ಕಾಡಾನೆ ದಾಳಿಗೆ ಮತ್ತೊಂದು ಬಲಿ

| Published : Dec 20 2024, 12:46 AM IST

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯ್ತಿ ಮಡಬೂರು ಗ್ರಾಮದ ಎಕ್ಕಡಬೈಲು ಕೆ.ಕೆ.ಎಲಿಯಾಸ್ ( 70 ) ಕಾಡಾನೆ ದಾಳಿಯಿಂದ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಮಡಬೂರಿನ ಕೆ.ಕೆ.ಎಲಿಯಾಸ್‌ ಮೃತ ದುರ್ದೈವಿ । ಕಾಡಾನೆಗಳಿಗೆ ಸೂಕ್ತ ವ್ಯವಸ್ಥೆ ಮಾಡಲು ಆಗ್ರಹ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯ್ತಿ ಮಡಬೂರು ಗ್ರಾಮದ ಎಕ್ಕಡಬೈಲು ಕೆ.ಕೆ.ಎಲಿಯಾಸ್ ( 70 ) ಕಾಡಾನೆ ದಾಳಿಯಿಂದ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಎಕ್ಕಡಬೈಲಿನ ಕೆ.ಕೆ.ಎಲಿಯಾಸ್‌ ಅವರು ತಮ್ಮ ಮಗನ ಜೊತೆ ಎಮ್ಮೆಯನ್ನು ಹುಡುಕುತ್ತಾ ಕಾಡಂಚಿನ ತಮ್ಮ ತೋಟದ ಬದಿಗೆ ಹೋದಾಗ ಎದುರಾದ ಒಂಟಿ ಆನೆ ಕೆ.ಕೆ.ಎಲಿಯಾಸ್‌ ಅವರ ಮೇಲೆ ದಾಳಿ ಮಾಡಿದೆ. ತಕ್ಷಣ ಅವರ ಮಗ ತಪ್ಪಿಸಿಕೊಂಡು ಬಂದಿದ್ದಾನೆ. ಆದರೆ, ಆನೆಯ ಹತ್ತಿರದಲ್ಲೇ ಸಿಕ್ಕಿ ಬಿದ್ದ ಎಲಿಯಾಸ್‌ ಅವರ ಮೇಲೆ ಒಂಟಿ ಆನೆ ದಾಳಿ ಮಾಡಿ ಸಾಯಿಸಿದೆ.

ಆನೆ ದಾಳಿಯಿಂದ ಕೆ.ಕೆ.ಎಲಿಯಾಸ್ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಗ್ರಾಮಸ್ಥರ ಸ್ಥಳಕ್ಕೆ ಜಮಾಯಿಸಿದ್ದಾರೆ. ಸ್ಥಳಕ್ಕೆ ಕೊಪ್ಪ ಡಿಎಫ್‌.ಓ.ನಂದೀಶ್, ವಲಯ ಅರಣ್ಯಾಧಿಕಾರಿ ಪ್ರವೀಣ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದರು. ಸ್ಥಳದಲ್ಲಿದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈಗಾಗಲೇ ಸೀತೂರಿನಲ್ಲಿ ಉಮೇಶ್‌ ಎಂಬುವರು ಸತ್ತು 20 ದಿನ ಕಳೆಯುವು ದರೊಳಗೆ ಮತ್ತೊಬ್ಬ ರೈತರು ಬಲಿಯಾಗಿದ್ದಾರೆ. ನಾಡಿಗೆ ಬಂದಿರುವ ಕಾಡಾನೆಗಳನ್ನು ಮತ್ತೆ ಭದ್ರಾ ಅಭಯಾರಣ್ಯಕ್ಕೆ ಓಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಒಂದು ವಾರದಿಂದಲೂ ಕಾಡಾನೆ ಸುತ್ತಾಟ:

ಕಾಡಾನೆಗಳು ಕಳೆದ 1 ವಾರದಿಂದಲೂ ಮಡಬೂರು ಗ್ರಾಮದಲ್ಲಿ ಸುತ್ತಾಡುತ್ತಿದ್ದು ಜನರ ಭಯಭೀತರಾಗಿದ್ದರು. ಅಡಕೆ ತೋಟಕ್ಕೆ ನುಗ್ಗಿ ಅಡಕೆ ಮರಗಳನ್ನು ದ್ವಂಸ ಮಾಡುತ್ತಿದ್ದರು. ಅಡಕೆ ಕೊನೆ ತೆಗೆಯಲು ತೋಟಕ್ಕೆ ಹೋಗಲು ಸಹ ರೈತರು ಭಯ ಪಡುತ್ತಿದ್ದರು. ಸೀತೂರು ಗ್ರಾಮದ ಕೆರೆಗದ್ದೆ ಉಮೇಶ್ ನಂತರ ಈಗ ಮತ್ತೊಬ್ಬ ರೈತ ಕೆ.ಕೆ.ಎಲಿಯೇಸ್‌ ಅವರನ್ನು ಆನೆ ದಾಳಿ ಮಾಡಿ ಸಾಯಿಸಿದ್ದರಿಂದ ಗ್ರಾಮಸ್ಥರು ಮತ್ತಷ್ಟು ಭಯ ಭೀತರಾಗಿದ್ದಾರೆ.

ಆನೆಯ ದಾಳಿಯಿಂದ ಮೃತಪಟ್ಟ ಕೆ.ಕೆ.ಎಲಿಯಾಸ್ ಅವರ ಮತದೇಹದ ಮರಣೋತ್ತರ ಪರೀಕ್ಷೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಯಿತು.

--- ಬಾಕ್ಸ--

ಸರ್ಕಾರ ತಕ್ಷಣ ಭದ್ರಾ ಹಿನ್ನೀರಿನ ಸುತ್ತ ರೇಲ್ವೆ ಹಳಿ ಬಳಸಿ ಆನೆ ತಡೆ ಬೇಲಿ ನಿರ್ಮಿಸಿಕೊಡಬೇಕು ಎಂದು ಮುತ್ತಿನಕೊಪ್ಪ ಜನ ಜಾಗೃತಿ ವೇದಿಕೆ ಅಧ್ಯಕ್ಷ ಮನೋಹರ್‌ ಆಗ್ರಹಿಸಿದರು.

ಪತ್ರಿಕಾ ಹೇಳಿಕೆ ನೀಡಿ, ಇಂದು ಮಡಬೂರು ಗ್ರಾಮದ ಎಕ್ಕಡಬೈಲಿನಲ್ಲಿ ಕಾಡಾನೆ ಎಲಿಯೇಸ್ ಎಂಬವರನ್ನು ಸಾಯಿಸಿದೆ. ಸರ್ಕಾರ ಮೃತ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ಆನೆ ತಡೆ ಬೇಲಿಯನ್ನು ನಿರ್ಮಿಸಿ ಅಮಾಯಕ ಜನರ ಪ್ರಾಣ ಹಾಗೂ ಆಸ್ತಿಯನ್ನು ರಕ್ಷಣೆ ಮಾಡಬೇಕು. ಶಾಸಕರು ಹಾಗೂ ಲೋಕ ಸಭಾ ಸಂಸದರು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ರೇಲ್ವೆ ಹಳಿಯ ಬ್ಯಾರಿಕೇಡ್‌ ನ್ನು ತಕ್ಷಣ ಮಾಡಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.