ಪಶುವೈದ್ಯಾಧಿಕಾರಿಗಳ ನೇಮಕಾತಿ ಲಿಖಿತ ಪರೀಕ್ಷೆ ಬಳಿಕ ತಾನು ಅಧಿಕೃತವಾಗಿ ಪ್ರಕಟಿಸಿದ ಕೀ ಉತ್ತರಗಳಲ್ಲಿನ ಗೊಂದಲವೇ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಕ್ರಮಗಳ ಸಿಕ್ಕು ಬಿಡಿಸಲು ಜಾರಿ ನಿರ್ದೇಶನಾಲಯ (ಇ.ಡಿ.) ಹಾಗೂ ರಾಜ್ಯ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ನೆರವಾಗಿದೆ ಎಂಬ ಕುತೂಹಲಕಾರಿ ಸಂಗತಿ ಗೊತ್ತಾಗಿದೆ.
ಗಿರೀಶ್ ಮಾದೇನಹಳ್ಳಿ
ಕನ್ನಡಪ್ರಭ ವಾರ್ತೆ ಬೆಂಗಳೂರುಪಶುವೈದ್ಯಾಧಿಕಾರಿಗಳ ನೇಮಕಾತಿ ಲಿಖಿತ ಪರೀಕ್ಷೆ ಬಳಿಕ ತಾನು ಅಧಿಕೃತವಾಗಿ ಪ್ರಕಟಿಸಿದ ಕೀ ಉತ್ತರಗಳಲ್ಲಿನ ಗೊಂದಲವೇ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಕ್ರಮಗಳ ಸಿಕ್ಕು ಬಿಡಿಸಲು ಜಾರಿ ನಿರ್ದೇಶನಾಲಯ (ಇ.ಡಿ.) ಹಾಗೂ ರಾಜ್ಯ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ನೆರವಾಗಿದೆ ಎಂಬ ಕುತೂಹಲಕಾರಿ ಸಂಗತಿ ಗೊತ್ತಾಗಿದೆ.
ಪರೀಕ್ಷೆ ಮುಗಿದ ವಾರದ ಬಳಿಕ ಎರಡು ಬಾರಿ ಪರಿಷ್ಕೃತ ಕೀ ಉತ್ತರಗಳನ್ನು ಆಯೋಗವು ಬಿಡುಗಡೆಗೊಳಿಸಿತು. ಮೊದಲು ಕೀ ಉತ್ತರ ಪ್ರಕಟವಾದಾಗ ಶಂಕಿತ ಅಭ್ಯರ್ಥಿಗಳ ಬಹುತೇಕ ಒಂದೇ ನಮೂನೆ ಅಂಕಗಳಿಸಿದ್ದರು. ಆದರೆ ಎರಡನೇ ಬಾರಿ ಬಿಡುಗಡೆಗೊಳಿಸಿದಾಗ ಕೆಲ ತಪ್ಪುಗಳು ಕಂಡು ಬಂದು ಅಂಕಗಳಲ್ಲಿ ಏರುಪೇರಾಗಿದ್ದವು. ಈ ಬಗ್ಗೆ ಶಂಕೆಗೊಂಡ ಇ.ಡಿ., ಅಭ್ಯರ್ಥಿಗಳ ಉತ್ತರ ಪತ್ರಿಕೆಯಲ್ಲಿ ಸರಿಯಾದ ಉತ್ತರ ಹಿಡಿದು ತನಿಖೆಗಿಳಿದರೆ, ತಪ್ಪು ಉತ್ತರಗಳನ್ನು ಮೂಲಕ ಸಿಐಡಿ ಪತ್ತೆದಾರಿಕೆಗೆ ಇಳಿಯಿತು. ಆಗ ಪರೀಕ್ಷೆಗೂ ಮುನ್ನವೇ ಪ್ರಶ್ನೆಗಳು ಹಾಗೂ ಕೀ ಉತ್ತರಗಳು ಬಿಕರಿ ಆಗಿರುವುದು ಗೊತ್ತಾಗಿದೆ.ಈ ಮಾಹಿತಿ ಮೇರೆಗೆ ರ್‍ಯಾಂಕ್ ಪಡೆದ ಅಭ್ಯರ್ಥಿಗಳನ್ನು ವಶಕ್ಕೆ ಪಡೆದು ಇ.ಡಿ. ಹಾಗೂ ಸಿಐಡಿ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದರು. ಈ ವೇಳೆ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಿ ಅಣಕು ಪರೀಕ್ಷೆಯನ್ನು ತನಿಖಾ ತಂಡಗಳು ನಡೆಸಿದವು. ಆಗ ಕೆಲ ಅಭ್ಯರ್ಥಿಗಳು ತಪ್ಪು ಉತ್ತರ ನೀಡಿದಾಗ ‘ರ್‍ಯಾಂಕ್’ ಪಡೆದ ಹಿಂದಿನ ಕರಾಮತ್ತು ಬಯಲಾಯಿತು ಎಂದು ತಿಳಿದು ಬಂದಿದೆ.
