ಸಾರಾಂಶ
ಸೋಮರಡ್ಡಿ ಅಳವಂಡಿ ಕೊಪ್ಪಳ
ಕೊಪ್ಪಳಕ್ಕೆ ಸಿಎಂ ಆಗಮಿಸುವ ಹೊಸ್ತಿಲಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಕಿದ ಆಡಿಯೋ ಬಾಂಬ್ ಈಗ ಕೆಪಿಸಿಸಿ ಕಚೇರಿ ತಲುಪಿದೆ. ಅಷ್ಟೇ ಅಲ್ಲ ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೆಪಿಸಿಸಿ ಸ್ಥಳೀಯ ನಾಯಕರಿಂದ ವಿವರಣೆ ಸಹ ಕೇಳಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಏನದು ಅನ್ಸಾರಿ ಆಡಿಯೋ? ಎಂದು ಕೇಳಿದ್ದಾರೆ.ಹೌದು, ಸಿಎಂ ಸಿದ್ದರಾಮಯ್ಯ ಕೊಪ್ಪಳಕ್ಕೆ ಆಗಮಿಸುವ ಕಾರ್ಯಕ್ರಮದ ಹಿಂದಿನ ದಿನವೇ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸ್ಥಳೀಯ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ ಆಡಿಯೋವೊಂದನ್ನು ರಿಲೀಸ್ ಮಾಡಿದ್ದರು.
ಈ ಆಡಿಯೋ ಇದೇ ಮೊದಲಲ್ಲ, ಈ ಹಿಂದೆಯೂ ಇಂಥ ಆಡಿಯೋಗಳನ್ನು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹರಿ ಬಿಟ್ಟಿದ್ದು ಗೊತ್ತಿರುವ ಸಂಗತಿಯೇ ಆಗಿದೆ.ಈ ಬಾರಿ ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ ಆಡಿಯೋ ಹರಿಬಿಟ್ಟಿದ್ದರು.
ಆಡಿಯೋದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲ, ನನ್ನ ವಿರುದ್ಧ ಕೆಪಿಸಿಸಿಗೆ ಮತ್ತು ವಿಶೇಷವಾಗಿ ಸಿಎಂ ಸಿದ್ದರಾಮಯ್ಯಗೆ ಇನ್ನಿಲ್ಲದ ಸುಳ್ಳು ಹೇಳುತ್ತಿದ್ದಾರೆ. ತಪ್ಪು ಮಾಹಿತಿ ನೀಡುತ್ತಿದ್ದಾರೆ. ನನ್ನನ್ನು ಕಾರ್ಯಕ್ರಮಕ್ಕೂ ಆಹ್ವಾನ ಮಾಡುತ್ತಿಲ್ಲ ಎಂದೆಲ್ಲ ಆಕ್ರೋಶ ಹೊರಹಾಕಿದ್ದಾರೆ.ಇದನ್ನು ಈಗ ಕೆಪಿಸಿಸಿ ಗಂಭೀರವಾಗಿ ಪರಿಗಣಿಸಿದೆ, ಈ ಹಿಂದಿನ ಆಡಿಯೋಗಳ ಕುರಿತು ಕೆಪಿಸಿಸಿ ಪಾಳಯದಲ್ಲಿ ಚರ್ಚೆಯಾಗಿದೆ. ಇದಕ್ಕಿಂತ ಮಿಗಿಲಾಗಿ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಅನ್ಸಾರಿ ಆಡಿಯೋ ಗಲಾಟೆ ಏನು ಅದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರನ್ನು ಸೇರಿದಂತೆ ಜಿಲ್ಲೆಯ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.
