ಚನ್ನಾಂಬಿಕ ಥಿಯೇಟರ್‌ ಎದುರು ಮತ್ತೊಂದು ಅಂಡರ್‌ಪಾಸ್‌

| Published : Sep 12 2024, 01:48 AM IST

ಚನ್ನಾಂಬಿಕ ಥಿಯೇಟರ್‌ ಎದುರು ಮತ್ತೊಂದು ಅಂಡರ್‌ಪಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಒಳಗಿರುವ ಬಿಎಚ್ ರಸ್ತೆ ವಾಹನ ದಟ್ಟ ಸಂಚಾರ ಇದ್ದು, ದ್ವಿಮುಖ ರಸ್ತೆಯಾಗಿ ಅಗಲೀಕರಣಗೊಳಿಸುವ ಕಾಮಗಾರಿ ಪ್ರಾರಂಭಿಸಲಾಗುವುದು. ಹೇಮಾವತಿ ವೃತ್ತದ ಆಂಜನೇಯ ರೈಸ್‌ಮಿಲ್ ಸಮೀಪ ಅಂಡರ್‌ಪಾಸ್‌ನಿಂದ ಪಶುವೈದ್ಯಕೀಯ ಆಸ್ಪತ್ರೆ ಮುಂಭಾಗದ ರಸ್ತೆ ವಿಭಜಕಕ್ಕೆ ಸಂಪರ್ಕಿಸಲಾಗುವುದು. ನಂತರ ರೈಲ್ವೇ ನಿಲ್ದಾಣದ ಮುಂಭಾಗದ ಬೈಪಾಸ್ ಅಗಲೀಕರಣಗೊಳಿಸಿ ದ್ವಿಮುಖ ರಸ್ತೆಯನ್ನಾಗಿಸಿ ಹಾಸನ ಕಡೆಗಿನ ರೈಲ್ವೇ ಮೇಲ್ಸೇತುವೆವರೆಗೂ ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ಪಟ್ಟಣದ ಚೆನ್ನಾಂಬಿಕ ವೃತ್ತದ ಸಮೀಪ ಹಿಂದಿನ ರೈಲ್ವೆ ಹಳಿಯ ಅಡಿಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಇನ್ನೊಂದು ಅಂಡರ್‌ಪಾಸ್ ನಿರ್ಮಿಸಲು ಹಣ ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಚೆನ್ನಾಂಬಿಕ ವೃತ್ತದ ಸಮೀಪ ಹಿಂದಿನ ರೈಲ್ವೆ ಹಳಿಯ ಅಡಿಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಇನ್ನೊಂದು ಅಂಡರ್‌ಪಾಸ್ ನಿರ್ಮಿಸಲು ಹಣ ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭಗೊಳ್ಳಲಿದೆ ಮತ್ತು ರೈಲ್ವೆ ಅಂಡರ್‌ಪಾನ್‌ನಿಂದ ಕನಕಭವನ ತನಕ ರಸ್ತೆ ಅಭಿವೃದ್ಧಿಗೆ ೨೪.೫ ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಾಗರಿಕರಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಸಲಾಗಿದೆ. ಆದರೆ ಕಾಮಗಾರಿ ಸಂದರ್ಭದಲ್ಲಿ ಅಗೆದ ರಸ್ತೆಗಳನ್ನು ಕಾಂಕ್ರೀಟ್ ಬಳಸಿ ಮುಚ್ಚಿಲ್ಲ. ರಸ್ತೆಗಳು ಗುಂಡಿ ಬಿದ್ದಿದೆ. ಆದ್ದರಿಂದ ಕರಾರಿನಂತೆ ರಸ್ತೆಗಳ ದುರಸ್ತಿ ಮಾಡದೇ ಸಂಪೂರ್ಣ ಬಿಲ್ ಪಾವತಿಸದಂತೆ ಮುಖ್ಯಾಧಿಕಾರಿ ನಾಗೇಂದ್ರಗೆ ತಿಳಿಸಿದರು. ಪುರಸಭಾ ಸದಸ್ಯೆ ಸುಧಾನಳಿನಿ ಅವರು ಮಾತನಾಡಿ, ಬೀದಿದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲ ಮತ್ತು ಗುತ್ತಿಗೆದಾರರು ಸರಿಯಾಗಿ ಸ್ಪಂದಿಸುತ್ತಿಲ್ಲ. ಹೊಸ ಟೆಂಡರ್‌ ಮಾಡದೇ ಬೀದಿದೀಪಗಳ ನಿರ್ವಹಣೆಯನ್ನು ಪುರಸಭೆಯಿಂದಲೇ ಮಾಡೋಣ. ಜತೆಗೆ ಪುರಸಭೆ ನಿರ್ವಹಣೆ ಮಾಡಿದಲ್ಲಿ ೨ ಲಕ್ಷ ರು.ತನಕ ಆದಾಯ ಪುರಸಭೆಗೆ ಉಳಿಯುತ್ತದೆ ಎಂದು ಸಲಹೆ ನೀಡಿದರು.

