ಅನ್ಸಾರಿ ಮುನಿಸು ಶಮನ ಯತ್ನ ವಿಫಲ

| Published : Mar 24 2024, 01:30 AM IST

ಸಾರಾಂಶ

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ತಮ್ಮ ನಿಲುವು ತಿಳಿಸುವುದಾಗಿ ಅನ್ಸಾರಿ ಹೇಳಿದ್ದಾರೆ ಎನ್ನಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ಅನ್ಸಾರಿ ಮನೆಯಲ್ಲಿ ತಂಗಡಗಿ, ಹಿಟ್ನಾಳ ಸಭೆ

ಸಿಎಂ ಜತೆ ಚರ್ಚಿಸಿದ ಆನಂತರ ಅನ್ಸಾರಿ ನಿರ್ಣಯ ಸಾಧ್ಯತೆ

ಕನ್ನಡಪ್ರಭ ವಾರ್ತೆ ಗಂಗಾವತಿ

ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಮುನಿಸಿಕೊಂಡಿರುವ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರೊಂದಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕೊಪ್ಪಳ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ್‌ ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ತಮ್ಮ ನಿಲುವು ತಿಳಿಸುವುದಾಗಿ ಅನ್ಸಾರಿ ಹೇಳಿದ್ದಾರೆ ಎನ್ನಲಾಗಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿಯೇ ಮುಸ್ಲಿಂ ಮತಬ್ಯಾಂಕ್ ಹೆಚ್ಚಿಗೆ ಇದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅನ್ಸಾರಿ ಅವರನ್ನು ಸಮಾಧಾನಪಡಿಸುವುದಕ್ಕಾಗಿ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮುಂದಾಗಿದ್ದರು. ಆದರೆ ಮುನಿಸು ಶಮನ ಯತ್ನ ವಿಫಲವಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಬರುವ ಕೊಪ್ಪಳದ ಕೆಲವು ಹೋಬಳಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಪರ ಹಿಟ್ನಾಳ ಕುಟಂಬದವರು ಕೆಲಸ ಮಾಡಿಲ್ಲ ಎಂದು ಅನ್ಸಾರಿ ಬೆಂಬಲಿಗರು ತಂಗಡಗಿ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

ಸಂಧಾನ ವಿಫಲ:

ಕಳೆದ ಎರಡು ದಿನಗಳ ಹಿಂದೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಿವಾಸದಲ್ಲಿ ರಾತ್ರಿ 10ರಿಂದ 2ರ ವರೆಗೂ ನಡೆದ ಸಂಧಾನ ಸಭೆ ಕೊನೆಗೂ ವಿಫಲವಾಗಿದೆ. ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ ಎಂದು ಅನ್ಸಾರಿ ಅವರಿಗೆ ನಾಯಕರು ಮನವಿ ಮಾಡಿದರು. ಆದರೆ ಅನ್ಸಾರಿ ಕಡೆಯಿಂದ ಉತ್ತರವೇ ಬರಲಿಲ್ಲ. ನನಗೆ ಅನ್ಯಾಯವಾಗಿದ್ದು, ಕಾಂಗ್ರೆಸ್ ಮುಖಂಡರ ವಿರೋಧ ನನ್ನ ಸೋಲಿಗೆ ಕಾರಣವಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಅನ್ಸಾರಿ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಅನ್ಸಾರಿ ಕಡೆಯಿಂದ ಸಮರ್ಪಕವಾಗಿ ಉತ್ತರ ಬಾರದ ಕಾರಣ ಸಿಎಂ ಸಿದ್ದರಾಮಯ್ಯ ಜತೆ ಮಾತುಕತೆ ನಡೆಸುವ ಮೂಲಕ ಅಮಾಧಾನ ಬಗೆಹರಿಸುವುದಾಗಿ ಹೇಳಿ ಸಚಿವರು, ಶಾಸಕರು, ನಿಯೋಜಿತ ಅಭ್ಯರ್ಥಿ ನಿರ್ಗಮಿಸಿದರು ಎನ್ನಲಾಗುತ್ತಿದೆ.