ಇದು, ಅತಿಯಾಯಿತು ಎಂದು ಸಹ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಕೆಪಿಸಿಸಿ ಪದಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಕುರಿತು ಏನಾದರೂ ಕ್ರಮವಾಗಬೇಕು. ಇಂಥದ್ದಕ್ಕೆ ಬ್ರೇಕ್ ಹಾಕಬೇಕು ಎಂದು ಮುಂದಾಗಿದೆ. ಆದರೆ, ಇಕ್ಬಾಲ್ ಅನ್ಸಾರಿ ಅವರ ಆಡಿಯೋದಲ್ಲಿನ ದೂರನ್ನು ಗಂಭೀರವಾಗಿ ಪರಿಗಣಿಸುತ್ತದೆಯೋ ಅಥವಾ ಇಕ್ಬಾಲ್ ಅನ್ಸಾರಿ ವಿರುದ್ಧವೇ ಪಕ್ಷ ಕ್ರಮಕೈಗೊಳ್ಳುತ್ತದೆಯೋ ಎನ್ನುವುದು ವಾರದೊಳಗಾಗಿಯೇ ಗೊತ್ತಾಗಲಿದೆ ಎನ್ನುತ್ತದೆ ಕಾಂಗ್ರೆಸ್ ಮೂಲಗಳು.ಇದು, ಏನು ಬೇಕಾದರೂ ಆಗಬಹುದು ಎಂದೇ ಹೇಳಲಾಗುತ್ತದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಉಚ್ಚಾಟಿಸುವಂತೆಯೂ ಕೆಲವೊಬ್ಬ ನಾಯಕರು ಪ್ರಸ್ತಾವನೆ ಇಟ್ಟಿದ್ದಾರೆ ಎನ್ನುವುದು ಈಗ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೆಪಿಸಿಸಿ ಏನು ಕ್ರಮಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಡಿಯೋ ಕುರಿತಾಗಲಿ ಅಥವಾ ತಮ್ಮನ್ನೇ ಹಿಗ್ಗಾಮುಗ್ಗಾ ಹಿಯಾಳಿಸಿದ್ದಕ್ಕಾಗಲಿ ಯಾರು ಸಹ ಉತ್ತರ ನೀಡಿಲ್ಲ. ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಮಾತ್ರ ಅವರು ನಮ್ಮ ಹಿರಿಯರು, ಸಹೋದರರು, ಬುದ್ಧಿವಾದ ಹೇಳಿದರೆ ಅದನ್ನು ನಾವು ಆಶೀರ್ವಾದ ಎಂದು ಸ್ವೀಕಾರ ಮಾಡುತ್ತೇವೆ ಎಂದು ಹೇಳಿದ್ದಾರೆಯೇ ಹೊರತು, ಅದರ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಹೀಗಾಗಿ ಕೆಪಿಸಿಸಿ ಕ್ರಮ ಏನಾಗಬಹುದು ಎನ್ನುವುದೇ ಸದ್ಯದ ಕುತೂಹಲ.ರಾಜಕೀಯ ಮಾತನಾಡಲ್ಲ : ಆಡಿಯೋ ರಿಲೀಸ್ ಮಾಡಿದ ಮೇಲೆ ಮೊದಲ ಬಾರಿಗೆ ಮಹ್ಮದ್ ಫೈಗಂಬರ್ ಅವರ 1500ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಬಹಿರಂಗ ವೇದಿಕೆಯಲ್ಲಿ ಮೊದಲ ಬಾರಿಗೆ ಮಾತನಾಡಿದ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ರಾಜಕೀಯ ಮಾತನಾಡಿಲ್ಲ ಎಂದಿದ್ದರು. ಅನ್ಸಾರಿ ಅವರು ಏನು ಮಾತನಾಡುತ್ತಾರೆ ಎನ್ನುವ ಕುತೂಹಲ ಇತ್ತು. ಆದರೆ, ತಮ್ಮ ಭಾಷಣದುದ್ದಕ್ಕೂ ರಾಜಕೀಯ ಪ್ರಸ್ತಾಪ ಮಾಡದೆ ಕೇವಲ ಮಹ್ಮದ್ ಪೈಗಂಬರ್ ಕುರಿತು ಮಾತನಾಡಿದರು.