ಅಭಿವೃದ್ಧಿ ಮೂಲಕ ವಿರೋಧಿಗಳಿಗೆ ಉತ್ತರ ನೀಡುವೆ

| Published : Jun 12 2024, 12:33 AM IST

ಸಾರಾಂಶ

ಹೊಸನಗರದ ಆರ್ಯ-ಈಡಿಗ ಸಭಾಭವನದಲ್ಲಿ ಲೋಕಸಭೆ ಹಾಗೂ ವಿಧಾನಪರಿಷತ್ ಚುನಾವಣೆಯ ಸೋಲಿನ ಆತ್ಮ ವಿಮರ್ಶೆ ಹಾಗೂ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಸನಗರ

ಸಾಗರ-ಹೊಸನಗರ ಕ್ಷೇತ್ರದ ಶಾಸಕನಾಗಿ ನನ್ನ ಕ್ಷೇತ್ರದ ಯಾವ ರೀತಿ ಅಭಿವೃದ್ಧಿ ಕೆಲಸ ಮಾಡಬೇಕು ಎಂಬುವುದರ ಅರಿವಿದೆ. ನನ್ನ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾರು ಅನಗತ್ಯ ಮೂಗು ತೋರಿಸುವುದು ಬೇಡ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಆರ್ಯ-ಈಡಿಗ ಸಭಾಭವನದಲ್ಲಿ ಲೋಕಸಭೆ ಹಾಗೂ ವಿಧಾನಪರಿಷತ್ ಚುನಾವಣೆ ಸೋಲಿನ ಆತ್ಮ ವಿಮರ್ಶೆ ಹಾಗೂ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಒಂದು ವರ್ಷ ಕಳೆದಿದೆ ಒಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ಐದು ಜನಪ್ರಿಯ ಕಾರ್ಯಕ್ರಮಗಳಾದ ಗ್ಯಾರಂಟಿ ಯೋಜನೆಯನ್ನು ಜನತೆಗೆ ಯಶಸ್ವಿಯಾಗಿ ನೀಡಲಾಗಿದೆ. ಸಾಕಷ್ಟು ಅನುದಾನವನ್ನು ಈಗಾಗಲೇ ನಮ್ಮ ಕ್ಷೇತ್ರಕ್ಕೆ ತರಲಾಗಿದ್ದು ರಸ್ತೆ, ಕುಡಿಯುವ ನೀರು ಯೋಜನೆಗೆ ಆದ್ಯತೆ ನೀಡಲಾಗಿದೆ ಎಂದರು. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಈ ಕ್ಷೇತ್ರದಲ್ಲಿ ಏನು ಎಂದು ತೋರಿಸುತ್ತೇನೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲಿ 26 ಸಾವಿರ ಮತಗಳು ಬಿಜೆಪಿಯ ಬಿ.ವೈ ರಾಘವೇಂದ್ರರರಿಗೆ ಹೆಚ್ಚುವರಿಯಾಗಿ ಬಂದು ಗೆದ್ದಿರಬಹುದು. ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಹಣದ ಹೊಳೆ ಹರಿಸಿ ಗೆದ್ದಿರಬಹುದು. ಇದು ಯಾವುದೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸೋಲಲ್ಲ. ಮಾಜಿ ಶಾಸಕ ಹರತಾಳು ಹಾಲಪ್ಪನವರ ವರ್ಚಸ್ಸಿನಿಂದ 26 ಸಾವಿರ ಹೆಚ್ಚುವರಿ ಮತ ಬಂದಿಲ್ಲ. ಅವರು ಖರ್ಚು ಮಾಡಿದ ಹಣದ ಹೊಳೆಯಿಂದ ಗೆದ್ದಿರುವುದು ಎಂದು ನಮ್ಮ ಕ್ಷೇತ್ರದ ಜನತೆಗೆ ಗೊತ್ತಿದೆ. ಮುಂದಿನ ಚುನಾವಣೆಗಳಲ್ಲಿ ಇವರ ನಿಜವಾದ ಬಣ್ಣ ಹೊರಬರಲಿದೆ ಎಂದರು. ಬಿಜೆಪಿ ಪಕ್ಷವು ಧರ್ಮದ ವಿಷಯ ಹಾಗೂ ನರೇಂದ್ರ ಮೋದಿ ತೋರಿಸಿ ಮತ ಕೇಳುತ್ತಾರೆ. ಉತ್ತರ ಪ್ರದೇಶದಲ್ಲಿ ರಾಮ ಮಂದಿರದಲ್ಲಿಯೇ ಬಿಜೆಪಿಗೆ ಸೋಲಾಗಿರುವುದು ಕಂಡರೇ ಶ್ರೀ ರಾಮಚಂದ್ರನಿಗೆ ಬಿಜೆಪಿ ಆಡಳಿತ ನೋಡಿ ಬೇಸರವಾಗಿದೆ ಎಂದು ಎದ್ದು ಕಾಣುತ್ತದೆ. ಈಗ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ 