ಧಾರವಾಡದಲ್ಲಿ ಮತ್ತೊಬ್ಬ ಯುವಕನ ಕೊಲೆ

| Published : Feb 06 2024, 01:36 AM IST

ಸಾರಾಂಶ

ಅಳ್ನಾವರ ತಾಲೂಕಿನ ಅರವಟಗಿ ಗ್ರಾಮದ ಕಲ್ಲನಗೌಡ ಪಾಟೀಲ (26) ಕೊಲೆಯಾಗಿದ್ದು, ಆತನ ಜೊತೆಯಲ್ಲಿದ್ದ ತಾಲೂಕಿನ ತಡಸಿಕೊಪ್ಪದ ಸುನೀಲ ಜಕ್ಕಣ್ಣವರ ಗಾಯಗೊಂಡಿದ್ದು, ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಧಾರವಾಡ: ಕಳೆದ ಶನಿವಾರ ರಾತ್ರಿ ವಿದ್ಯಾಗಿರಿ ಪೊಲೀಸ ಠಾಣೆ ವ್ಯಾಪ್ತಿಯ ಅಂಬೇಡ್ಕರ ಬಡಾವಣೆಯಲ್ಲಿ ನಡೆದ ಯುವಕನ ಕೊಲೆಯ ಬೆನ್ನಲ್ಲಿಯೇ ಭಾನುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ಮತ್ತೊಬ್ಬ ಯುವಕನ ಕೊಲೆಯಾಗಿದೆ.

ಅಳ್ನಾವರ ತಾಲೂಕಿನ ಅರವಟಗಿ ಗ್ರಾಮದ ಕಲ್ಲನಗೌಡ ಪಾಟೀಲ (26) ಕೊಲೆಯಾಗಿದ್ದು, ಆತನ ಜೊತೆಯಲ್ಲಿದ್ದ ತಾಲೂಕಿನ ತಡಸಿಕೊಪ್ಪದ ಸುನೀಲ ಜಕ್ಕಣ್ಣವರ ಗಾಯಗೊಂಡಿದ್ದು, ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಏನಿದು ಘಟನೆ?

ಮೃತ ಕಲ್ಲನಗೌಡ ಹಾಗೂ ಗೆಳೆಯ ಸುನೀಲ ಜಕ್ಕನ್ನವರ ಭಾನುವಾರ ರಾತ್ರಿ ಕೆಲಸದ ನಿಮಿತ್ತ ಕರ್ನಾಟಕ ವಿವಿ ಪಕ್ಕದ ಮನಸೂರು ರಸ್ತೆ ಮೂಲಕ ಧಾರವಾಡಕ್ಕೆ ಮರಳುತ್ತಿದ್ದರು. ಈ ವೇಳೆ ಅಲ್ಲಿಯ ಓಂ ಆಶ್ರಮದ ಎದುರು ಸುನೀಲ ಮೂತ್ರ ವಿಸರ್ಜನೆಗೆ ಇಳಿದಿದ್ದಾನೆ. ಆಗ ಕಲ್ಲನಗೌಡ ಬೈಕ್ ಮೇಲೆ ಕುಳಿತಿದ್ದನು. ಈ ವೇಳೆ ಹಿಂದಿನಿಂದ ಕಾರಿನಲ್ಲಿ ಬಂದ ಗುಂಪೊಂದು ಬೈಕ್ ಪಕ್ಕಕ್ಕೆ ತೆಗೆದುಕೊಳ್ಳುವಂತೆ ಹೇಳಿದೆ. ಆಗ ಕಲ್ಲನಗೌಡ ನಿಮ್ಮ ವಾಹನ ದಾಟುತ್ತದೆ, ಮುಂದೆ ಹೋಗಿ ಎಂದಿದ್ದಾನೆ. ಇದೇ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಈ ಹೊಡೆದಾಟ ನಡೆದಿದೆ.

ಆರಂಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದಿತ್ತು. ಆದರೆ, ಕಾರಿನಲ್ಲಿ ಇದ್ದವರು ಫೋನ್ ಮಾಡಿ ಮತ್ತೊಂದಿಷ್ಟು ಜನರನ್ನು ಸ್ಥಳಕ್ಕೆ ಕರೆದಿದ್ದಾರೆ. ಬೊಲೆರೋ ವಾಹನದಲ್ಲಿ ಬಂದವರು ಏಕಾಏಕಿ ಕಲ್ಲನಗೌಡನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ರಾಡ್‌ನಿಂದ ಕಲ್ಲನಗೌಡನ ತಲೆಗೆ ಬಲವಾಗಿ ಹೊಡೆದಿದ್ದರಿಂದ ಆತ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದನು. ಜಗಳ ಬಿಡಿಸಲು ಹೋದ ಸುನೀಲನ ಮೇಲೂ ಆ ಗುಂಪು ದಾಳಿ ಮಾಡಿದೆ. ಕಲ್ಲನಗೌಡನನ್ನು ಕಿಮ್ಸ್‌ಗೆ ದಾಖಲಿಸಲಾಯಿತಾದರೂ ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಸದ್ಯ ಗಾಯಗೊಂಡಿರುವ ಸುನೀಲ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ.

ಕಲ್ಲನಗೌಡ ಮೇಲೆ ಹಲ್ಲೆ ಮಾಡಿದ ಗುಂಪು ಶಾಸಕ ವಿನಯ್ ಕುಲಕರ್ಣಿ ಡೇರಿಯಲ್ಲಿ ಕೆಲಸ ಮಾಡುವವರು ಎಂದು ಮೃತ ಕಲ್ಲನಗೌಡ ಸಹೋದರ ಮಲ್ಲನಗೌಡ ಪಾಟೀಲ ಆರೋಪಿಸಿದ್ದು, ಈ ಕುರಿತು ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ವಿನಯ್ ಡೇರಿಯಲ್ಲಿ ಕಾರ್ಯ ನಿರ್ವಹಿಸುವ ನಟರಾಜ್ ಎಂಬುವವರ ಕಾರು ಚಾಲಕ ಬೀರಪ್ಪ, ಬಸವರಾಜ ಕುರಿ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಅಕ್ರಮ ಮದ್ಯ ಮಾರಾಟಕ್ಕೆ ಯತ್ನ: ನಾಲ್ವರ ಬಂಧನಹುಬ್ಬಳ್ಳಿ: ಉಣಕಲ್ ಟಿಂಬರ್ ಯಾರ್ಡ್ ಹತ್ತಿರ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್‌ ಜಯಂತ್ ಗೌಳಿ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತಂಡವು ಕ್ಷಿಪ್ರ ದಾಳಿ ನಡೆಸಿ ನಗರದ ಸುನೀಲ ಬಳ್ಳಾರಿ, ಯಲ್ಲಪ್ಪ ಹಬೀಬ, ಅಜೀಜ ಬೇಪಾರಿ, ಮುಬಾರಕ್‌ ಬಸರಿ ಎಂಬುವವರನ್ನು ಬಂಧಿಸಲಾಗಿದೆ.ಬಂಧಿತರಿಂದ ₹60,500 ಮೌಲ್ಯದ 460 ಲೀಟರ್ ಸ್ಪಿರಿಟ್, ಕೃತ್ಯಕ್ಕೆ ಬಳಸಿದ ಕಾರ್ ಸೇರಿದಂತೆ ಒಟ್ಟು ₹4 ಲಕ್ಷಕ್ಕೂ ಹೆಚ್ಚು ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.