ಪೌರ ಕಾರ್ಮಿಕರ ಕಲ್ಯಾಣನಿಧಿ ಬಳಕೆ ವಿಚಾರವಾಗಿ ಮಾತನಾಡಿ, ಅಗತ್ಯ ಫಲಾನುಭವಿಗಳನ್ನು ಸರಿಯಾಗಿ ಗುರುತಿಸುತ್ತಿಲ್ಲ. ಕೆಲಸ ಮಾಡದವರಿಗೆ ಹಣ ಮಂಜೂರು ಮಾಡಲಾಗುತ್ತಿದೆ. ಆದ್ದರಿಂದ ಸರ್ವ ಸದಸ್ಯರೊಂದಿಗೆ ಚರ್ಚಿಸಿ ನಂತರ ಫಲಾನುಭವಿಗಳನ್ನು ಗುರುತಿಸಲಿ ಎಂದು ಸಭೆಯ ಗಮನಕ್ಕೆ ತಂದರು.

ಇಂದಿರಾ ಕ್ಯಾಂಟಿನ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಆದರೆ ನಿಗದಿತ ಸಮಯದಲ್ಲಿ ತಿಂಡಿ, ಊಟ ನೀಡುತ್ತಿಲ್ಲ ಎಂದು ದೂರುಗಳಿವೆ. ಪಟ್ಟಣದಲ್ಲಿ ಕ್ಯಾಂಟೀನ್‌ ಜತೆಗೆ ಪ್ರಾರಂಭಿಸಿ ೫ ವರ್ಷ ಪೂರೈಸಿಲ್ಲ. ಆಗಲೇ ದುರಸ್ತಿಗೆ ಹಣ ವೆಚ್ಚ ಮಾಡಬೇಕೆನ್ನುವುದು ಎಷ್ಟು ಸರಿ ಎಂದು ಸದಸ್ಯೆ ಸುಧಾನಳಿನಿ ಪ್ರಶ್ನಿಸಿದರು. ಸೂಕ್ತ ಪರಿಶೀಲನೆ ನಡೆಸಿ ಅಧಿಕಾರಿಗಳು ಮತ್ತು ಸದಸ್ಯರು ಕ್ರಮಕೈಗೊಳ್ಳಿ, ಅಗತ್ಯ ಇದ್ದಲ್ಲಿ ಬೇರೆಯವರಿಗೆ ಟೆಂಡರ್‌ ಕರೆದು ಬದಲಿಸುವಂತೆ ಶಾಸಕರು ಸಲಹೆ ನೀಡಿದರು.

