ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಕೋಗೋಡು ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾದ ಘಟನೆ ಶುಕ್ರವಾರ ನಡೆದಿದೆ.ಕೋಗೋಡು ಗ್ರಾಮದ ಸುಶೀಲಮ್ಮ (60) ಎಂಬ ಮಹಿಳೆಯು ತಮ್ಮ ಮನೆಯ ಹಿಂಭಾಗದ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ಬೆಳಗ್ಗೆ 12 ಗಂಟೆಯ ಸಮಯದಲ್ಲಿ ತಮ್ಮ ಮನೆಯ ಹಿಂದಿನ ಕಾಫಿ ತೋಟದಲ್ಲಿ ಕೆಲಸವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದಾಳಿ ಮಾಡಿ ಸೊಂಡಿಲಿನಿಂದ ಎತ್ತಿ ಬಿಸಾಡಿ ತಲೆಯ ಮೇಲೆ ಹೆಜ್ಜೆಯನ್ನಿಟ್ಟು ತುಳಿದು ಬಿಸಾಕಿದೆ. ಮಧ್ಯಾಹ್ನವಾದರೂ ಸುಶೀಲಮ್ಮ ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ಚಿಕ್ಕಪ್ಪ ತೋಟದ ಸುತ್ತಮುತ್ತ ಹುಡುಕಾಡಿದ್ದಾರೆ. ಈ ಸಂದರ್ಭದಲ್ಲಿ ಸುಶೀಲಮ್ಮನವರ ಮುಖ, ತಲೆ ಸಂಪೂರ್ಣ ಅಪ್ಪಚ್ಚಿಯಾಗಿ ಸಾವನ್ನಪ್ಪಿರುವುದು ಕಂಡುಬಂದಿದೆ. ಇದನ್ನು ಕಂಡು ಗಾಬರಿಯಾದ ಅವರು ಗ್ರಾಮಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ತಿಳಿಸಿರುತ್ತಾರೆ. ಕೆಲ ತಿಂಗಳ ಹಿಂದೆ ಅವರ ಮಗನೂ ಕೂಡ ಅನಾರೋಗ್ಯಕ್ಕೊಳಗಾಗಿ ಸಾವನ್ನಪ್ಪಿದ್ದರು.
ಈಗಾಗಲೇ ಕಳೆದ ತಿಂಗಳಿನಲ್ಲಿ ಕಾಡಾನೆ ದಾಳಿಯಿಂದ 3 ಅಮಾಯಕರು ಸಾವನ್ನಪ್ಪಿದ್ದು ನಾಲ್ಕನೇ ಸಾವು ಸಂಭವಿಸಿದೆ. ಕಾಡಾನೆ ದಾಳಿಯಿಂದ ಬೆಳೆ ಹಾನಿ ಹಾಗೂ ಪ್ರಾಣ ಹಾನಿ ಬಗ್ಗೆ ನಿರಂತರ ಹೋರಾಟ ಪ್ರತಿಭಟನೆ ನಡೆಸುತ್ತಿದ್ದು ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇತ್ತೀಚೆಗೆ ಬ್ಯಾದನೆ ಸಮೀಪ ಕಾಡಾನೆ ದಾಳಿಗೆ ಅನಿಲ್ ಅರಸು ಸಾವನ್ನಪ್ಪಿದ್ದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಅಲ್ಲದೆ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಭದ್ರಾ ಅಭಯಾರಣ್ಯದಲ್ಲಿ ಆನೆಧಾಮ ನಿರ್ಮಿಸಲು ಈ ಬಾರಿಯ ಬಜೆಟ್‌ನಲ್ಲಿ 100 ಕೋಟಿ ರೂ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು.ಎಲ್ಲಾ ಘಟನೆಗಳು ಮಾಸುವ ಮುನ್ನವೇ ಇಂದು ಅರೇಹಳ್ಳಿ ಹೋಬಳಿಯ ಕೋಗೋಡಿನಲ್ಲಿ ಅಮಾಯಕ ಮಹಿಳೆ ಕಾಡಾನೆ ದಾಳಿಗೆ ಸಾವನ್ನಪ್ಪಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದೆ. ಇದಲ್ಲದೆ ಶಾಸಕ ಎಚ್ ಕೆ ಸುರೇಶ್ ಕೂಡ ಕಾಡಾನೆಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಕಿಡಿಕಾರಿದ್ದರು.
ಗ್ರಾಮಸ್ಥರ ಪ್ರತಿಭಟನೆ:ಕಾಡಾನೆ ದಾಳಿಗಳು ಮಲೆನಾಡು ಪ್ರದೇಶದಲ್ಲಿ ನಿರಂತರವಾಗಿ ಮುಂದುವರೆಯುತ್ತಿದ್ದು ಸರ್ಕಾರ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಹಾಗೂ ಇಂದು ಸಾವಿಗೀಡಾದ ಸುಶೀಲಮ್ಮ ಅವರ ಸಾವಿಗೆ ಸೂಕ್ತ ನ್ಯಾಯ ಸಿಗಬೇಕೆಂದು ಕೂಗೋಡು-ಚಿಕ್ಕನಹಳ್ಳಿ-ಮೂಡಿಗೆರೆ ಹೆದ್ದಾರಿ ರಸ್ತೆ ತಡೆ ನಡೆಸಿ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ರಸ್ತೆ ಮಧ್ಯೆ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಮಂತ್ರಿ , ಜಿಲ್ಲಾಧಿಕಾರಿ ಹಾಗೂ ಶಾಸಕರು ಮತ್ತು ಅರಣ್ಯ ಸಚಿವರು ಸ್ಥಳಕ್ಕೆ ಭೇಟಿ ನೀಡಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.