ಹೋರಿ ತಿವಿತಕ್ಕೆ ಹಾವೇರಿ ಜಿಲ್ಲೆಯಲ್ಲಿ ಮತ್ತೊಂದು ಬಲಿ

| Published : Oct 25 2025, 01:00 AM IST

ಸಾರಾಂಶ

ಕೊಬ್ಬರಿ ಹೋರಿ ತಿವಿತಕ್ಕೆ ಮತ್ತೊಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡ ಘಟನೆ ಹಾನಗಲ್ಲ ತಾಲೂಕಿನ ಯಳವಟ್ಟಿ ಗ್ರಾಮದಲ್ಲಿ ನಡೆದಿದೆ.

ಹಾವೇರಿ: ಕೊಬ್ಬರಿ ಹೋರಿ ತಿವಿತಕ್ಕೆ ಮತ್ತೊಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡ ಘಟನೆ ಹಾನಗಲ್ಲ ತಾಲೂಕಿನ ಯಳವಟ್ಟಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶ್ರೀಕಾಂತ ಗುರುಶಾಂತಪ್ಪ ಕೋಣಕೇರಿ (36) ಮೃತಪಟ್ಟಿದ್ದಾರೆ. ದೀಪಾವಳಿ ಪಾಡ್ಯದ ನಿಮಿತ್ತ ಯಳವಟ್ಟಿ ಗ್ರಾಮದ ಜನರು ಹೋರಿಗಳನ್ನು ತಮ್ಮ ತಮ್ಮ ಮನೆಯಿಂದ ತೆಗೆದುಕೊಂಡು ಬಂದು ಗ್ರಾಮದ ನಡು ಬೀದಿಯಲ್ಲಿ ಓಡಿಸಿ ಮನೆಗೆ ಹೋರಿಗಳನ್ನು ತೆಗೆದುಕೊಂಡು ಹೋಗುವುದನ್ನು ಮೊದಲಿನಿಂದಲೂ ನಡೆಸಿಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಮೃತ ಶ್ರೀಕಾಂತ ಕೋಣಕೇರಿ ಸಹ ಸರಿಯಾದ ರೀತಿಯಲ್ಲಿ ತನ್ನ ಎತ್ತುಗಳನ್ನು ಹಿಡಿದುಕೊಳ್ಳದೇ ಕೇಕೆ ಹಾಕುತ್ತಾ ನಿರ್ಲಕ್ಷ್ಯತನದಿಂದ ವರ್ತಿಸಿದ್ದು, ಇದೇ ವೇಳೆ ಎತ್ತುಗಳು ಅತ್ತಿಂದಿತ್ತ ಓಡಾಟದ ಭರದಲ್ಲಿ ಆತನ ಎದೆಗೆ ಕೋಡುಗಳಿಂದ ತಿವಿದಿವೆ. ಆಗ ಶ್ರೀಕಾಂತ ತಲೆಯನ್ನು ಹಚ್ಚಿ ಕೆಳಗಡೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ, ಕೂಡಲೇ ಆತನನ್ನು ಹುಬ್ಬಳ್ಳಿ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಗುರುವಾರ ಆತ ಮೃತಪಟ್ಟಿದ್ದಾನೆ. ಈ ಬಗ್ಗೆ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೀಪಾವಳಿಯ ಪಾಡ್ಯ ದಿನದಂದೇ ಹಾವೇರಿ ನಗರದಲ್ಲಿ ಹಾಗೂ ದೇವಿಹೊಸೂರಿನಲ್ಲಿ ತಲಾ ಓರ್ವ ವೃದ್ಧರು ಹೋರಿ ತಿವಿತದಿಂದ ಮೃತಪಟ್ಟಿದ್ದರೇ, ಹಾನಗಲ್ಲಿನಲ್ಲಿ ಕೂಡ ಓರ್ವ ಯುವಕ ಮೃತಪಟ್ಟಿದ್ದರು. ಈ ವರೆಗೆ ಜಿಲ್ಲೆಯಲ್ಲಿ ಹೋರಿ ತಿವಿತಕ್ಕೆ ನಾಲ್ವರು ಬಲಿಯಾದಂತಾಗಿದೆ.