೧೫ನೇ ಹಣಕಾಸು ಯೋಜನೆಯಡಿ ೬೫ ಲಕ್ಷ ರು.ಗೆ ಕಸ ವಿಂಗಡಣೆ ಮತ್ತು ಸಮರ್ಪಕ ವಿಲೇವಾರಿಗಾಗಿ ಟೆಂಡರ್‌ ಕರೆದು ಒಪ್ಪಿಸುವ ಹಾಗೂ ಕಡಿಮೆ ಮೊತ್ತಕ್ಕೆ ಕುಡಿಯುವ ನೀರಿನ ಶುದ್ಧೀಕರಣಕ್ಕೆ ರಾಸಾಯನಿಕ ಪೂರೈಕೆ ವಿಚಾರವಾಗಿ ಕಾನೂನಿನ ನಿಯಮಾನುಸಾರ ನೀಡುವಂತೆ ತೀರ್ಮಾನಿಸಲಾಯಿತು. ಪಟ್ಟಣದ ಒಳಗಿರುವ ಬಿಎಚ್ ರಸ್ತೆ ವಾಹನ ದಟ್ಟ ಸಂಚಾರ ಇದ್ದು, ದ್ವಿಮುಖ ರಸ್ತೆಯಾಗಿ ಅಗಲೀಕರಣಗೊಳಿಸುವ ಕಾಮಗಾರಿ ಪ್ರಾರಂಭಿಸಲಾಗುವುದು. ಹೇಮಾವತಿ ವೃತ್ತದ ಆಂಜನೇಯ ರೈಸ್‌ಮಿಲ್ ಸಮೀಪ ಅಂಡರ್‌ಪಾಸ್‌ನಿಂದ ಪಶುವೈದ್ಯಕೀಯ ಆಸ್ಪತ್ರೆ ಮುಂಭಾಗದ ರಸ್ತೆ ವಿಭಜಕಕ್ಕೆ ಸಂಪರ್ಕಿಸಲಾಗುವುದು. ನಂತರ ರೈಲ್ವೇ ನಿಲ್ದಾಣದ ಮುಂಭಾಗದ ಬೈಪಾಸ್ ಅಗಲೀಕರಣಗೊಳಿಸಿ ದ್ವಿಮುಖ ರಸ್ತೆಯನ್ನಾಗಿಸಿ ಹಾಸನ ಕಡೆಗಿನ ರೈಲ್ವೇ ಮೇಲ್ಸೇತುವೆವರೆಗೂ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದರು. ಉದ್ಯಾನವನ ಅಭಿವೃದ್ಧಿ, ಯೋಗಭವನ ಮೇಲೆ ಶೀಟ್ ಅಳವಡಿಸುವ ಕಾಮಗಾರಿ, ಪತ್ರಿಕಾ ಭವನ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅಸ್ತು ಎನ್ನಲಾಯಿತು. ಪುರಸಭೆಯ ೨೩ ಸದಸ್ಯರಲ್ಲಿ ಪುರಸಭಾ ಅಧ್ಯಕ್ಷ ಕೆ.ಶ್ರೀಧರ್, ಉಪಾಧ್ಯಕ್ಷೆ ಸಾವಿತ್ರಮ್ಮ ಸೇರಿದಂತೆ ಜೆಡಿಎಸ್ ಪಕ್ಷದ ೧೪ ಸದಸ್ಯರು ಹಾಗೂ ಕಾಂಗ್ರೆಸ್ ಸದಸ್ಯ, ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್, ಅಧಿಕಾರಿಗಳಾದ ರಮೇಶ್, ಪಂಕಜ, ರುಚಿದರ್ಶಿನಿ, ಇತರರು ಇದ್ದರು.

* ಬಾಕ್ಸ್‌ನ್ಯೂಸ್‌: ಅಧಿಕಾರಿಗಳಿಗೆ ಎಚ್ಚರಿಕೆ

ಲಕ್ಷಾಂತರ ರು. ಮುಂಗಡ ಹಣ ಕಟ್ಟಿ ಮಾಂಸ, ಮೀನು ಮಾರಾಟದ ಹಕ್ಕು ಪಡೆದಿರುತ್ತಾರೆ. ಎಲ್ಲೆಂದರಲ್ಲಿ ರಸ್ತೆ ಬದಿ ಅನಧಿಕೃತವಾಗಿ ಮಾಂಸ, ಮೀನು ಮಾರಾಟ ನಡೆಸಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಸೂಕ್ತ ಕ್ರಮಕೈಗೊಳ್ಳಿ ಇಲ್ಲವಾದರೆ ಅಧಿಕಾರಿಗಳ ವಿರುದ್ಧವೇ ಕ್ರಮಕ್ಕೆ ಆಗ್ರಹಿಸುವುದಾಗಿ ಖುದ್ದು ಶಾಸಕ ರೇವಣ್ಣ ಎಚ್ಚರಿಸಿದರು. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಸಮಜಾಯಿಷಿ ನೀಡಿದರು.