. ಪ್ರತ್ಯೇಕವಾದರೆ ಇದು ತಪ್ಪುತ್ತದೆ. ಹುಬ್ಬಳ್ಳಿ-ಧಾರವಾಡ ಮೊದಲು ಪ್ರತ್ಯೇಕ ಪುರಸಭೆಗಳೇ ಇದ್ದವು. ಇದೀಗ ಅವುಗಳನ್ನು ಮತ್ತೆ ಪ್ರತ್ಯೇಕಿಸುವುದು ಉತ್ತಮ ಎಂಬುದು ಸತ್ಯಪ್ರತಿಪಾದನಾ ಸತ್ಯಾಗ್ರಹಿಗಳ ವಾದ.ಇದೆಲ್ಲದರ ನಡುವೆ ಸರ್ಕಾರ ಏನು ಮಾಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಗೆ 2024ರಲ್ಲೇ ರಾಜ್ಯ ಸಂಪುಟ ಸಭೆಯಲ್ಲಿಯೇ ನಿರ್ಣಯಿಸಲಾಗಿದೆ. ಕರಡು ಅಧಿಸೂಚನೆ ಹೊರಡಿಸಿ ರಾಜ್ಯಪತ್ರದಲ್ಲೂ ಪ್ರಕಟಿಸಿ ಆಕ್ಷೇಪಣೆ ಕೇಳಲಾಗಿತ್ತು. ಆಗ ಸುಮ್ಮನೆ ಕುಳಿತು ಈಗ ಮೆಟ್ರೋಪಾಲಿಟಿನ್ ಸಿಟಿ ಮಾಡ್ತೇವೆ ಎನ್ನುವುದು ಎಷ್ಟು ಸರಿ. ಜನರ ದೈನಂದಿನ ಆಡಳಿತ ಅನುಕೂಲಕ್ಕಾಗಿ ಮತ್ತು ನಗರದ ತ್ವರಿತ ಅಭಿವೃದ್ಧಿಗಾಗಿ ಪ್ರತ್ಯೇಕ ಪಾಲಿಕೆ ಬೇಕೇ ಬೇಕು. ಎರಡು ನಗರಗಳ ಜನತೆಯ ದಾರಿ ತಪ್ಪಿಸುವ ಯತ್ನ ಮಾಡುತ್ತಿರುವದು ಖಂಡನೀಯ.ಬಿ.ಡಿ. ಹಿರೇಮಠ, ಪ್ರತ್ಯೇಕ ಪಾಲಿಕೆ ಮುಂಚೂಣಿ ಹೋರಾಟಗಾರರು
ಧಾರವಾಡವನ್ನು ಪ್ರತ್ಯೇಕಿಸದೆ ಮೆಟ್ರೋಪಾಲಿಟನ್ ಸಿಟಿಯನ್ನಾಗಿ ಅಭಿವೃದ್ಧಿಪಡಿಸಬೇಕು. ಇದರಿಂದ ರಾಜ್ಯದ 2ನೇ ದೊಡ್ಡ ಮಹಾನಗರ ಎಂಬುದು ಮುಂದುವರಿಯುತ್ತದೆ. 74 ಮೆಟ್ರೋಪಾಲಿಟನ್ ಸಿಟಿಗಳ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ ಕೂಡ ಸೇರುತ್ತದೆ. ಮೆಟ್ರೋಪಾಲಿಟನ್ ಸಿಟಿಯಾದರೆ ಅನುದಾನವೂ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ತಜ್ಞರ ಸಮಿತಿ ರಚಿಸಿ ಅಧ್ಯಯನ ನಡೆಸಬೇಕು.ಸಂತೋಷ ನರಗುಂದ, ಮೆಟ್ರೋಪಾಲಿಟನ್ ಸಿಟಿ ವೇದಿಕೆಯ ಮುಖಂಡ