ಸಂಭ್ರಮದ ಹೋರಿ ಬೆದರಿಸುವ ಸ್ಪರ್ಧೆ

ಹಿರೇಕೆರೂರ: ಹಿಡಿ ಹೊರಿ. ಹೊಡಿ ಹಲಗಿ. ಹರಿ ಕೊಬ್ಬರಿ. ಕೈ ಹಾಕ್ರೋ... ಅಬ್ಬಾ ಅಬ್ಬಬ್ಬಾ ಹೋರಿ ಬಂತು ದಾರಿಬಿಡ್ರೋ ಎಂಬ ಕೂಗು ಎಲ್ಲೆಡೆ ಕೇಳಿಬರುತಿತ್ತು.ಇದು ತಾಲೂಕಿನದ್ಯಾಂತ ವಿವಿಧ ಗ್ರಾಮಗಳಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಆಯೋಜಿಸಿದ್ದ ಭಾರಿ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಕೇಳಿ ಬಂದ ಕೂಗು.ಬೆಳಗ್ಗೆಯಿಂದ ಆರಂಭಗೊಂಡ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಬುರಡಿಕಟ್ಟಿ, ಬಾಳಂಬೀಡ, ಹೊಲಬಿಕೊಂಡ, ಹಿರೇಕೆರೂರು, ಹೊಸೂರು, ಮುಚಡಿ, ಮಳವಳ್ಳಿ, ಡಮ್ಮಳ್ಳಿ, ಚಿಕ್ಕೇರೂರು, ಹಂಸಭಾವಿ, ಕಲ್ವಿಹಳ್ಳಿ ಗ್ರಾಮ ಸೇರಿದಂತೆ ತಾಲೂಕಿನಾದ್ಯಂತ ಗ್ರಾಮಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಯಿತು.

ಹೋರಿಗಳಿಗೆ ಬಾಳಂಬೀಡ ಡಾನ್, ಗುಳಿ ಬಸವ, ಕೌರವ, ಅಪ್ಪು, ಅಂಬೇಡ್ಕರ್‌ ಡಾನ್, ಚಿನ್ನಾಟದ ಚೆಲುವ, ಹುಲಿಯಾ ಸರ್ದಾರ, ಕೋಟಿಗೊಬ್ಬ, ಜನನಾಯಕ, ಬುರಡಿಕಟ್ಟಿ ಬಸವ, ಹೀಗೆ ಮುಂತಾದ ಹೆಸರುಗಳಿಂದ ಓಡುತ್ತಿದ್ದ ಹೋರಿಗಳನ್ನು ಮಾಲಕರು ಹುರಿದುಂಬಿಸುತ್ತಿದ್ದರು. ಬಲೂನ್, ಬಣ್ಣ, ಬಣ್ಣದ ಟೇಪುಗಳೊಂದಿಗೆ ಶೃಂಗಾರಗೊಂಡು. ಮೈತುಂಬಾ ಕೊಬ್ಬರಿ ಕಟ್ಟಿಕೊಂಡು ಪೈಲ್ವಾನರಿಗೆ ಸಿಗದಂತೆ ಅಖಾಡದಲ್ಲಿ ತಪ್ಪಿಸಿಕೊಂಡು ವೇಗವಾಗಿ ಓಡುತ್ತಿರುವ ದೃಶ್ಯ ರೋಮಾಂಚನಗೊಳಿಸಿತ್ತು.ಕಾರ್ಯಕ್ರಮದಲ್ಲಿ ಹೋರಿಗಳಿಗೆ ಯಾವುದೆ ಬಹುಮಾನವಿರಲಿಲ್ಲ. ಇದರಿಂದಾಗಿ ಗಲಾಟೆ ಅನಾಹುತವಾಗದೆ. ಅತ್ಯಂತ ಯಶಸ್ವಿಯಾಗಿ ಹೋರಿ ಬೆದರಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಹೋರಿಗಳ ಮಾಲೀಕರು ಮತ್ತು ಪೈಲ್ವಾನರು ಹಾಗೂ ಸುತ್ತ ಮುತ್ತಲ್ಲಿನ ಗ್ರಾಮಸ್ಥರು ಹೋರಿ ಹಬ್ಬದಲ್ಲಿ ಭಾಗವಹಿಸಿದ್ದರು.