30 ಅಂಕಗಳು ಗ್ರೇಸ್ ಮಾರ್ಕ್ಸ್:ಪಶುವೈದ್ಯಾಧಿಕಾರಿಗಳ ಹುದ್ದೆಗೆ ಜನವರಿ 7 ಮತ್ತು 8ರಂದು ಕೆಪಿಎಸ್‌ಸಿ ಲಿಖಿತ ಪರೀಕ್ಷೆ ನಡೆಸಿತು. ಈ ಪರೀಕ್ಷೆ ಮುಗಿದ ಬಳಿಕ ಜನವರಿ 13ರಂದು ಕೀ ಉತ್ತರಗಳನ್ನು ಅಧಿಕೃತವಾಗಿ ಆಯೋಗವು ಪ್ರಕಟಿಸಿತು. ಆದರೆ ಇದಾದ ಕೆಲ ದಿನಗಳಲ್ಲೇ ಆ ಕೀ ಉತ್ತರಗಳಲ್ಲಿ ತಪ್ಪುಗಳಿವೆ ಎಂದು ಆಯೋಗ ಹಿಂಪಡೆಯಿತು. ತರುವಾಯ ಫೆ.2ರಂದು ಮತ್ತೆ ಕೀ ಉತ್ತರಗಳನ್ನು ಆಯೋಗ ಪ್ರಕಟಿಸಿತು. ಇದೇ ಅಂತಿಮ ಕೀ ಉತ್ತರಗಳ ಪ್ರಕಟಣೆಯಾಗಿದ್ದು, ಇದಕ್ಕೆ ಯಾವುದೇ ಅಕ್ಷೇಪಣೆ ಅಥವಾ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಸ್ಪಷ್ಟಪಡಿಸಿದ್ದರು.
