ಸಾರಾಂಶ
ಕೊಪ್ಪಳ:
ಗಂಗಾವತಿ ಉಪಚುನಾವಣೆ ಘೋಷಣೆಯಾಗುವ ಮುನ್ನವೇ ಕಾಂಗ್ರೆಸ್ ಟಿಕೆಟ್ ಕುರಿತು ಹಬ್ಬಿದ್ದ ವದಂತಿಯ ಕುರಿತು ಮುನಿಸಿಕೊಂಡಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಈಗ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶಕ್ಕೆ ಆಹ್ವಾನಿಸಿಲ್ಲವೆಂದು ಅಸಮಾಧಾನ ಹೊರಹಾಕಿದ್ದಾರೆ.ಈ ಕುರಿತು ವಾಟ್ಸ್‌ಆ್ಯಪ್ ಸಂದೇಶವನ್ನು ತನ್ನ ಅಭಿಮಾನಿಗಳು, ಕಾರ್ಯಕರ್ತರಿಗೆ ಹರಿಬಿಟ್ಟಿರುವ ಇಕ್ಬಾಲ್ ಅನ್ಸಾರಿ, ನನ್ನನ್ನು ಯಾರು ಸಹ ಸಮಾವೇಶಕ್ಕೆ ಆಹ್ವಾನಿಸಿಲ್ಲ. ನನ್ನ ಕಾರಿಗೂ ಪಾಸ್ ನೀಡಿಲ್ಲ. ಉಳಿದವರಿಗೆ ಆಹ್ವಾನ ನೀಡಿದರೂ ನನ್ನನ್ನು ಆಹ್ವಾನಿಸದೆ ಇರುವುದಕ್ಕೆ ಯಾರು ಕಾರಣ ಎನ್ನುವುದು ಗೊತ್ತಿದೆ. ಇದರಲ್ಲಿ ಷಡ್ಯಂತ್ರವಿದೆ. ಯಾರು ತಮ್ಮ ಗೆಲುವಿಗೆ ಅನ್ಸಾರಿ ಬಳಸಿಕೊಂಡರೋ ಅವರೇ ಇದೀಗ ದೂರ ಮಾಡಿದ್ದಾರೆ. ಅವರಿಗೆ ನೆಲವೇ ಕಾಣುತ್ತಿಲ್ಲ ಎಂದು ಹಿಟ್ನಾಳ ಕುಟುಂಬದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ.
ಕಾಂಗ್ರೆಸ್ ಗೆಲುವಿಗೆ ಮುಸ್ಲಿಮರು ಶೇ. 90ರಷ್ಟು ಮತದಾನ ಮಾಡಿದ್ದಾರೆ. ಉಳಿದ ಯಾವ ಸಮುದಾಯವೂ ಇಷ್ಟೊಂದು ಬೆಂಬಲ ನೀಡಿಲ್ಲ. ಆಗ ಇಕ್ಬಾಲ್ ಅನ್ಸಾರಿ ಬೇಕಾಗಿದ್ದರು. ಈಗ ಬೇಡವಾಗಿದ್ದಾರೆ. ಗೆದ್ದ ಮೇಲೆ ಕನಿಷ್ಠ ಸೌಜನ್ಯಕ್ಕೂ ಕೃತಜ್ಞತೆ ಸಲ್ಲಿಸಿಲ್ಲ. ಈಗ ಹೊಸಪೇಟೆ ಸಮಾವೇಶದಲ್ಲಿ ಆಹ್ವಾನ ಬಾರದಂತೆ ಮಾಡಿದ್ದಾರೆ. ಅದು, ಏನೇ ಇರಲಿ, ನನ್ನ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಸಮಾವೇಶಕ್ಕೆ ಹೋಗಿ, ಅಲ್ಲಿ ನಾಯಕರು ಮಾತನಾಡುವುದನ್ನು ಕೇಳಿಬನ್ನಿ. ಮುಂದೆ ನಾನು ಏನು ಮಾಡಬೇಕು ಎನ್ನುವುದನ್ನು ಹೇಳುತ್ತೇನೆ ಎಂದಿದ್ದಾರೆ.ಚರ್ಚೆ ಶುರು:ಜನಾರ್ದನ ರೆಡ್ಡಿ ಅವರಿಗೆ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದ್ದರಿಂದ ಅವರು ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ. ಹೀಗಾಗಿ ಗಂಗಾವತಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಶುರುವಾಗಿದೆ. ಇದೀಗ ಅನ್ಸಾರಿಗೆ ಟಿಕೆಟ್ ತಪ್ಪಿಸುವ ಪ್ರಯತ್ನವೂ ನಡೆದಿರುವುದು ಗುಟ್ಟಾಗಿ ಉಳಿದಿಲ್ಲ. ಈ ಕಾರಣಕ್ಕಾಗಿಯೇ ಅನ್ಸಾರಿ ಕಾಂಗ್ರೆಸ್‌ನಿಂದ ನಾನೇ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಈಗ ಅವರನ್ನು ಸಮಾವೇಶದಿಂದ ಕಡೆಗಣಿಸಿರುವುದು ತೀರ್ವ ಚರ್ಚೆಗೆ ಗ್ರಾಸವಾಗಿದೆ.