6 ತಿಂಗಳು ನಡೆಸುವುದು ಕಷ್ಟ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎರಡು ಸೋಲಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುಂದಿನ ಚುನಾವಣೆಗೆ ಸಿದ್ಧರಾಗಿ ಎಂದು ಕರೆ ನೀಡಿದರು.5 ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಲಾಭವಿಲ್ಲ:ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥ ಗೌಡ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆ ಮುಂದಿನ ಚುನಾವಣೆಗೆ ಪ್ರೇರಣೆಯಾಗುವುದಿಲ್ಲ. ಯಾವುದೇ ಲಾಭವೂ ಇಲ್ಲ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಸ್ಥಗಿತಗೊಳಿಸಿ ರಾಜ್ಯದ ಅಭಿವೃದ್ಧಿ ಯೋಜನೆ ಕೈಗೊಳ್ಳಬೇಕೆಂದು ಅಭಿಪ್ರಾಯಪಟ್ಟರು. ಹೊಸನಗರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಮಾತನಾಡಿ, ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರು ಲೋಕಸಭೆ ಚುನಾವಣೆ ಘೋಷಣೆಯಾದ ದಿನದಿಂದ ಹಗಲಿರುಳು ಪ್ರತಿ ತಾಲೂಕಿನ ಬೂತ್‌ಗಳಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಮತದಾರರನ್ನು ಮಾತನಾಡಿಸಿ ಮತ ಪಡೆಯುವ ಪ್ರಯತ್ನ ಮಾಡಿದ್ದಾರೆ. ಶಾಸಕರಾದ 1 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಕೆರೆ ಅಭಿವೃದ್ಧಿಗೆ, ಸಣ್ಣ ನೀರಾವರಿ ಇಲಾಖೆಯಿಂದ 12 ಕೋಟಿ ರು. ತಂದಿದ್ದಾರೆ. ಶಾಸಕರು ಏನೂ ಅಭಿವೃದ್ಧಿ ಮಾಡಿಲ್ಲ ಎಂಬ ಅಪಪ್ರಚಾರ ಮಾಡಿ ಮತದಾರರನ್ನು ಒಲಿಸಿಕೊಂಡಿರುವುದು, ಲೋಕಸಭೆ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್, ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್, ಕೆ.ಕೆ ಮಂಜುನಾಥ್ ಸೋಲಿಗೆ ಬೇಳೂರು ಕಾರಣ ಎಂದು ಬಿಜೆಪಿ ಹೇಳಿಕೆ ಅಪ್ಪಟ ಸುಳ್ಳು ಎಂದರು.

ಈ ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ಚಂದ್ರಮೌಳಿ ಗೌಡ, ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ್, ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಎಂ.ಎಂ ಪರಮೇಶ್, ಜಿಲ್ಲಾಧ್ಯಕ್ಷೆ ಅನಿತಾ, ಎರಗಿ ಉಮೆಶ್, ಟೌನ್ ಘಟಕದ ಅಧ್ಯಕ್ಷ ಗುರುರಾಜ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಪ.ಪಂ ಸದಸ್ಯರಾದ ಅಶ್ವಿನಿಕುಮಾರ್, ಸಿಂಥಿಯಾ ಪಕ್ಷದ ಮುಖಂಡರಾದ ಜಯಶೀಲಪ್ಪ, ಎಂ.ಪಿ ಸುರೇಶ, ಪ್ರವೀಣ್, ಜಯನಗರ ಗುರು, ಉಬೇದುಲ್ಲ, ಸುಬ್ರಹ್ಮಣ್ಯ ಉಪಸ್ಥಿತರಿದ್ದರು.