ಆದರೆ ಮೊದಲು ಕೀ ಉತ್ತರಗಳನ್ನು ಬಿಡುಗಡೆಗೊಳಿಸಿದಾಗ ಈಗ ಅಕ್ರಮದಲ್ಲಿ ಶಾಮೀಲಾಗಿರುವ ಆರೋಪ ಹೊತ್ತಿರುವ ಸಿದ್ಧಾರ್ಥ್, ರಾಜ್ ಮೊಹಮ್ಮದ್, ಬಸವರಾಜ್, ಮಹೇಂದ್ರ, ನಿರಂಜನ್, ಕಿರಣ್ ಗೌಡ, ಚೈತ್ರಾ ಡಾ। ವಿನುತಾ, ನಂದೀಶ್ ಹಾಗೂ ಮೊಹಮ್ಮದ್ ಸುಹೇಲ್ ಸೇರಿದಂತೆ ಹಲವು ರ್‍ಯಾಂಕ್ ಅಭ್ಯರ್ಥಿಗಳಲ್ಲಿ ಅಂಕಗಳು ಹೆಚ್ಚುಕಮ್ಮಿ ಒಂದೇ ನಮೂನೆಯಲ್ಲಿದ್ದವು. ಆದರೆ ಎರಡನೇ ಬಾರಿ ಪರಿಷ್ಕೃತ ಕೀ ಉತ್ತರ ಬಿಡುಗಡೆಗೊಂಡಾಗ ಆ ಅಭ್ಯರ್ಥಿಗಳ ಸುಮಾರು 15 ರಿಂದ 20 ಉತ್ತರಗಳು ತಪ್ಪಾಗಿದ್ದವು.ಇದು ತನಿಖಾ ತಂಡಗಳಿಗೆ ಶಂಕೆ ಕಾರಣವಾಗಿದೆ. ಮೊದಲು ಹಾಗೂ ಎರಡನೇ ಬಾರಿ ಪರಿಷ್ಕೃತಗೊಂಡ ಕೀ ಉತ್ತರಗಳನ್ನು ಪರಿಶೀಲಿಸಿದಾಗ ಪರೀಕ್ಷೆಗೂ ಮುನ್ನ ಪ್ರಶ್ನೆಗಳು ಹಾಗೂ ಕೀ ಉತ್ತರಗಳು ಸೋರಿಕೆಯಾಗಿವೆ ಎಂಬುದು ಇ.ಡಿ. ಹಾಗೂ ಸಿಐಡಿಗೆ ಬಲವಾದ ಅನುಮಾನ ಮೂಡಿದೆ. ಈ ಗುಮಾನಿ ಮೇರೆಗೆ ಎಫ್‌ಐಆರ್‌ನಲ್ಲಿ ಉಲ್ಲೇಖಿತವಾಗಿದ್ದ ಅಭ್ಯರ್ಥಿಗಳ ಸಂಪರ್ಕ ಜಾಲವನ್ನು ಇಡಿ ಜಾಲಾಡಿದೆ. ಆಗ ಅಕ್ರಮದ ಸಿಕ್ಕುಗಳು ಒಂದೊಂದಾಗಿ ಬಿಡಿಸಿಕೊಂಡಿವೆ ಎಂದು ಮೂಲಗಳು ಹೇಳಿವೆ.30 ಅಂಕಗಳು ಗ್ರೇಸ್:ಕೀ ಉತ್ತರಗಳ ಗೊಂದಲ ಹಿನ್ನೆಲೆಯಲ್ಲಿ ಎಲ್ಲ ಅಭ್ಯರ್ಥಿಗಳಿಗೆ 30 ಅಂಕಗಳು ಗ್ರೇಸ್ ನೀಡುವುದಾಗಿ ಆಯೋಗ ಪ್ರಕಟಿಸಿತು. ಒಂದೇ ಪ್ರಶ್ನೆಗಳಿಗೆ ಎ, ಬಿ, ಸಿ, ಡಿ ಹೀಗೆ ಒಂದೇ ಉತ್ತರ ನೀಡಲಾಗಿತ್ತು. ಕೆಲವು ಎ ಎಂದೂ, ಮತ್ತೆ ಕೆಲವರು ಡಿ ಎಂದು ಟಿಕ್ ಮಾಡಿದ್ದರು. ಈ ಬಗ್ಗೆ ಆಯೋಗಕ್ಕೆ ಕೆಲವು ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಿದ್ದರು. ಆಗ ಕೀ ಉತ್ತರಗಳನ್ನು ಪರಿಷ್ಕರಣೆಗೆ ಆಯೋಗವು ಒಪ್ಪಿತು. ಅಲ್ಲದೆ ಅಭ್ಯರ್ಥಿಗಳಿಗೆ ಗ್ರೇಸ್ ಅಂಕ ನೀಡಿಕೆಗೆ ಸಹ ಆಯೋಗ ತೀರ್ಮಾನಿಸಿತು ಎನ್ನಲಾಗಿದೆ.
